ಬೆಂಗಳೂರು, ಆಗಸ್ಟ್ 20: ದೇಶದಲ್ಲಿ ಉದ್ಯೋಗವಕಾಶಗಳ ಚರ್ಚೆ ನಡೆಯುತ್ತಿರುವಾಗ ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಶುಭ ಸುದ್ದಿಯೊಂದನ್ನು ನೀಡಿದೆ. ದೇಶದ ಪ್ರಮುಖ ಐಟಿ ಕಂಪನಿ ಇನ್ಫೋಸಿಸ್ ಹೊಸಬರಿಗೆ 9 ಲಕ್ಷ ರೂ.ವರೆಗೆ ವಾರ್ಷಿಕ ವೇತನ ನೀಡಲು ತೀರ್ಮಾನಿಸಿದೆ. ಕ್ಯಾಂಪಸ್ ಪ್ಲೇಸ್‌ಮೆಂಟ್ ಡ್ರೈವ್‌ನ ಭಾಗವಾಗಿ, 'ಪವರ್ ಪ್ರೋಗ್ರಾಂ' ಆರಂಭಿಸಿ ಇದರಡಿಯಲ್ಲಿ 9 ಲಕ್ಷ ಪ್ಯಾಕೇಜ್ ನೀಡಲು ಮುಂದಾಗಿದೆ.
ಎಂಟ್ರಿ ಲೆವಲ್ ಗೆ ಎಷ್ಟು ವೇತನ?
ಬೆಂಗಳೂರು ಮೂಲದ ಕಂಪನಿ ಎಂಟ್ರಿ ಲೆವೆಲ್‌ಗೆ 3 - 3.5 ಲಕ್ಷ ರೂ. ವಾರ್ಷಿಕ ವೇತನ ನೀಡುತ್ತಿತ್ತು. ಇದನ್ನೀಗ ಸುಮಾರು ಮೂರು ಪಟ್ಟು ಹೆಚ್ಚಿಸಲು ತೀರ್ಮಾನಿಸಿದೆ. ಕೋಡಿಂಗ್ ಮತ್ತು ಸಾಫ್ಟ್ ವೇರ್ ಚಾಲೆಂಜಸ್, ಪ್ರೋಗ್ರಾಮಿಂಗ್ ಸ್ಕಿಲ್ ಟೆಸ್ಟಿಂಗ್ ಮತ್ತು ಇತರ ವಿಶೇಷ ಸ್ಕಿಲ್ ಟೆಸ್ಟಿಂಗ್ ವಿಭಾಗದಲ್ಲಿ ಈ ವೇತನ ಸಿಗಲಿದೆ ಎಂದು ಮೂಲಗಳು ಇಟಿಗೆ ತಿಳಿಸಿವೆ.

ನೇಮಕಾತಿ ಹೇಗೆ?
ಪರೀಕ್ಷೆ ಹಾಗೂ ಸಂದರ್ಶನಗಳ ಮೂಲಕ ಹೊಸಬರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಇವರಿಗೆ 4-6.5 ಲಕ್ಷ ರೂ. ಮತ್ತು 9 ಲಕ್ಷ ರೂ. ನಡುವೆ ವೇತನ ನೀಡಲಾಗುತ್ತದೆ ಎನ್ನುವುದು ಇನ್ಫಿ ಮಾಹಿತಿ.
ಹಿಂದೆ ಬಿದ್ದಿದ್ದ ನೇಮಕಾತಿ!
ಕಳೆದ ನೇಮಕಾತಿಗಳು ತುಂಬಾ ಕಡಿಮೆ ಇದ್ದವು. ಈ ವರ್ಷ ಅಂದರೆ 2024-25ರಲ್ಲಿ 15 - 20 ಸಾವಿರ ಹೊಸ ನೇಮಕಾತಿಗೆ ಇನ್ಫೋಸಿಸ್ ಮುಂದಾಗುತ್ತಿದೆ. ಇನ್ನೊಂದು ಕಡೆ ಟಿಸಿಎಸ್ 40,000 ಫ್ರೆಷರ್ಸ್‌ನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದೆ.
ಲೇ ಆಫ್ ಮಾಡಿದ್ದ ಕಂಪನಿಗಳು
ಕಳೆದ ವರ್ಷ ಕಾಲೇಜು ಕ್ಯಾಂಪಸ್ ಸೆಲೆಕ್ಷನ್ ನಿಂದ ದೂರ ಉಳಿದಿದ್ದಲ್ಲದೆ, ಉದ್ಯೋಗಿಗಳನ್ನು ವಜಾ ಮಾಡಿದ್ದ ಐಟಿ ಕಂಪನಿಗಳು ಈ ಬಾರಿ ಹೆಚ್ಚಿನ ಸಂಖ್ಯೆಯ ನೇಮಕಾತಿಗೆ ಮನಸ್ಸು ಮಾಡಿವೆ. ಒಟ್ಟಾರೆ ದೇಶದ ಪ್ರಮುಖ ನಾಲ್ಕು ಐಟಿ ಕಂಪನಿಗಳು 82,000ದಷ್ಟು ಹೊಸಬರನ್ನು ನೇಮಿಸಿಕೊಳ್ಳುವ ಅಂದಾಜಿದ್ದು ಒಂದು ಅರ್ಥದಲ್ಲಿ ಬದಲಾವಣೆಯ ಪರ್ವ ಎಂದು ಕರೆಯಬಹುದು. ಕೊರೋನಾ ನಂತರದಲ್ಲಿ ಉದ್ಯೋಗ ವಲಯ ಸಮಸ್ಯೆ ಎದುರಿಸಿಕೊಂಡೆ ಬಂದಿದೆ.
ಟಿಸಿಎಸ್ ಮಾದರಿ ಯೋಜನೆ
ಇನ್ಫೋಸಿಸ್‌ನಲ್ಲಿ ಮಾತ್ರವಲ್ಲದೆ ದೇಶದ ಅತಿ ದೊಡ್ಡ ಐಟಿ ಕಂಪನಿ ಟಿಸಿಎಸ್‌ನಲ್ಲೂ ಈ ರೀತಿಯ ಯೋಜನೆ ಇದೆ. ಇದಕ್ಕೆ 'ಪ್ರೈಮ್' ಎಂದು ಕಂಪನಿ ಹೆಸರಿಟ್ಟಿದೆ. ಸಾಫ್ಟ್ ವೇರ್ ಡೆವಲಪ್‌ಮೆಂಟ್ ವಿಭಾಗದಲ್ಲಿ ವಿಶೇಷ ನೇಮಕಾತಿಯನ್ನು ಈ 'ಪ್ರೈಮ್' ಅಡಿಯಲ್ಲಿ ಮಾಡಲಾಗುತ್ತದೆ.
ಎಂಟ್ರಿ ಲೆವಲ್ ಗೆ ಟಿಸಿಎಸ್ 9 - 11 ಲಕ್ಷ ರೂ. ವೇತನ ನೀಡುತ್ತದೆ. ಈ 'ಪ್ರೈಮ್' ಪ್ರೋಗ್ರಾಂನನ್ನು ಟಿಸಿಎಸ್ ಕಳೆದ ವರ್ಷ ಆರಂಭಿಸಿತ್ತು. ಈ ಬಾರಿ ಹೊಸದಾಗಿ ಆರ್ಟಿಫಿಶಿಯಲ್ ಇಂಟಲಿಜನ್ಸ್ , ಜನರೇಟಿವ್ ಎಐ (ಜನ್‌ಎಐ) ಹಾಗೂ ಮಷೀನ್ ಲರ್ನಿಂಗ್ ಸಹ ಈ ವಿಭಾಗಗಕ್ಕೆ ಸೇರ್ಪಡೆ ಮಾಡಿದೆ.
ಟಿಸಿಎಸ್ ಸದ್ಯ ಮೂರು ವಿಭಾಗಗಳಲ್ಲಿ ಹೊಸಬರನ್ನು ನೇಮಕ ಮಾಡಿಕೊಳ್ಳುತ್ತದೆ. 'ನಿಂಜಾ' ಅಡಿಯಲ್ಲಿ ವಾರ್ಷಿಕ ಸುಮಾರು 3.6 ಲಕ್ಷ ರೂ. ವೇತನ ಇದ್ದರೆ, 'ಡಿಜಿಟಲ್'ನಲ್ಲಿ 7.5 ಲಕ್ಷ ರೂ. ವಾರ್ಷಿಕ ವೇತನ ಹಾಗೂ 'ಪ್ರೈಮ್' ಅಡಿಯಲ್ಲಿ ಇನ್ನೂ ಹೆಚ್ಚಿನ ವೇತನ ನೀಡಲಾಗುತ್ತದೆ.
ಮೈಕ್ರೋಸಾಫ್ಟ್-ಕೋಕಾ ಕೋಲಾ ಡೀಲ್ ನಿಂದ ಇನ್ಫಿಗೆ ಲಾಭ!
ಈ ವರ್ಷದ ಏಪ್ರಿಲ್‌ನಲ್ಲಿ ಮೈಕ್ರೋಸಾಫ್ಟ್ ಮತ್ತು ಪಾನೀಯ ದೈತ್ಯ ಕಂಪನಿ ಕೋಕಾ ಕೋಲಾ ದೊಡ್ಡದೊಂದು ಒಪ್ಪಂದ ಮಾಡಿಕೊಂಡಿದ್ದವು. ಈ ಒಪ್ಪಂದ ಇದೀಗ ಇನ್ಫೋಸಿಸ್ ಗೆ ಲಾಭದಾಯಕವಾಗಿ ಪರಿಣಮಿಸಿದೆ. 1.1 ಬಿಲಿಯನ್ ಡಾಲರ್ ಮೊತ್ತದ ಕ್ಲೌಡ್ ಮೈಗ್ರೇಷನ್ ಡೀಲ್ ನಿಂದ ಇನ್ಫಿಗೆ 100 ಮಿಲಿಯನ್ ಡಾಲರ್ ದೊರೆಯಲಿದೆ. ಈ ಯೋಜನೆಯಲ್ಲಿ ಇನ್ಫೋಸಿಸ್ ಸಪೋರ್ಟಿಂಗ್ ಪಾರ್ಟನರ್ ಆಗಿ ಗುರುತಿಸಿಕೊಂಡಿದೆ.
ಕೇವಲ ಯುರೋ ಪೆಸಿಫಿಕ್ ಭಾಗದಿಂದಲೇ ಕಂಪನಿಗೆ 27 ಮಿಲಿಯನ್ ಡಾಲರ್ ಹರಿದು ಬರಲಿದೆ. ಯುಎಸ್ ಸೆಕ್ಯೂರಿಟಿಸ್ ಗೆ ಸಲ್ಲಿಕೆ ಮಾಡಿರುವ ರೆಗ್ಯೂಲೆಟರಿ ಫೈಲಿಂಗ್ ವೇಲೆ ಈ ಮಾಹಿತಿ ಗೊತ್ತಾಗಿದೆ. ಇತರ ಪ್ರದೇಶಗಳ ಮೇಲಿನ ಕೆಲಸದಲ್ಲಿಯೂ ಇನ್ಫಿ ಈ ದೊಡ್ಡ ಡೀಲ್ ನಲ್ಲಿ ಕೈಜೋಡಿಸಿದರೆ 500 ಮಿಲಿಯನ ಡಾಲರ್ ಗಳಿಸಿಕೊಳ್ಳಬಹುದು ಎನ್ನಲಾಗಿದೆ.


Click it and Unblock the Notifications