ಚಿನ್ನದ ಬೆಲೆ ದಿನೇ ದಿನೇ ಏರಿಕೆ ಕಾಣುತ್ತಿದೆ (Gold Price). ಈಗಾಗಲೇ 10 ಗ್ರಾಂ ಚಿನ್ನದ ಬೆಲೆ ಒಂದು ಲಕ್ಷ ಗಡಿದಾಟಿದೆ. ಆದರೆ ಈ ಬೆಳವಣಿಗೆಗಳ ಮಧ್ಯೆ ಭಾರತವು ಹೊಸ ಹೆಜ್ಜೆ ಇಟ್ಟಿದೆ. ಆಂಧ್ರಪ್ರದೇಶದ (Andhra Pradesh) ಕುರ್ನೂಲ್ ಜಿಲ್ಲೆಯ ಜೊನ್ನಗಿರಿ (Jonnagiri) ಬಳಿ ಭಾರತದ ಮೊದಲ ಬೃಹತ್ ಖಾಸಗಿ ಚಿನ್ನದ ಗಣಿ (India'a First Large Private Gold Mine) ಆರಂಭವಾಗಲಿದೆ. ಸ್ವಾತಂತ್ರ್ಯದ ನಂತರ ಖಾಸಗಿ ಕಂಪನಿಯೊಂದರಿಂದ ಇಂತಹ ದೊಡ್ಡ ಮಟ್ಟದ ಚಿನ್ನದ ಗಣಿಗಾರಿಕೆ ಇದೇ ಮೊದಲ ಬಾರಿಗೆ ದೇಶದಲ್ಲಿ ನಡೆಯುತ್ತಿರುವುದು ವಿಶೇಷ.

ಹೌದು, ಆಂಧ್ರಪ್ರದೇಶದ ಜೊನ್ನಗಿರಿ ಬಳಿ ಭಾರತದ ಮೊದಲ ಬೃಹತ್ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲೇ ಪೂರ್ಣ ಪ್ರಮಾಣದ ಉತ್ಪಾದನೆ ಆರಂಭಿಸಲು ಸಜ್ಜಾಗಿದೆ. ಈಗಾಗಲೇ ಸಿದ್ಧತೆ ನಡೆಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಉತ್ಪಾದನಾ ಕಾರ್ಯ ಶುರುವಾಗಲಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಹೊಸ ಚಿನ್ನದ ಗಣಿ
ಜಿಯೋಮೈಸೂರ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ಈ ಯೋಜನೆಯಲ್ಲಿ DGML ಪಾಲು ಹೊಂದಿದೆ ಎನ್ನಲಾಗುತ್ತಿದೆ. ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಪರಿಸರ ಇಲಾಖೆಯಿಂದ ಅನುಮೋದನೆ ಪಡೆದಿದ್ದು, ರಾಜ್ಯ ಸರ್ಕಾರದ ಅನುಮತಿಗಳಿಗಾಗಿ ಕಾಯಲಾಗುತ್ತಿದೆ.
"ಸದ್ಯ ಈ ಯೋಜನೆಯ ಆರಂಭದ ಕಾರ್ಯ ನಡೆಯುತ್ತಿದೆ. ಪ್ರಸ್ತುತ ಪ್ಲಾಂಟ್‌ನ ತಂತ್ರಜ್ಞಾನದ ಮೇಲೆ ಕೆಲಸ ಮಾಡಲಾಗುತ್ತಿದೆ. ಪೂರ್ಣ ಪ್ರಮಾಣದ ಉತ್ಪಾದನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ" ಎಂದು ಪ್ರಸಾದ್ ಸಿಐಐ ಇಂಡಿಯಾ ಮೈನಿಂಗ್ ಸಮ್ಮಿಟ್ 2025 ರ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ತಿಳಿಸಿದರು.
ಒಮ್ಮೆ ಸ್ಥಿರಗೊಂಡ ನಂತರ, ಜೊನ್ನಗಿರಿ ಗಣಿಯಿಂದ ವಾರ್ಷಿಕ 750 ಕೆಜಿ ಚಿನ್ನ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಇದು ಎರಡು-ಮೂರು ವರ್ಷಗಳಲ್ಲಿ 1,000 ಕೆಜಿಗೆ ಹೆಚ್ಚಳವಾಗಲಿದೆ. ಪ್ರಸಾದ್ ಅವರು, "ಪ್ರಸ್ತುತ ಭಾರತದ ಚಿನ್ನದ ಉತ್ಪಾದನೆ 1.5 ಟನ್ ಆಗಿದೆ. ನಮ್ಮ ಗಣಿ ಆರಂಭವಾದ ನಂತರ, ಸುಮಾರು ಒಂದು ಟನ್ ಹೆಚ್ಚುವರಿ ಉತ್ಪಾದನೆ ಸೇರ್ಪಡೆಯಾಗಲಿದೆ," ಎಂದರು.
ವಾರ್ಷಿಕ 500 ಕೆ.ಜಿ. ಚಿನ್ನದ ಉತ್ಪಾದನೆ:
ಆಂಧ್ರಪ್ರದೇಶದ ಈ ಯೋಜನೆಯಿಂದ ಆರಂಭದಲ್ಲಿ ಪ್ರತಿ ವರ್ಷ 500 ಕೆ.ಜಿ. ಚಿನ್ನ ಉತ್ಪಾದನೆಯಾಗಲಿದೆ ಎಂದು ಹೇಳಲಾಗಿದೆ. ಕ್ರಮೇಣ ಇದನ್ನು ವಾರ್ಷಿಕ 1 ಟನ್‌ಗೆ ಹೆಚ್ಚಿಸುವ ಗುರಿಯಿದೆ. ಪ್ರಸ್ತುತ ಭಾರತದಲ್ಲಿ ವರ್ಷಕ್ಕೆ ಕೇವಲ 1.5 ಟನ್ ಚಿನ್ನ ಉತ್ಪಾದನೆಯಾಗುತ್ತಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಈ ಗಣಿ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾದ್ರೆ, ಮುಂದಿನ 15 ವರ್ಷಗಳ ಕಾಲ ವರ್ಷಕ್ಕೆ 1 ಸಾವಿರ ಕೆ.ಜಿ.ಯಷ್ಟು ಚಿನ್ನ ಉತ್ಪಾದಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆಯಿಂದ ಭಾರತದ ಚಿನ್ನದ ಉತ್ಪಾದನೆ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ.
ಭಾರತವು ಪ್ರತಿ ವರ್ಷ ಸುಮಾರು 1,000 ಟನ್ ಚಿನ್ನವನ್ನು ಅಗತ್ಯಕ್ಕೆ ಬೇಕಾದಂತೆ ಆಮದು ಮಾಡಿಕೊಳ್ಳುತ್ತದ. ದೇಶದಲ್ಲಿ ತೈಲವನ್ನು ಅತೀ ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತದೆ. ತೈಲದ ನಂತರ ಎರಡನೇ ಅತಿದೊಡ್ಡ ಆಮದು ವಸ್ತುವೆಂದರೆ ಅದು ಚಿನ್ನ.
ಇನ್ನು 2003 ರಲ್ಲಿ ಸ್ಥಾಪಿತವಾದ DGML, ಭಾರತದ ಏಕೈಕ ಪಟ್ಟಿಮಾಡಿದ ಚಿನ್ನದ ಪರಿಶೋಧನಾ ಕಂಪನಿಯಾಗಿದೆ. ಈ ಕಂಪನಿ ಭಾರತದಾದ್ಯಂತ ವಿಸ್ತರಿಸಿದ್ದು, ಅಲ್ಲದೇ ಕಿರ್ಗಿಸ್ತಾನ್, ಫಿನ್‌ಲ್ಯಾಂಡ್ ಮತ್ತು ಟಾಂಜಾನಿಯಾದಲ್ಲಿ ಆಸ್ತಿಗಳನ್ನು ಹೊಂದಿದೆ.


Click it and Unblock the Notifications