ಮಧ್ಯಪ್ರಾಚ್ಯದ ಘರ್ಷಣೆಯಿಂದಾಗಿ ಭಾರತದಲ್ಲಿ (India) ಈಗಾಗಲೇ ಎಲ್‌ಪಿಜಿ ಸಿಲಿಂಡರ್ ಸಮಸ್ಯೆ ತಲೆಎತ್ತಿ ನಿಂತಿದೆ. ಕಳೆದೆರಡು ದಿನಗಳಿಂದಂತೂ ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ (LPG Cylinder Shortage) ತೀವ್ರವಾಗಿಬಿಟ್ಟಿದೆ. ಸರ್ಕಾರ ಕೂಡಾ ಈ ಹಿನ್ನೆಲೆ, ಕೆಲವು ವಲಯಗಳಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡಿದ್ದು, ಈ ಪರಿಣಾಮ ಹೋಟೆಲ್, ರೆಸ್ಟೋರೆಂಟ್‌ಗಳ ಪರಿಸ್ಥಿತಿ ಮುಚ್ಚುವಂತಾಗಿದೆ. ಇದೀಗ ಎಲ್‌ಪಿಜಿ ಗ್ಯಾಸ್ ಕೊರತೆ ಬೆನ್ನಲ್ಲೇ, ಜನರಿಗೆ ದರ ಏರಿಕೆ ಬಿಸಿ ತಟ್ಟಲಿದೆ. ಭಾರತದ ಅತಿದೊಡ್ಡ ಏರ್‌ಲೈನ್ ಆಗಿರುವ ಇಂಡಿಗೋ, ತನ್ನ ಪ್ರಯಾಣ ದರವನ್ನು ಏರಿಕೆ ಮಾಡಿದ್ದು, ಈ ಮೂಲಕ ಪ್ರಯಾಣಿಕರ ಜೇಬಿಗೆ ಮತ್ತೆ ಕತ್ತರಿ ಬೀಳಲಿದೆ.

ಹೌದು, ಇದೀಗ ಜನಪ್ರಿಯ ಏರ್‌ಲೈನ್ ಆಗಿರುವ ಇಂಡಿಗೋ, ಇಂದಿನಿಂದ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ಟಿಕೆಟ್‌ಗಳ ಮೇಲೆ ಹೊಸ ಇಂಧನ ಶುಲ್ಕ ವಿಧಿಸಿದೆ. ಈ ಹಿನ್ನೆಲೆ ಪ್ರಯಾಣಿಕರ ಟಿಕೆಟ್ ದರದಲ್ಲೂ ಏರಿಕೆಯಾಗಲಿದೆ.
ಮಧ್ಯಪ್ರಾಚ್ಯದ ಸಂಘರ್ಷ, ವಿಮಾನ ಟಿಕೆಟ್ ದರ ಏರಿಕೆ!
ಇಸ್ರೇಲ್-ಅಮೆರಿಕಾ ಮತ್ತು ಇರಾನ್ ನಡುವೆ ಆರಂಭವಾಗಿರುವ ಸಂಘರ್ಷ, ದಿನಹೋದಂತೆ ತೀವ್ರವಾಗುತ್ತಿದೆ. ಏವಿಯೇಷನ್ ಟರ್ಬೈನ್ ಫ್ಯೂಯಲ್ (ATF) ಬೆಲೆಯಲ್ಲೂ ಭಾರೀ ಏರಿಕೆಯಾಗಿದೆ. ಈ ಹಿನ್ನೆಲೆ ಏರ್‌ಲೈನ್‌ಗಳ ಕಾರ್ಯಚರಣೆ ವೆಚ್ಚದಲ್ಲಿ ಸುಮಾರು 40% ಭಾಗ ಇಂಧನಕ್ಕೆ ಸೇರುತ್ತದೆ. ಅದೇ ಕಾರಣದಿಂದ ಇದೀಗ ಪ್ರಯಾಣ ದರ ಏರಿಕೆಯಾಗಿದೆ.
ಪ್ರಸ್ತುತ ಇಂಡಿಗೋ ಸೀಮಿತ ಮೊತ್ತದಲ್ಲಿ ಟಿಕೆಟ್ ದರ ಏರಿಕೆ ಮಾಡಿದ್ದು, ಪ್ರಯಾಣಿಕರಿಗೆ ಹೊರೆಯಾಗಬಾರದೆಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ ಎಂದು ಕಂಪನಿ ಹೇಳಿದೆ.
ಪರಿಷ್ಕೃತ ದರ ಪಟ್ಟಿ:
ಈ ಶುಲ್ಕವು ಇಂಡಿಗೋ ಪ್ರಯಾಣಿಕರ ಮೇಲೆ ಪ್ರಭಾವ ಬೀರಲಿದೆ. ಮಾರ್ಚ್ 14 ರ ರಾತ್ರಿ 12 ಗಂಟೆಯಿಂದ ಮಾಡಲಾಗುವ ಹೊಸ ಬುಕಿಂಗ್‌ಗಳಿಗೆ ಈ ಪರಿಷ್ಕೃತ ದರ ಅನ್ವಯವಾಗಲಿದೆ.
- ಭಾರತದ ಒಳಗೆ ಸಂಚರಿಸುವ, ಭಾರತದ ನೆರೆಹೊರೆ ದೇಶಗಳಿಗೆ ಪ್ರಯಾಣ ಮಾಡಲು ಟಿಕೆಟ್ ಬುಕಿಂಗ್ ಬೆಲೆ 425 ರೂ. ಏರಿಕೆಯಾಗಿದೆ.
- ಮಧ್ಯಪ್ರಾಚ್ಯದ ದೇಶಗಳಿಗೆ ಹೋಗುವ ಟಿಕೆಟ್ ಬೆಲೆ 900 ರೂ. ಹೆಚ್ಚಳವಾಗಿದೆ.
- ಸೌತ್ ಈಸ್ಟ್ ಏಷ್ಯಾ ಮತ್ತು ಚೀನಾಗೆ ಹೋಗುವವರ ಟಿಕೆಟ್ ಬೆಲೆ 1800 ರೂ. ಏರಿಕೆ ಕಂಡಿದೆ.
- ಆಫ್ರಿಕಾ ದೇಶಗಳಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಟಿಕೆಟ್ ಬೆಲೆ 1800 ರೂ. ಹೆಚ್ಚಳವಾಗಿದೆ.
- ಯುರೋಪ್ ದೇಶಗಳಿಗೆ ಪ್ರಯಾಣ ಮಾಡುವವರಿಗೆ 2300 ರೂ. ಹೆಚ್ಚಳವಾಗಿದೆ.
ಲೋ ಕಾಸ್ಟ್ ಪ್ರಯಾಣಕ್ಕೆ ಹೆಸರುವಾಸಿಯಾಗಿರುವ ಇಂಡಿಗೋ ಏರ್‌ಲೈನ್ ಇದೀಗ ದುಬಾರಿಯಾಗುತ್ತಿದೆ. ಮಧ್ಯಪ್ರಾಚ್ಯದ ಸಂಘರ್ಷ ಪರಿಣಾಮ ವಿಮಾನ ಪ್ರಯಾಣದ ಮೇಲೂ ಬೀರುತ್ತಿದ್ದು, ಸದ್ಯ ಜನರಲ್ಲಿ ಆತಂಕದ ಮನೆ ಮಾಡಿದೆ. ಅತ್ತ ದೇಶದಲ್ಲಿ ಎಲ್‌ಪಿಜಿ ಗ್ಯಾಸ್ ಪೂರೈಕೆಯ ಕೊರತೆಯೂ ಹೆಚ್ಚಾಗುತ್ತಿದ್ದು, ಈಗಾಗಲೇ ಇರಾನ್‌ನಿಂದ ಎರಡು ಹಡಗುಗಳು ಭಾರತಕ್ಕೆ ಬಂದು ತಲುಪಿದೆ ಎಂದು ವರದಿಯಾಗಿದೆ.
ಹಾರ್ಮುಜ್ ಜಲಸಂಧಿಯಲ್ಲಿನ ಬಿಕ್ಕಟ್ಟು, ಭಾರತಕ್ಕೆ ಇಂಧನ ಸಾಗಣೆಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆ ದೇಶದಲ್ಲಿ ಹಣದುಬ್ಬರ ಪರಿಸ್ಥಿತಿ ಉಂಟಾಗಿದೆ.


Click it and Unblock the Notifications