ಹಲವು ಟೀಕೆ, ವಿರೋಧಗಳ ಹೊರತಾಗಿಯೂ ರಾಜ್ಯ ಸರ್ಕಾರದ ನೇತೃತ್ವದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಅಥವಾ ಜಾತಿ ಗಣತಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯನವರ (CM Siddaramaiah) ಹಲವು ದಿನದ ಕನಸು ಇದೀಗ ಪ್ರಕ್ರಿಯೆಯಲ್ಲಿದೆ. ಆದರೆ ಈ ಮಧ್ಯೆ ಜಾತಿ ಗಣತಿಗೆ (Caste Census) ಹಲವಾರು ಸಮಸ್ಯೆಗಳು ಎದುರಾಗುತ್ತಲೇ ಇದೆ. ಹಲವಾರು ಸಮಸ್ಯೆಗಳಿಂದ ಭಾರೀ ಚರ್ಚೆಯಲ್ಲಿದ್ದ ಜಾತಿ ಗಣತಿ, ಇದೀಗ ಮತ್ತೊಂದು ಕಾರಣದಿಂದ ಮುನ್ನೆಲೆ ಬಂದಿದೆ. ಅದೇನೆಂದರೆ ಇನ್ಫೋಸಿಸ್ (Infosys) ಸಂಸ್ಥೆಯ ಸ್ಥಾಪಕರಾದ ಎನ್.ಆರ್. ನಾರಾಯಣ ಮೂರ್ತಿ (Narayana Murthy) ಮತ್ತು ಸುಧಾ ಮೂರ್ತಿ(Sudha Murthy) ದಂಪತಿ ಜಾತಿ ಸಮೀಕ್ಷೆಯನ್ನು ನೇರವಾಗಿ ನಿರಾಕರಿಸಿದ್ದಾರೆ.

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಟ್ಟು ಬಿಡದೆ ಜಾತಿಗಣತಿ ಸಮೀಕ್ಷೆ ನಡೆಯುತ್ತಿದೆ. ಶಿಕ್ಷಕರು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದಾರೆ. ಆದರೆ ಬೆಂಗಳೂರಿನ ಅಧಿಕಾರಿಗಳು, ಜಯನಗರದಲ್ಲಿರುವ ಎನ್.ಆರ್. ನಾರಾಯಣ ಮೂರ್ತಿ (Narayana Murthy) ಮತ್ತು ಸುಧಾ ಮೂರ್ತಿ ಅವರ ಮನೆ ಬಳಿ ತೆರಳಿದಾಗ ಸಮೀಕ್ಷೆಯಲ್ಲಿ ಭಾಗವಹಿಸುವುದಕ್ಕೆ ನಿರಾಕರಣೆ ತೋರಿಸಿದ್ದಾರೆ ಎನ್ನಲಾಗಿದೆ.
ಜಾತಿ ಸಮೀಕ್ಷೆಗೆ ನಾರಾಯಣ ಮೂರ್ತಿ-ಸುಧಾಮೂರ್ತಿ ನಕಾರ:
ಸಮೀಕ್ಷೆಗಾಗಿ ಜಯನಗರದಲ್ಲಿರುವ ಮೂರ್ತಿ ದಂಪತಿ ಮನೆಗೆ ಅಧಿಕಾರಿಗಳು ತೆರಳಿದಾಗ ಜಾತಿ ಗಣತಿ ಸಮೀಕ್ಷೆಗೆ ದಂಪತಿ ಸ್ಪಷ್ಟವಾಗಿ ತಮ್ಮ ನಿಲುವನ್ನು ಹೇಳಿದ್ದಾರೆ. ಅಂದರೆ ಜಾತಿಗಣತಿಗೆ ನಿರಾಕರಣೆ ವ್ಯಕ್ತಪಡಿಸಿ, "ನಾವು ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ. ನಾವು ಹಿಂದುಳಿದವರಲ್ಲ, ಇದರಿಂದ ಸರ್ಕಾರಕ್ಕೆ ಉಪಯೋಗವಿಲ್ಲ" ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ ಬರೆದ ಮೂರ್ತಿ ಕುಟುಂಬ:
ಅಧಿಕಾರಿಗಳ ಮುಂದೆ ಸಮೀಕ್ಷೆಯನ್ನು ನಿರಾಕರಿಸಿದ್ದಲ್ಲದೇ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸ್ವಯಂ ನಿರಾಕರಣೆ ಸಂಬಂಧಿಸಿ ದೃಢೀಕರಣ ಪತ್ರ ಕೂಡಾ ಬರೆದು, 'ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಯುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಮ್ಮ ಕೆಲವು ವೈಯಕ್ತಿಕ ಕಾರಣಗಳಿಂದ ಮಾಹಿತಿ ನೀಡಲು ನಿರಾಕರಿಸುತ್ತಿದ್ದೇವೆ. ನಾನು ಮತ್ತು ನನ್ನ ಕುಟುಂಬ ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ. ನಾವು ಹಿಂದುಳಿದ ಯಾವು ಜಾತಿಗೂ ಸೇರುವರಲ್ಲ. ಆದ್ದರಿಂದ ಈ ಸಮೀಕ್ಷೆ, ಸರ್ಕಾರಕ್ಕೆ ಏನೂ ಉಪಯೋಗವಿಲ್ಲ. ಹಾಗಾಗಿ ನಮ್ಮ ಕುಟುಂಬ ಈ ಸಮೀಕ್ಷೆಯಲ್ಲಿ ಭಾಗವಹಿಸುದಿಲ್ಲ' ಬರೆದಿದ್ದಾರೆ.
ಜಾತಿಗಣತಿ ಮುಂದೂಡಿಕೆ?
ರಾಜ್ಯ ಸರ್ಕಾರದ ನಿರ್ಧಾರದಂತೆ ರಾಜ್ಯಾದ್ಯಂತ ಸೆಪ್ಟೆಂಬರ್ 22ರಿಂದ ಜಾತಿಗಣತಿಯನ್ನು ಆರಂಭಿಸಲಾಗಿತ್ತು. ಅಲ್ಲದೇ ಅಕ್ಟೋಬರ್ 7ರ ಒಳಗೆ ಅಲ್ಲಾ ಸಮೀಕ್ಷೆಯನ್ನು ಮುಗಿಸಬೇಕೆಂದು ಗಡುವಿ ನೀಡಲಾಗಿತ್ತು. ಆದರೆ ಅಕ್ಟೋಬರ್ 7ರ ವೇಳೆ ಸಮೀಕ್ಷೆ ಇನ್ನೂ ಪೂರ್ಣಗೊಳ್ಳದ ಕಾರಣ, ಅಕ್ಟೋಬರ್ 18ರ ವರೆಗೆ ಜಾತಿ ಸಮೀಕ್ಷೆ ನಡೆಸುವಂತೆ ವಿಸ್ತರಿಸಲಾಗಿತ್ತು. ಅಲ್ಲದೇ ಶಾಲಾ ಮಕ್ಕಳಿಗೂ ರಜೆ ವಿಸ್ತರಣೆಯಾಯ್ತು. ಆದರೆ ಇನ್ನೂ ಹಲವು ಜಿಲ್ಲೆಗಳಲ್ಲಿ ಶೇ. 50% ಸಮೀಕ್ಷೆ ಪೂರ್ಣಗೊಳ್ಳದ ಕಾರಣ ಮುಂದಿನ ಕಥೆ ಏನು ಎಂಬ ಪ್ರಶ್ನೆ ಎದುರಾಗಿದೆ.


Click it and Unblock the Notifications