ಭಾರತದ ಬಾಹ್ಯಾಕಾಶ ಕ್ಷೇತ್ರವು ಹೊಸ ಉತ್ತುಂಗಕ್ಕೇರುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್‌ಅಪ್‌ಗಳಿಗೆ ಸಹಾಯ ಮಾಡಲು 1,000 ಕೋಟಿ ರೂ ವೆಂಚರ್ ಕ್ಯಾಪಿಟಲ್ ಫಂಡ್ ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
ಬಾಹ್ಯಾಕಾಶ ತಂತ್ರಜ್ಞಾನವನ್ನು ಉತ್ತೇಜಿಸಲು ಸರ್ಕಾರವು ವೆಂಚರ್ ಕ್ಯಾಪಿಟಲ್ ಫಂಡ್ ಸ್ಥಾಪಿಸುವ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25 ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದರು. ಇದೀಗ ಈ ಫಂಡ್ ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡುವ ಮೂಲಕ ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸಲು ಸಹಾಯಕವಾಗಲಿದೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು ಈ ನಿಧಿಯು ಬಾಹ್ಯಾಕಾಶ ವಲಯದಲ್ಲಿ ಸುಮಾರು 40 ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸುವ ನಿರೀಕ್ಷೆಯಿದೆ ಮತ್ತು ಖಾಸಗಿ ಬಾಹ್ಯಾಕಾಶ ಉದ್ಯಮದ ಬೆಳವಣಿಗೆಯನ್ನು ಉತ್ತೇಜಿಸುವ ನಿರೀಕ್ಷೆ ಇದೆ.
ವೆಂಚರ್ ಕ್ಯಾಪಿಟಲ್ ಫಂಡ್
ವೆಂಚರ್ ಕ್ಯಾಪಿಟಲ್ ಫಂಡ್ (ಸಾಹಸೋದ್ಯಮ ಬಂಡವಾಳ ನಿಧಿ) ಭಾರತದ ಬೆಳೆಯುತ್ತಿರುವ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬುವ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ನಿಧಿಯು ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ತೊಡಗಿರುವ ಹೊಸ ಸ್ಟಾರ್ಟ್‌ಅಪ್‌ಗಳು /ಕಂಪನಿಗಳಿಗೆ ಬೇಕಾದ ಹಣಕಾಸಿನ ಬೆಂಬಲವನ್ನು ನೀಡುತ್ತದೆ. ಇದರ ಮೂಲಕ, ಭಾರತೀಯ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಎತ್ತರಗಳನ್ನು ಸಾಧಿಸಲು ಸಾಧ್ಯವಾಗುತ್ತದೆ.
ಈ ಯೋಜನೆಯು ಭಾರತವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಆವಿಷ್ಕಾರ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ದೇಶವನ್ನಾಗಿ ಮಾಡುವ ಸರ್ಕಾರದ ದೂರದೃಷ್ಟಿಗೆ ಪ್ರಮುಖ ಮೈಲುಗಲ್ಲಾಗಿದೆ . ಉಪಗ್ರಹ ಅಭಿವೃದ್ಧಿ, ತಂತ್ರಜ್ಞಾನ, ಉಡಾವಣೆ ಮತ್ತು ಬಾಹ್ಯಾಕಾಶ ಸಂಶೋಧನೆಯಂತಹ ವಿವಿಧ ಕ್ಷೇತ್ರಗಳಲ್ಲಿ ಖಾಸಗಿ ಕಂಪನಿಗಳನ್ನು ತೊಡಗಿಸಿಕೊಳ್ಳುವ ಸೇರಿದಂತೆ ವಿವಿಧ ಅಂಶಗಳ ಮೇಲೆ ಈ ವೆಂಚರ್ ಕ್ಯಾಪಿಟಲ್ ಫಂಡ್ ಕೇಂದ್ರೀಕರಿಸುತ್ತದೆ. ಖಾಸಗಿ ವಲಯದ ಸಹಭಾಗಿತ್ವವನ್ನು ಪ್ರೋತ್ಸಾಹಿಸುವ ಮೂಲಕ, ಭಾರತೀಯ ಉದ್ಯಮಿಗಳು ಮತ್ತು ವಿಜ್ಞಾನಿಗಳ ಸೃಜನಶೀಲತೆ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಬಳಸಿಕೊಳ್ಳುವ ಗುರಿಯನ್ನು ಸರ್ಕಾರ ಹೊಂದಿದೆ.
ರೂ 1,000 ಕೋಟಿ ಈ ಫಂಡ್ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಗಮನಾರ್ಹ ಪ್ರಗತಿಯ ವೇಗವನ್ನು ಹೆಚ್ಚಿಸುತ್ತದೆ, ವೈಜ್ಞಾನಿಕ ಆವಿಷ್ಕಾರ ಮತ್ತು ವಾಣಿಜ್ಯ ಅವಕಾಶಗಳಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಇದು ವಿಶೇಷವಾಗಿ ಹೈಟೆಕ್ ವಲಯಗಳಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತದೆ.
ಈ ಫಂಡ್ ನ ನಿಯೋಜನೆಯು ಕಾರ್ಯಾಚರಣೆ ಆರಂಭವಾದ ದಿನದಿಂದ ಮುಂದಿನ 5 ವರ್ಷಗಳ ಕಾಲ ನಡೆಯಲಿದೆ. ಈ ಯೋಜನೆಗೆ ಪ್ರತಿ ವರ್ಷ ಸರಾಸರಿ 150 ರಿಂದ 250 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ ಎಂದು ಕೇಂದ್ರ ಹೇಳಿದ್ದು ಮೊದಲ ಹಣಕಾಸು ವರ್ಷ (2025-26)ದಲ್ಲಿ 150 ಕೋಟಿ ರೂಪಾಯಿ ನಿಧಿ, ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ವರ್ಷ 250 ಕೋಟಿ ರೂಪಾಯಿ ಮಂಜೂರು ಮಾಡಲಾಗುತ್ತದೆ. ಅಂತಿಮ ವರ್ಷದಲ್ಲಿ 100 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ.
ಭಾರತದ ಬಾಹ್ಯಾಕಾಶ ಕ್ಷೇತ್ರ ಮುಂದಿನ 10 ವರ್ಷಗಳಲ್ಲಿ ಬಹಳ ಬೆಳೆಯಲಿದೆ. ಈಗ ಈ ಕ್ಷೇತ್ರದ ಮೌಲ್ಯ ಸುಮಾರು 8.4 ಬಿಲಿಯನ್ ಡಾಲರ್ ಆಗಿದ್ದರೆ, ಮುಂದಿನ 10 ವರ್ಷಗಳಲ್ಲಿ ಇದು 44 ಬಿಲಿಯನ್ ಡಾಲರ್‌ಗೆ ಏರಬಹುದು. ಇದರರ್ಥ ಭಾರತದ ಪಾಲು ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ 2% ರಿಂದ 8% ಕ್ಕೆ ಹೆಚ್ಚಾಗಲಿದೆ.


Click it and Unblock the Notifications