ನಾಗರಿಕ ವಿಮಾನಯಾನ ಸಚಿವಾಲಯ ಇಂಡಿಗೋ ಏರ್‌ಲೈನ್‌ಗೆ ತೀವ್ರ ಎಚ್ಚರಿಕೆ ನೀಡಿ, ಎಲ್ಲಾ ಬಾಕಿ ಉಳಿದಿರುವ ಪ್ರಯಾಣಿಕರ ಮರುಪಾವತಿಗಳನ್ನು ಡಿಸೆಂಬರ್ 7, 2025, ಭಾನುವಾರ ರಾತ್ರಿ 8 ಗಂಟೆಯೊಳಗೆ ಸಂಪೂರ್ಣವಾಗಿ ನೀಡಬೇಕು ಎಂದು ಸ್ಪಷ್ಟ ಆದೇಶ ಹೊರಡಿಸಿದೆ. ವಿಮಾನ ರದ್ದುಗೊಂಡಿದ್ದರೂ, ವಿಳಂಬವಾದರೂ ಅಥವಾ ವೇಳಾಪಟ್ಟಿ ಅಸ್ತವ್ಯಸ್ತವಾದರೂ, ಸಂಬಂಧಿಸಿದ ಪ್ರತಿಯೊಂದು ಮರುಪಾವತಿಯನ್ನೂ ತಪ್ಪದೇ ಈ ಗಡುವಿನೊಳಗೆ ಪೂರ್ಣಗೊಳಿಸಬೇಕು ಎಂದು ಸಚಿವಾಲಯ ಕಟ್ಟುನಿಟ್ಟಾಗಿ ತಿಳಿಸಿದೆ. ಜೊತೆಗೆ, ಪ್ರಯಾಣಿಕರ ಯೋಜನೆಗೆ ವ್ಯತ್ಯಯ ಉಂಟಾದ ಕಾರಣಕ್ಕೆ ಯಾವುದೇ ರೀ-ಶೆಡ್ಯೂಲಿಂಗ್ ಶುಲ್ಕ ವಸೂಲಿ ಮಾಡಬಾರದು ಎಂದು ಏರ್‌ಲೈನ್‌ಗಳಿಗೆ ಸೂಚನೆ ನೀಡಲಾಗಿದೆ.

ಇಂಡಿಗೋ ಕಳೆದ ಎರಡು ದಿನಗಳಲ್ಲಿ, ವಿಶೇಷವಾಗಿ ಶನಿವಾರ, ದೆಹಲಿ-ಮುಂಬೈ ಮಾರ್ಗದಲ್ಲಿ 200ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಪಡಿಸಿದ್ದರಿಂದ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಪೈಲಟ್ ಹಾಗೂ ಸಿಬ್ಬಂದಿ ವಿಶ್ರಾಂತಿ ನಿಯಮಗಳಿಗೆ ಸಂಬಂಧಿಸಿದ ಅಡಚಣೆ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ಕಾರಣಕ್ಕೆ ಸಚಿವಾಲಯ ಈಗ ಕಠಿಣ ನಿಲುವು ತೆಗೆದುಕೊಂಡಿದೆ.
ಪ್ರಯಾಣಿಕರ ನೆರವು ಮತ್ತು ಮರುಪಾವತಿ ಸೆಲ್:
ಯಾವುದೇ ರೀತಿಯ ವಿಳಂಬವಾಗದಂತೆ ಮಾಡಲು, ಇಂಡಿಗೋಗೆ ಪ್ರತ್ಯೇಕ ಪ್ರಯಾಣಿಕರ ನೆರವು ಮತ್ತು ಮರುಪಾವತಿ ಸೆಲ್‌ಗಳನ್ನು ತಕ್ಷಣ ರಚಿಸಲು ಆದೇಶಿಸಲಾಗಿದೆ. ಈ ತಂಡಗಳು ನೇರವಾಗಿ ಪ್ರಯಾಣಿಕರೊಂದಿಗೆ ಸಂಪರ್ಕಿಸಿ, ಹಣ ಮರುಪಾವತಿ ಮಾಡುವುದು, ಬದಲಿಗೆ ಪ್ರಯಾಣ ಸೌಲಭ್ಯ ಒದಗಿಸುವುದು ಹಾಗೂ ಅನಗತ್ಯವಾಗಿ ಮತ್ತೆ-ಮತ್ತೆ ಸಂಪರ್ಕಿಸಬೇಕಾದ ತೊಂದರೆ ತಪ್ಪಿಸುವ ಜವಾಬ್ದಾರಿ ಹೊಂದಿರುತ್ತವೆ. ಪ್ರಸ್ತುತ ಇರುವ ಸ್ವಯಂ-ಮರುಪಾವತಿ ವ್ಯವಸ್ಥೆಯೂ ವಿಮಾನಗಳ ವೇಳಾಪಟ್ಟಿ ಸಂಪೂರ್ಣ ಸ್ಥಿರವಾಗುವವರೆಗೂ ಮುಂದುವರಿಯಲಿದೆ.
ಬ್ಯಾಗೇಜ್ ಸಮಸ್ಯೆ ಪರಿಹಾರಕ್ಕೆ 48 ಗಂಟೆಯ ಗಡುವು:
ಪ್ರಯಾಣಿಕರ ಬ್ಯಾಗೇಜ್ ಸಂಬಂಧಿ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಚಿವಾಲಯ ಇಂಡಿಗೋಗೆ ಕಠಿಣ ಸೂಚನೆ ನೀಡಿ, ಎಲ್ಲಾ ತಪ್ಪಿಸಿಕೊಂಡ ಬ್ಯಾಗೇಜ್‌ಗಳನ್ನು 48 ಗಂಟೆಯೊಳಗೆ ಹುಡುಕಿ ಪ್ರಯಾಣಿಕರ ಮನೆಗೆ ಅಥವಾ ಸೂಚಿಸಿದ ವಿಳಾಸಕ್ಕೆ ತಲುಪಿಸಬೇಕು ಎಂದು ಆದೇಶಿಸಿದೆ. ಬ್ಯಾಗೇಜ್ ಟ್ರ್ಯಾಕಿಂಗ್ ಮಾಹಿತಿ ಸ್ಪಷ್ಟವಾಗಿರಬೇಕು ಹಾಗೂ ಪ್ರಯಾಣಿಕರಿಗೆ ನಿಯಮಿತವಾಗಿ ಮಾಹಿತಿ ನೀಡಬೇಕು. ಹಕ್ಕಿನ ಪ್ರಕಾರ ಪರಿಹಾರ ನೀಡಬೇಕಿರುವ ಸಂದರ್ಭಗಳಲ್ಲಿ ಕೂಡಾ ವಿಮಾನಯಾನ ಕಂಪನಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
ಶೂನ್ಯ-ಅಸೌಕರ್ಯ ನೀತಿ:
ವಿಮಾನಯಾನ ಸಚಿವಾಲಯ ಈ ಅವಧಿಯಲ್ಲಿ ಶೂನ್ಯ-ಅಸೌಕರ್ಯ ನೀತಿ ಪಾಲನೆ ಅತ್ಯವಶ್ಯಕ ಎಂದು ಪುನಃ ತಿಳಿಸಿದೆ. ಹಿರಿಯ ನಾಗರಿಕರು, ಅಂಗವಿಕಲರು, ವಿದ್ಯಾರ್ಥಿಗಳು, ವೈದ್ಯಕೀಯ ಕಾರಣಕ್ಕೆ ಪ್ರಯಾಣಿಸುವವರು ಹಾಗೂ ತುರ್ತು ಪರಿಸ್ಥಿತಿಯಲ್ಲಿರುವ ಪ್ರಯಾಣಿಕರಿಗೆ ಸಹಾಯ ಮಾಡುವಂತೆ ಎಲ್ಲ ವಿಮಾನ ನಿಲ್ದಾಣಗಳಿಗೆ ಸೂಚನೆ ನೀಡಲಾಗಿದೆ. ವಿಮಾನ ನಿಲ್ದಾಣಗಳು, ಸುರಕ್ಷತಾ ಸಂಸ್ಥೆಗಳು ಮತ್ತು ಏರ್‌ಲೈನ್‌ಗಳ ನಡುವೆ ನಿರಂತರ ಸಮನ್ವಯ ನಡೆಯುತ್ತಿದ್ದು, ಪ್ರಯಾಣಿಕರ ಹಕ್ಕುಗಳಿಗೆ ಯಾವುದೇ ಹಾನಿಯಾಗದಂತೆ ಕಣ್ಗಾವಲು ಹೆಚ್ಚಿಸಲಾಗಿದೆ.
ಇಂಡಿಗೋ ಕಾರ್ಯಾಚರಣೆ ಪೂರ್ಣ ಸ್ಥಿರವಾಗುವವರೆಗೂ ಸಚಿವಾಲಯ ಪರಿಸ್ಥಿತಿಯನ್ನು ಕ್ಷಣಕ್ಷಣವೂ ಗಮನಿಸುತ್ತಿದೆ. ಯಾವ ಹಂತದಲ್ಲಾದರೂ ಅಸಮರ್ಪಕತೆ ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಯಾಣಿಕರ ಹಣ, ಹಕ್ಕು ಮತ್ತು ಸುರಕ್ಷತೆ ರಕ್ಷಿಸುವುದೇ ಸರ್ಕಾರದ ಮೊದಲ ಆದ್ಯತೆ ಎಂದು ಮತ್ತ ತಿಳಿಸಲಾಗಿದೆ.


Click it and Unblock the Notifications