ಇಂದು (ಮಾರ್ಚ್ 11, 2025) ಭಾರತೀಯ ಷೇರುಮಾರುಕಟ್ಟೆಯಲ್ಲಿ ಕರಡಿ ಕುಣಿತವಾಗಿದೆ..ಅಂದರೆ, ಭಾರತೀಯ ಷೇರು ಮಾರುಕಟ್ಟೆಯ ಮೌಲ್ಯ, ಇಂದು ಬೆಳಗ್ಗೆಯಿಂದ ಭಾರಿ ಕುಸಿತ ಕಂಡಿದೆ. ಅಮೆರಿಕದಲ್ಲಿ ಆದ ಬಲವಾದ ಮಾರಾಟದ ಪರಿಣಾಮವಾಗಿ, ಜಾಗತಿಕ ಪೂರೈಕೆ ಸರಪಳಿಗಳ ಮೇಲೆ ಅನಿಶ್ಚಿತತೆ ಉಂಟಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಗಳ ಗೊಂದಲಗಳೂ ಕೂಡ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಇನ್ನು ಇಂದು ಭಾರತೀಯ ಷೇರು ಮಾರುಕಟ್ಟೆ ಮೌಲ್ಯ ತೀವ್ರ ಕುಸಿತ ಕಂಡಿದೆ. ಮಂಗಳವಾರದ ಮುಂಬೈ ಷೇರು ಪೇಟೆಯ ಬಿಎಸ್‌ಇ ಸೆನ್ಸೆಕ್ಸ್ 371.29 ಅಂಕಗಳು (-0.50%) ಕುಸಿದು 73,743.88 ಅಂಕಗಳಿಗೆ ತಲುಪಿದರೆ, ನಿಫ್ಟಿ 50 ಸೂಚ್ಯಂಕ 114.35 ಅಂಕಗಳು (-0.51%) ಕುಸಿದು 22,345.95 ಅಂಕಗಳಲ್ಲಿ ಆರಂಭವಾಗಿ ಏಕಾಏಕಿ ಕುಸಿತ ಕಂಡಿದೆ.
ಇದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿ ಹಾಗೂ ಜಾಗತಿಕ ಪೂರೈಕೆ ಸರಪಳಿಯ ಅಸ್ಥಿರತೆಯ ಪರಿಣಾಮ ಎಂದು ಷೇರು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ಅಟ್ಲಾಂಟಾ ಫೆಡರಲ್ ರಿಸರ್ವ್ ಪ್ರಕಾರ, 2025ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ -2.4% ಕುಸಿಯುವ ನಿರೀಕ್ಷೆಯಿದೆ, ಇದರಿಂದ ಜಾಗತಿಕ ಹೂಡಿಕೆದಾರರ ಆತಂಕ ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ ಅಮೆರಿಕದ ಆರ್ಥಿಕ ನೀತಿಯ ಸ್ಪಷ್ಟತೆ ಹೊರಬರುವವರೆಗೆ ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರಿಯಬಹುದು ಎಂಬುದು ವಿಶ್ಲೇಷಕರ ಅಭಿಪ್ರಾಯ.
ಈ ರೀತಿ ಭಾರಿ ಕುಸಿತದ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಯ ಅನಿಶ್ಚಿತತೆ ಇದೆ.. ಅಂದರೆ ಟ್ರಂಪ್ ಆಡಳಿತವು ಹೊಸ ಆರ್ಥಿಕ ನೀತಿಗಳನ್ನು ಜಾರಿಗೆ ತರಲು ಮುಂದಾಗಿದೆ. ಆದರೆ ಈ ಹೊಸ ಆರ್ಥಿಕ ನೀತಿಯು ಜಾಗತಿಕ ಪೂರೈಕೆ ಸರಪಳಿಗಳಿಗೆ ದೊಡ್ಡ ಹೊಡೆತ ನೀಡಬಹುದು ಎಂದು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದರಿಂದಾಗಿ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಭಾರಿ ಮಾರಾಟದ ಒತ್ತಡ ಉಂಟಾಗಿ ದೊಡ್ಡ ಕುಸಿತ ಕಂಡುಬಂದಿದೆ. ಅದರ ಪರಿಣಾಮ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಿಗೂ ನಕಾರಾತ್ಮಕ ಪರಿಣಾಮ ಬೀರಿದೆ.
ಅಮೆರಿಕ ಮಾರುಕಟ್ಟೆಯ ಕುಸಿತ ಮತ್ತು ಅದರ ಪರಿಣಾಮ:
ಇನ್ನು ನಿನ್ನೆ (ಮಾರ್ಚ್ 10, 2025) ನಾಸ್‌ಡಾಕ್, ಎಸ್ & ಪಿ 500 ಮತ್ತು ಡೌ ಜೋನ್ಸ್ ಸೂಚ್ಯಂಕಗಳು ಭಾರಿ ಕುಸಿತವನ್ನು ಕಂಡಿದ್ದವು. ನಾಸ್‌ಡಾಕ್ % ಇಳಿಕೆಯಾದರೆ, ಎಸ್ & ಪಿ 500 2.7%ಗೆ ಕುಸಿಯಿತು. ಇದರಿಂದ ಅಮೆರಿಕದ ಆರ್ಥಿಕತೆ ಮಂದಗತಿಗೆ ತಿರುಗಬಹುದು ಎಂಬ ಆತಂಕ ಶುರುವಾಗಿ, ಹೂಡಿಕೆದಾರರು ಷೇರುಗಳ ಮಾರಾಟದ ಒತ್ತಡ ಹೆಚ್ಚಾಗಿದೆ. ಇದನ್ನು ಅನುಸರಿಸಿ, ಜಪಾನ್‌ನ ನಿಕ್ಕಿ 225 ಸೂಚ್ಯಂಕ 1.7% ಇಳಿದಿದೆ, ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ 0.93% ಕುಸಿತ ಕಂಡಿದೆ, ತೈವಾನ್ ಮತ್ತು ದಕ್ಷಿಣ ಕೊರಿಯಾದ ಸೂಚ್ಯಂಕಗಳೂ ಶೇಕಡಾ 1.2% - 1.8% ಇಳಿದಿವೆ.
ಭಾರತೀಯ ಷೇರು ಮಾರುಕಟ್ಟೆ ಮೇಲೆ ಹೇಗೆ ಪರಿಣಾಮ ಬೀರಿತು:
ಅಮೆರಿಕದಲ್ಲಿ ನಡೆದ ಬೆಳವಣಿಗೆಗಳಿಂದ ಭಾರತೀಯ ಷೇರು ಮಾರುಕಟ್ಟೆಯ ಮೇಲೂ ಪ್ರಭಾವ ಬೀರಿದೆ. ಅಂದರೆ ಭಾರತೀಯ ಷೇರು ಮಾರುಕಟ್ಟೆಯ ಪ್ರಮುಖ ವಲಯಗಳು ಭಾರಿ ಕುಸಿತವನ್ನು ಅನುಭವಿಸಿವೆ. ಅಮೆರಿಕದ ಆರ್ಥಿಕ ನಿಲುವು ಕುಸಿಯಬಹುದು ಎಂಬ ಆತಂಕದಿಂದಾಗಿ ಐಟಿ ಷೇರುಗಳಾದ ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಷೇರುಗಳು ಶೇಕಡಾ 1.5% ಕ್ಕಿಂತ ಹೆಚ್ಚು ಇಳಿದವು.
ಜಾಗತಿಕ ಬೇಡಿಕೆ ಕುಗ್ಗಬಹುದು ಎಂಬ ಆತಂಕದಿಂದ ಲೋಹ ಮತ್ತು ಉಕ್ಕಿನ ಉದ್ಯೋಮಕ್ಕೂ ಹೆಚ್ಚು ಪರಿಣಾಮ ಬೀರಿದಂತಾಯಿತು. ಅಂದರೆ ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯು ಸ್ಟೀಲ್ ಷೇರುಗಳು 2% ಕ್ಕಿಂತ ಹೆಚ್ಚು ಕುಸಿದವು. ಹಾಗೆಯೇ ಬ್ಯಾಂಕಿಂಗ್ ಷೇರುಗಳಾದ ನಿಫ್ಟಿ ಬ್ಯಾಂಕ್ ಸೂಚ್ಯಂಕ 0.7% ಇಳಿದಿದ್ದು, ಇಂಡಸ್‌ಇಂಡ್ ಬ್ಯಾಂಕ್ ಶೇಕಡಾ 20% ಕುಸಿಯುವ ಮೂಲಕ ಅತ್ಯಂತ ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ.
ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ನಿಫ್ಟಿ 50 ಸೂಚ್ಯಂಕದಲ್ಲಿರುವ ಕೇವಲ 5 ಷೇರುಗಳು ಲಾಭದೊಂದಿಗೆ ತೆರೆದರೆ, ಉಳಿದ 45 ಷೇರುಗಳು ತೀವ್ರ ಮಾರಾಟದ ಒತ್ತಡಕ್ಕೆ ಒಳಗಾದವು. ಜಾಗತಿಕ ಆರ್ಥಿಕ ಅಸ್ಥಿರತೆ, ಅಮೆರಿಕದ ವಾಣಿಜ್ಯ ನೀತಿಗಳ ಭದ್ರತೆ ಕೊರತೆ, ಹಾಗೂ ಭಾರತೀಯ ಹೂಡಿಕೆದಾರರ ನಂಬಿಕೆಯ ಹಿನ್ನಡೆಯು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.
ಮಾರುಕಟ್ಟೆ ತಜ್ಞರ ಅಭಿಪ್ರಾಯ:
ಇನ್ನು ಷೇರು ಮಾರುಕಟ್ಟೆ ಕುಸಿತದ ಬಗ್ಗೆ ಮಾರುಕಟ್ಟೆ ತಜ್ಞ ಅಜಯ್ ಬಗ್ಗಾ ಅವರು ಪ್ರತಿಕ್ರಿಯಿಸಿದ್ದಾರೆ. ಅಮೆರಿಕದ ಆರ್ಥಿಕ ನೀತಿಯ ಬಗ್ಗೆ ಬಹಳಷ್ಟು ಅನುಮಾನಗಳು ಇವೆ. ಅಮೆರಿಕದ ಜಿಡಿಪಿ (-2.4%) ಶೇಕಡಾ ಕುಸಿಯಬಹುದು ಎಂಬ ಅಟ್ಲಾಂಟಾ ಫೆಡ್ ಮುನ್ಸೂಚನೆಯು ಮಾರುಕಟ್ಟೆ ಹೂಡಿಕೆದಾರರನ್ನು ಆತಂಕಕ್ಕೆ ಒಳಪಡಿಸಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಟ್ರಂಪ್ ಆಡಳಿತವು ಕೆಲವು ದೊಡ್ಡ ನಿರ್ಧಾರಗಳನ್ನು ತಗೊಳ್ಳುತ್ತಿದೆ. ಆದರೆ ಅವುಗಳ ಪರಿಣಾಮಗಳ ಬಗ್ಗೆ ಸಂಪೂರ್ಣ ವಿಶ್ಲೇಷಣೆ ಇಲ್ಲ. ಈ ಕಾರಣದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಗೊಂದಲ ಉಂಟಾಗಿದೆ ಎಂದು ಅವರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಅಮೆರಿಕದ ಷೇರು ಮಾರುಕಟ್ಟೆಯ ಕುಸಿತದಿಂದ ಭಾರತೀಯ ಮಾರುಕಟ್ಟೆಯೂ ಕುಸಿತ ಕಂಡಿದೆ. ಇತ್ತ ಟ್ರಂಪ್ ಆಡಳಿತದ ಆರ್ಥಿಕ ನೀತಿ ಬಗ್ಗೆ ತಜ್ಞರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಭಾರತದ ಐಟಿ, ಲೋಹ ಮತ್ತು ಬ್ಯಾಂಕಿಂಗ್ ಷೇರುಗಳು ಹೆಚ್ಚು ನಷ್ಟ ಅನುಭವಿಸಿದ್ದು, ಮುಂದಿನ ಕೆಲವು ತಿಂಗಳು ಹೂಡಿಕೆದಾರರಿಗೆ ನಿರ್ಧಾರಕಾರಿ ಅವಧಿಯಾಗಬಹುದು ಎನ್ನಲಾಗಿದೆ. ಅಲ್ಲದೇ ಈಗ ಹೂಡಿಕೆದಾರರು ಸ್ಮಾರ್ಟ್ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯ, ಮಾರುಕಟ್ಟೆ ಚಲನವಲನಗಳ ಬಗ್ಗೆ ಎಚ್ಚರಿಕೆ ಇರಬೇಕು.
ಷೇರು ಮಾರು ಎಂದರೆ ಕಂಪನಿಗಳ ಷೇರುಗಳು ಖರೀದಿಸಲಾಗುವ, ಮಾರಾಟವಾಗುವ, ಮತ್ತು ವಹಿವಾಟು ನಡೆಯುವ ಒಂದು ವೇದಿಕೆಯಾಗಿದೆ. ಇದು ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಡುವ ಒಂದು ಪ್ರಮುಖ ಭಾಗವಾಗಿದ್ದು, ಇಲ್ಲಿ ನಾನಾ ಪ್ರಕಾರಗಳಿವೆ. ಅವುಗಳಲ್ಲಿ ಪ್ರಾಥಮಿಕ ಮಾರುಕಟ್ಟೆ..ಅಂದರೆ ಹೊಸ ಕಂಪನಿಗಳು ತಮ್ಮ ಷೇರುಗಳನ್ನು ಪ್ರಥಮ ಬಾರಿಗೆ ಸಾರ್ವಜನಿಕರಿಗೆ ನೀಡುವ ಸ್ಥಳ. ದ್ವಿತೀಯ ಮಾರುಕಟ್ಟೆ ಅಂದರೆ ಹೂಡಿಕೆದಾರರು ತಮ್ಮ ಷೇರುಗಳನ್ನು ಪರಸ್ಪರ ವಹಿವಾಟು ಮಾಡುವ ಮಾರುಕಟ್ಟೆಯಾಗಿದೆ.
ಭಾರತದ ಪ್ರಮುಖ ಷೇರು ಮಾರುಕಟ್ಟೆ ಸೂಚ್ಯಂಕಗಳೆಂದು ಬಿಎಸ್‌ಇ, ಎನ್‌ಎಸ್‌ಇ ಎಂದು ಗುರುತಿಸಲಾಗಿದೆ. ಬಿಎಸ್‌ಇಯಡಿ ಏಷ್ಯಾದ ಪ್ರಾಚೀನ ಷೇರು ಮಾರುಕಟ್ಟೆ, 30 ಪ್ರಮುಖ ಕಂಪನಿಗಳನ್ನೊಳಗೊಂಡ ಸೆನ್ಸೆಕ್ಸ್ ಸೂಚ್ಯಂಕ ಹೊಂದಿದೆ. ಹಾಗೆಯೇ ಎನ್‌ಎಸ್‌ಇ ಅಡಿ 50 ಪ್ರಮುಖ ಷೇರುಗಳನ್ನು ಒಳಗೊಂಡ ನಿಫ್ಟಿ 50 ಸೂಚ್ಯಂಕ ಇದರಲ್ಲಿ ಇದೆ.
ಉದ್ದೇಶಪೂರಿತ ಹೂಡಿಕೆ ಮತ್ತು ಉತ್ತಮ ಲಾಭ ನೀಡುವುದೇ ಷೇರು ಮಾರುಕಟ್ಟೆಯ ಪ್ರಮುಖ ಅಂಶವಾಗಿದೆ. ಆದರೆ ಇದು ಕೊಂಚ ಅಪಾಯವನ್ನೂ ಎದುರಿಸುತ್ತದೆ. ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ಪೂರೈಕೆ ಷೇರುಗಳ ಬೆಲೆಯನ್ನು ನಿರ್ಧರಿಸುತ್ತದೆ.ದೇಶದ ಆರ್ಥಿಕತೆಯ ಬೆಳವಣಿಗೆ ಮತ್ತು ತಾರತಮ್ಯ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತದೆ. ಇಂದು ಷೇರು ಮಾರುಕಟ್ಟೆಯು ಜಾಗತಿಕ ಹಾಗೂ ಸ್ಥಳೀಯ ಆರ್ಥಿಕ ಬೆಳವಣಿಗೆ, ರಾಜಕೀಯ ತೀವ್ರತೆ, ಹಾಗೂ ಬಡ್ಡಿದರ ಪರಿವರ್ತನೆಗಳಿಗೆ ಪ್ರತಿಕ್ರಿಯೆ ನೀಡುತ್ತದೆ. ಹೀಗಾಗಿ, ಜಾಣಮತಿ ಹೂಡಿಕೆ ಮತ್ತು ಸಮರ್ಥ ತಂತ್ರಗಳನ್ನು ಅನುಸರಿಸುವುದು ಆರ್ಥಿಕ ಯಶಸ್ಸಿಗೆ ಪ್ರಮುಖವಾಗಿದೆ. ಹೂಡಿಕೆಯ ಮುನ್ನ ಹೊಸ ಕಂಪನಿಗಳ ಹಿನ್ನೆಲೆ, ಸಾಧನೆ, ಭವಿಷ್ಯದ ಯೋಜನೆಗಳನ್ನು ಅರಿಯುವುದು ಬಹುಮುಖ್ಯವಾದ ಅಂಶವಾಗಿದೆ. ಮಾರುಕಟ್ಟೆಯ ಸ್ಥಿತಿಗತಿಗಳನ್ನು ವಿಶ್ಲೇಷಿಸಿ ಬಂಡವಾಳ ಹೂಡಿಕೆ ಮಾಡುವುದು ಉತ್ತಮ.


Click it and Unblock the Notifications