ಬೆಂಗಳೂರು, ಆಗಸ್ಟ್ 14: ಕೇಂದ್ರ ಸರ್ಕಾರ ನೀಡಿರುವ ಅಂಕಿಅಂಶಗಳ ಪ್ರಕಾರ ಜುಲೈನಲ್ಲಿ ದೇಶದ ಸಗಟು ಹಣದುಬ್ಬರವು ಅಂದರೆ ಹೋಲ್ ಸೇಲ್ ಹಣದುಬ್ಬರ ಶೇಕಡಾ 2.04 ಕ್ಕೆ ಇಳಿಕೆ ಕಂಡಿದೆ. ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಜೂನ್‌ನಲ್ಲಿ ಶೇಕಡಾ 3.36 ರಷ್ಟಿತ್ತು.
ಪ್ರಮೋಶನ್ ಆಫ್ ಇಂಡಸ್ಟ್ರಿ ಮತ್ತು ಇಂಟರನಲ್ ಟ್ರೇಡ್ ಇಲಾಖೆ (DPIIT) ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ವಾರ್ಷಿಕ ಆಧಾರದಲ್ಲಿ ಹಣದುಬ್ಬರವು ಶೇ. 2.04ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದೆ. ಆದರೆ ಇಂಧನ ಮತ್ತು ಶಕ್ತಿ ವಿಭಾಗಕ್ಕೆ ಸಂಬಂಧಿಸಿದ ಹಣದುಬ್ಬರ ಜೂನ್ ನಲ್ಲಿ 1.03 ಶೇಕಡಾ ಇದ್ದಿದ್ದು ಜುಲೈನಲ್ಲಿ ಶೇ. 1.72ಕ್ಕೆ ಏರಿಕೆಯಾಗಿದೆ. ಇನ್ನು ಉತ್ಪಾದನಾ ವಲಯದದಲ್ಲಿ ಜೂನ್ ನಲ್ಲಿ 1.43 ಶೇಕಡಾ ಇದ್ದಿದ್ದು ಜುಲೈನಲ್ಲಿ ಶೇ. 1.58 ಕ್ಕೆ ಏರಿಕೆಯಾಗಿದೆ.

ಚಿಲ್ಲರೆ ಹಣದುಬ್ಬರ ಏನು ಹೇಳಿತ್ತು?
ಜುಲೈ ತಿಂಗಳಲ್ಲಿ ಭಾರತದ ರೀಟೇಲ್ ಹಣದುಬ್ಬರ ದರ ಶೇ. 3.5ರಷ್ಟಿತ್ತು. ಜೂನ್ ತಿಂಗಳಲ್ಲಿ ಈ ಹಣದುಬ್ಬರ ಶೇ. 5.1ಕ್ಕೆ ಏರಿತ್ತು. ಆರ್ಬಿಐನ ಹಣದುಬ್ಬರ ಗುರಿಯಾದ ಶೇ. 4ಕ್ಕಿಂತ ಕಡಿಮೆ ಮಟ್ಟಕ್ಕೆ ಅದು ಇಳಿದಿತ್ತು. ಕಳೆದ 5 ವರ್ಷದಲ್ಲೇ ಇದು ಅತಿ ಕಡಿಮೆ ಹಣದುಬ್ಬರ ದರವಾಗಿತ್ತು.
ಜುಲೈನಿಂದ ಸೆಪ್ಟಂಬರ್ವರೆಗಿನ ತ್ರೈಮಾಸಿಕದಲ್ಲಿ ಹಣದುಬ್ಬರ ಶೇ. 4.4ರಷ್ಟಿರಬಹುದು ಎಂದು ಆರ್ಬಿಐ ಅಂದಾಜು ಮಾಡಿತ್ತು. ಆದರೆ, ವಾಸ್ತವದಲ್ಲಿ ಹಣದುಬ್ಬರ ಈ ಅವಧಿಯಲ್ಲಿ ಇನ್ನೂ ಕಡಿಮೆಯಾಗುವ ಸಾಧ್ಯತೆ ಇದೆ.
ಹಣದುಬ್ಬರ ಎಂದರೇನು ಲೆಕ್ಕ ಹಾಕುವುದು ಹೇಗೆ?
ದೇಶದ ಜನರು ಬಳಸುವ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಆಗುವ ವ್ಯತ್ಯಯವನ್ನು ದಾಖಲಿಸುತ್ತದೆ ಈ ಹಣದುಬ್ಬರ. ಆಹಾರ ವಸ್ತುಗಳಿಂದ ಹಿಡಿದು ಪೆಟ್ರೋಲ್, ಡೀಸಲ್ವರೆಗೆ ವಿವಿಧ ಉತ್ಪನ್ನಗಳ ಬೆಲೆ ಏರಿಕೆ ಅಥವಾ ಇಳಿಕೆಯನ್ನು ಈ ಹಣದುಬ್ಬರ ಪ್ರತಿಫಲಿಸುತ್ತದೆ. ಕೆಲ ನಿರ್ದಿಷ್ಟ ಉತ್ಪನ್ನಗಳನ್ನು ಈ ಲೆಕ್ಕಾಚಾರಕ್ಕೆ ಬಳಸಲಾಗುತ್ತದೆ. ಅಗತ್ಯ ವಸ್ತುಗಳ ಬೆಲೆಗಳಲ್ಲಿ ಆಗುವ ಬದಲಾವಣೆ ಇಲ್ಲಿ ಪ್ರಮುಖ ಮಾನದಂಡವಾಗುತ್ತದೆ. ದೈನಂದಿನ ಜೀವನದ ಖರ್ಚು ವೆಚ್ಚಗಳ ನಿರ್ವಹಣೆ ಮೇಲೆ ಇದು ಪರಿಣಾಮ ಬೀರುತ್ತದೆ. ಪ್ರತಿಯೊಂದು ಕುಟುಂಬ ಒಂದು ಬಜೆಟ್ ರೂಪಿಸಿಕೊಳ್ಳಲು ನೆರವಾಗುತ್ತದೆ.
ಯಾವ ಮಾನದಂಡ?
-ಸಗಟು ಬೆಲೆ ಸೂಚ್ಯಂಕ (WPI) - ಇದನ್ನು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಅಂದಾಜು ಮಾಡುತ್ತದೆ ಮತ್ತು ಮಾಸಿಕ ಆಧಾರದ ಮೇಲೆ ಅಳೆಯಲಾಗುತ್ತದೆ.
-ಗ್ರಾಹಕ ಬೆಲೆ ಸೂಚ್ಯಂಕ (CPI) - ಪೂರ್ವನಿರ್ಧರಿತ ಸರಕುಗಳಲ್ಲಿ ಪ್ರತಿ ಉತ್ಪನ್ನಕ್ಕೆ ಬೆಲೆ ಬದಲಾವಣೆಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಅವುಗಳನ್ನು ಸರಾಸರಿ ಮಾಡುವ ಮೂಲಕ ಇದನ್ನು ಲೆಕ್ಕಹಾಕಲಾಗುತ್ತದೆ.
-ಉತ್ಪಾದಕರ ಬೆಲೆ ಸೂಚ್ಯಂಕ - ಇದು ದೇಶೀಯ ಉತ್ಪಾದಕರು ತಮ್ಮ ಉತ್ಪಾದನೆಗಾಗಿ ಸ್ವೀಕರಿಸಿದ ಕಾಲಾನಂತರದಲ್ಲಿ ಮಾರಾಟದ ಬೆಲೆಗಳಲ್ಲಿನ ಸರಾಸರಿ ಬದಲಾವಣೆಯ ಅಳತೆಯಾಗಿದೆ.
-ಸರಕು ಬೆಲೆ ಸೂಚ್ಯಂಕಗಳು - ಇದು ಸ್ಥಿರ-ತೂಕದ ಸೂಚ್ಯಂಕ ಅಥವಾ (ತೂಕದ) ಆಯ್ದ ಸರಕು ಬೆಲೆಗಳ ಸರಾಸರಿ, ಇದು ಸ್ಪಾಟ್ ಅಥವಾ ಫ್ಯೂಚರ್ಸ್ ಬೆಲೆಯನ್ನು ಆಧರಿಸಿರಬಹುದು.
ಈ ರೀತಿಯ ಮಾದರಿಗಳನ್ನು ಬಳಕೆ ಮಾಡಿಕೊಂಡು ಹಣದುಬ್ಬರ ಲೆಕ್ಕ ಹಾಕಲಾಗುತ್ತದೆ. ಚಿಲ್ಲರೆ ಹಂದುಬ್ಬರ ಮತ್ತು ಸಗಟಡು ಹಣದುಬ್ಬರದಲ್ಲಿನ ವ್ಯತ್ಯಾಸ ನಮ್ಮ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ.


Click it and Unblock the Notifications