ಕಳೆದ 6 ದಿನಗಳಿಂದ ಪರದಾಡುತ್ತಿದ್ದ ಇಂಡಿಗೋ ವಿಮಾನ (Indigo Flight) ಪ್ರಯಾಣಿಕರು, ಇಂದು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಅಂತೂ ಇಂಡಿಗೋ ಪರಿಸ್ಥಿತಿ ಇಂದು ಸ್ವಲ್ಪ ಸುಧಾರಿಸಿದ್ದು, ಪ್ರಯಾಣಿಕರ ಆಕ್ರೋಶ ಕೂಡಾ ಕಡಿಮೆಯಾಗಿದೆ. ದೇಶಾದ್ಯಂತ ನೂರಾರು ವಿಮಾನ ರದ್ಧತಿ ಮತ್ತು ಕಾರ್ಯಾಚರಣೆಯಲ್ಲಾದ ವಿಳಂಬಗಳ ನಂತರ, ಇಂಡಿಗೋ ವಿಮಾನಯಾನ ಸಂಸ್ಥೆಯು ಇದರ ಮೂಲ ಕಾರಣಗಳನ್ನು ಗುರುತಿಸಲು ಕಾರ್ಯಾಚರಣೆ ಶುರು ಮಾಡಿದೆ.

ಆರು ದಿನಗಳ ಬಿಕ್ಕಟ್ಟಿನ ಬಳಿಕ, ಭಾನುವಾರ (ಡಿಸೆಂಬರ್ 7, 2025) ತನ್ನ ಕಾರ್ಯಾಚರಣೆಗಳನ್ನು ಮರಳಿ ಹಿಂದಿನ ಸ್ಥಿತಿಗೆ ತರುವಲ್ಲಿ ಸಂಸ್ಥೆಯು ಗಮನಾರ್ಹ ಪ್ರಗತಿ ಸಾಧಿಸಿದೆ. ಮಂಗಳವಾರ ಆರಂಭವಾದ ಈ ಬಿಕ್ಕಟ್ಟು 2,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿ, ಸಾವಿರಾರು ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿತ್ತು.
ಅಲ್ಲದೇ ಪ್ರಯಾಣಿಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ, ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ವಿಮಾನ ನಿಲ್ದಾಣ ನಿರ್ವಾಹಕರು, ನಿರ್ದೇಶಕರು ಮತ್ತು ಸಂಬಂಧಿತ ಪಾಲುದಾರರೊಂದಿಗೆ ತುರ್ತು ಸಭೆ ನಡೆಸಿದರು. ಈ ವೇಳೆ ರದ್ದಾದ ಪ್ರಯಾಣಿಕರ ಟಿಕೆಟ್ ಹಣವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಬೇಕಿತ್ತು ಸೂಚನೆ ನೀಡಲಾಗಿತ್ತು.
ಕೋಟಿ ಕೋಟಿ ನಷ್ಟದಲ್ಲಿ ಇಂಡಿಗೋ
ನಾಗರಿಕ ವಿಮಾನಯಾನ ಸಚಿವಾಲಯದ ವರದಿ ಪ್ರಕಾರ, ಸತತ 6 ದಿನಗಳಲ್ಲಿ ಇಂಡಿಗೋ ವಿಮಾನಗಳಲ್ಲಿ ರದ್ದಾದ ಮತ್ತು ವಿಳಂಬವಾದ ಕಾರಣ ಒಟ್ಟು ₹610 ಕೋಟಿ ಮರುಪಾವತಿ ಮಾಡಲಾಗಿದೆ ಎಂದು ತಿಳಿಸಿದೆ. ಅಷ್ಟೇ ಅಲ್ಲದೇ ಸಿಲುಕಿದ್ದ 3,000 ಬ್ಯಾಗ್‌ಗಳನ್ನು ಮರಳಿ ಪ್ರಯಾಣಿಕರ ಕೈಗೆ ನೀಡಲಾಗಿದೆ. ಹಾಗೆಯೇ ಇನ್ನೂ ಬಾಕಿ ಉಳಿದ ಬ್ಯಾಗ್‌ಗಳನ್ನು ಮುಂದಿನ 48 ಗಂಟೆಯೊಳಗೆ ಪತ್ತೆ ಹಚ್ಚಿ ವಾಪಾಸ್ ನೀಡುವಂತೆ ಆದೇಶ ಹೊರಡಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸುಧಾರಣೆಯತ್ತ ಇಂಡಿಗೋ!
ಭಾನುವಾರ, ಇಂಡಿಗೋ ತನ್ನ ನಿಗದಿತ 2,300 ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಲ್ಲಿ ಸುಮಾರು 1,650 ವಿಮಾನಗಳನ್ನು ನಿರ್ವಹಿಸಿತು. 650 ವಿಮಾನಗಳು ರದ್ದುಗೊಂಡರೂ, ಪ್ರಮುಖ ವಿಮಾನ ನಿಲ್ದಾಣಗಳಾದ ಹೈದರಾಬಾದ್ (115), ಮುಂಬೈ (112), ದೆಹಲಿ (109), ಚೆನ್ನೈ (38) ಮತ್ತು ಅಮೃತಸರ (11) ಗಳಲ್ಲಿ ಅಡೆತಡೆಗಳ ಪ್ರಮಾಣ ಕಡಿಮೆಯಾಗಿತ್ತು.
ಇಂಡಿಗೋ ತನ್ನ ನೆಟ್‌ವರ್ಕ್ ಅನ್ನು ಡಿಸೆಂಬರ್ 10ರ ವೇಳೆಗೆ ಸಂಪೂರ್ಣವಾಗಿ ಸ್ಥಿರಗೊಳಿಸಲಿದೆ ಎಂದು ಈಗ ನಿರೀಕ್ಷಿಸಿದೆ. ಸದ್ಯ ಇಂಡಿಗೋ ಕಾರ್ಯಾಚರಣೆಯ ಒತ್ತಡದಲ್ಲಿದ್ದರೂ, ಇತರ ದೇಶೀಯ ವಿಮಾನಯಾನ ಸಂಸ್ಥೆಗಳು ಸುಗಮವಾಗಿ ಕಾರ್ಯನಿರ್ವಹಿಸುತ್ತಿದ್ದವು ಎಂದು ಸಚಿವಾಲಯ ಗಮನಿಸಿದೆ. ಡಿಸೆಂಬರ್ 5ರಂದು 706 ವಿಮಾನಗಳಿಂದ, ಡಿಸೆಂಬರ್ 6ರಂದು 1,565 ವಿಮಾನಗಳಿಗೆ ಇಂಡಿಗೋ ಸುಧಾರಿಸಿಕೊಂಡಿದೆ.
ಡಿಜಿಸಿಎ ಈಗಾಗಲೇ, ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಮತ್ತು ಸಿಒಒ ಇಸಿಡ್ರೆ ಪೋರ್ಕ್ವೆರಾಸ್ ಅವರಿಗೆ ಡಿಸೆಂಬರ್ 6ರ ಶೋಕಾಸ್ ನೋಟಿಸ್‌ಗೆ ಪ್ರತಿಕ್ರಿಯೆ ಸಲ್ಲಿಸಲು 24 ಗಂಟೆಗಳ ವಿಸ್ತರಣೆ ನೀಡಿದೆ.
ರದ್ದುಗೊಂಡ ಅಥವಾ ವಿಳಂಬಗೊಂಡ ವಿಮಾನಗಳ ಮರುಪಾವತಿಗಳನ್ನು ಭಾನುವಾರ ರಾತ್ರಿ 8 ಗಂಟೆಯೊಳಗೆ ಪೂರ್ಣಗೊಳಿಸುವಂತೆ ಸಚಿವಾಲಯ ಇಂಡಿಗೋಗೆ ಆದೇಶ ನೀಡಿತ್ತು. ಅಡೆತಡೆಗಳಿಂದ ಪ್ರಭಾವಿತರಾದ ಪ್ರಯಾಣಿಕರಿಂದ ಯಾವುದೇ ಶುಲ್ಕಗಳನ್ನು ವಿಧಿಸುವುದನ್ನು ಸಹ ಸಂಸ್ಥೆಗೆ ನಿಷೇಧಿಸಿದೆ. ಮರುಪಾವತಿ ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ಮರು-ಬುಕಿಂಗ್ ಅಗತ್ಯವಿರುವವರಿಗೆ ಸಹಾಯ ಮಾಡಲು ವಿಶೇಷ ಬೆಂಬಲ ತಂಡಗಳನ್ನು ಸಹ ಇಂಡಿಗೋದಲ್ಲಿ ನಿಯೋಜಿಸಲಾಗಿದೆ.
ಜೊತೆಗೆ, ಕಾಣೆಯಾದ ಅಥವಾ ಬೇರ್ಪಟ್ಟ ಎಲ್ಲಾ ಬ್ಯಾಗ್‌ಗಳನ್ನು ಪ್ರಯಾಣಿಕರಿಗೆ 48 ಗಂಟೆಗಳ ಒಳಗೆ ಪತ್ತೆಹಚ್ಚಿ ತಲುಪಿಸುವಂತೆ ಸಚಿವಾಲಯ ಇಂಡಿಗೋಗೆ ನಿರ್ದೇಶಿಸಿದೆ.


Click it and Unblock the Notifications