ಇನ್ಫೋಸಿಸ್ ಉದ್ಯೋಗಿಗಳಿಗೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಶಾಕ್ ಕೊಟ್ಟಿತ್ತು. ಅದಾದ ಕೆಲ ದಿನಗಳ ಬಳಿಕ ಉದ್ಯೋಗಿಗಳನ್ನು ಕೆಲಸದಿಂದ ಏಕಾಏಕಿ ವಜಾಗೊಳಿಸಿ ತಮ್ಮ ಕನಸಿಗೆ ತಣ್ಣೀರೆರಚಿತ್ತು. ಹೀಗೆಲ್ಲಾ ಮಾಡಿ ವಿವಾದಗಳಿಗೆ ಗುರಿಯಾಗಿದ್ದ ಇನ್ಫೋಸಿಸ್ ಕಂಪನಿ, ಈ ಬಾರಿ ಸ್ವಲ್ಪ ಖುಷಿ ಸುದ್ದಿ ನೀಡಿದೆ. ಅದೇನೆಂದರೆ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳ ಪತ್ರವನ್ನು ಜಾರಿ ಮಾಡಿದ್ದು, ಯಾರು ಚೆನ್ನಾಗಿ ಪರ್ಫಾರ್ಮೆನ್ಸ್ ನೀಡಿದ್ದಾರೋ ಅವರಿಗೆ 20% ವರೆಗೆ ವೇತನ ಹೆಚ್ಚಳ ನೀಡಲಾಗಿದೆ.

ಹೌದು, ಇನ್ಫೋಸಿಸ್ ಇದು ಕಂಪನಿಯ ವಾರ್ಷಿಕ ಮೌಲ್ಯಮಾಪನ ಪ್ರಕ್ರಿಯೆಯ ಭಾಗವಾಗಿದ್ದು, ಉತ್ತಮ ಕಾರ್ಯಕ್ಷಮತೆ ತೋರಿದ ಉದ್ಯೋಗಿಗಳನ್ನು ಪ್ರೋತ್ಸಾಹಿಸುವ ಮತ್ತು ಅವರ ವೃತ್ತಿ ಬೆಳವಣಿಗೆಗೆ ಸಹಾಯ ಮಾಡುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಅಂದರೆ ಈ ಸಂಬಳ ಹೆಚ್ಚಳವು ಉದ್ಯೋಗಿಯ ಕಾರ್ಯಕ್ಷಮತೆಯನ್ನು ಪ್ರದರ್ಶಿಸುತ್ತದೆ. ಹಾಗೂ ಹುದ್ದೆ ಮತ್ತು ಅನುಭವದ ಮಟ್ಟವನ್ನು ಅವಲಂಬಿಸಿರುತ್ತದೆ.
ಉತ್ತಮವಾಗಿ ಕೆಲಸ ಮಾಡಿದ ಉದ್ಯೋಗಿಗಳಿಗೆ, ಉತ್ತಮವಾಗಿ ಭತ್ಯೆ ಹೆಚ್ಚಳವಾಗಿದ್ದರೆ, ಸರಾಸರಿ ಕಾರ್ಯಕ್ಷಮತೆ ತೋರಿದ ಉದ್ಯೋಗಿಗಳಿಗೆ ಸಹ ಪ್ರಾಯೋಜಿತ ವೇತನ ಪರಿಷ್ಕರಣೆ ನೀಡಲಾಗಿದೆ. ಇನ್ಫೋಸಿಸ್ ಈ ನಿರ್ಧಾರವನ್ನು ಕೈಗೊಳ್ಳುವ ಮೂಲಕ, ತೀವ್ರ ಸ್ಪರ್ಧೆಯನ್ನೊಳಗೊಂಡ ಐಟಿ ಉದ್ಯೋಗ ಮಾರುಕಟ್ಟೆಯಲ್ಲಿ ಪ್ರತಿಭಾವಂತರನ್ನು ಉಳಿಸಿಕೊಳ್ಳಲು ಸಹಾಯವಾಗಲಿದೆ.
ಇನ್ಫೋಸಿಸ್ ವೇತನ ಪರಿಷ್ಕರಣೆ:
ಇನ್ನು ವಿಭಿನ್ನ ಕಾರ್ಯಕ್ಷಮತೆ ಮಟ್ಟಗಳಿಗೆ ಅದರಂತೆಯೇ ಶೇಕಡಾವಾರು ಪ್ರಮಾಣದಲ್ಲಿ ಹೆಚ್ಚಳ ನೀಡಲಾಗಿದೆ. ಅಂದರೆ ಇನ್ಫೋಸಿಸ್ ತನ್ನ ಉದ್ಯೋಗಿಗಳನ್ನು ಮೂರು ಕಾರ್ಯಕ್ಷಮತಾ ಹಂತಗಳಾಗಿ ವರ್ಗೀಕರಿಸಿದೆ. ಅದಂತೆ ನಿರೀಕ್ಷೆಗಳನ್ನು ಪೂರೈಸಿದವರು, ಶ್ಲಾಘನೀಯವಾಗಿ ಕೆಲಸ ಮಾಡಿದವರು ಹಾಗೂ ಅತ್ಯುತ್ತಮ ಕೆಲಸಗಾರರು..ಈ ಮೂರು ಹಂತಗಳ ಅನುಸಾರ ಇನ್ಫೋಸಿಸ್ ಸಂಬಳ ಹೆಚ್ಚಿಸಿದೆ.
ನಿರೀಕ್ಷೆಗಳನ್ನು ಪೂರೈಸಿದ ಉದ್ಯೋಗಿಗಳಿಗೆ 5% ರಿಂದ 7% ವೇತನ ಹೆಚ್ಚಳವಾಗಿದೆ. ಹಾಗೆಯೇ ಶ್ಲಾಘನೀಯವಾಗಿ ಕೆಲಸ ಮಾಡಿದವರಿಗೆ 7% ರಿಂದ 10% ವೇತನ ಹೆಚ್ಚಳವಾಗಿದೆ. ಅತಿಹೆಚ್ಚು ಉತ್ತಮವಾಗಿ ಕೆಲಸ ಮಾಡಿದವರಿಗೆ 10% ರಿಂದ 20% ವೇತನ ಹೆಚ್ಚಳ ಮಾಡಲಾಗಿದೆ. ಹೀಗೆ ಇನ್ಫೋಸಿಸ್ ಸಂಸ್ಥೆ ತನ್ನ ಉದ್ಯೋಗಿಗಳ ಕೆಲಸದ ಗುಣಮಟ್ಟದ ಆಧಾರದ ಮೇಲೆ ಸಂಬಳ ಹೆಚ್ಚಳ ನೀಡಿದೆ.
ಇನ್ನು 2023 ನವೆಂಬರ್‍ನಲ್ಲಿ ನಡೆದ ವೇತನ ಪರಿಷ್ಕರಣೆಗೆ ಹೋಲಿಸಿದರೆ, ಈಗ ಮಾಡಿರುವ ವೇತನ ಹೆಚ್ಚಳ ವಿವಿಧ ಕಾರ್ಯಕ್ಷಮತೆ ವಿಭಾಗಗಳಲ್ಲಿ 5-10% ಕಡಿಮೆಯಾಗಿದೆ ಎಂಬುದು ಕಂಡುಬಂದಿದೆ. ಇದೊಂದು ಅಸಮಾಧಾನಕರ ಸಂಗತಿಯಾಗಿದೆ. ಇದೇ ರೀತಿ ಸಂಬಳ ಇಳಿಕೆಯ ಪ್ರವೃತ್ತಿಯನ್ನು ಅನುಸರಿಸಲಾಗಿದೆ. ಕಂಪನಿಯು ಕಳೆದ ವಾರವಷ್ಟೇ ಕಾರ್ಯಕ್ಷಮತೆ ಆಧಾರಿತ ಬೋನಸ್‌ಗಳಲ್ಲಿ ಕಡಿತವನ್ನು ಘೋಷಿಸಿತ್ತು. ಅದರಂತೆ ಈಗ ವೇತನ ಹೆಚ್ಚಳದಲ್ಲೇ ಕಡಿಮೆಯಾಗಿರುವುದು ಅಸಮಾಧಾನಕರ ಸಂಗತಿ. ಆದರೆ ಒಂದಷ್ಟು ನಕರಾತ್ಮಕ ಬೆಳವಣಿಗೆ ನಡುವೆ ಇನ್ಫೋಸಿಸ್‌ನಲ್ಲಿ ಇದೊಂದು ಸಮಾಧಾನಕರ ಸಂಗತಿಯಾಗಿ ಹೊರ ಹೊಮ್ಮಿದೆ.
ನೌಕರರಿಗೆ ನಿರೀಕ್ಷೆಗೂ ಮೀರಿದ ನಿರಾಸೆ:
ಇನ್ಫೋಸಿಸ್ ಒಂದು ದೊಡ್ಡ ಐಟಿ ಕಂಪನಿಯಾಗಿರುವುದರಿಂದ, ಉದ್ಯೋಗಿಗಳು ಕೂಡ ಉತ್ತಮ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದರು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಅವರಿಗೆ ತೃಪ್ತಿಕರವಾದ ವೇತನ ಹೆಚ್ಚಳವಾಗಿಲ್ಲ ಎಂಬುದು ತಿಳಿದು ಬಂದಿದೆ. ಸಾಮಾನ್ಯವಾಗಿ ಎಂಎಸ್ ತಂಡಗಳ ಗ್ರೂಪ್ ಚಾಟ್‌ಗಳಲ್ಲಿ ವೇತನ ಹೆಚ್ಚಳದ ನಂತರ ಒಂದಷ್ಟು ಚರ್ಚೆಗಳು ನಡೆಯುತ್ತಿದ್ದವು. ಆದರೆ ಈ ಬಾರಿ ಎಲ್ಲಾ ಗ್ರೂಪ್‌ಗಳು ಮೌನವಾಗಿದ್ದು ನಿರಾಶೆ ಎದ್ದು ಕಾಣುತ್ತಿದೆ. ಹೀಗಿದ್ದರೂ ಐಟಿ ಉದ್ಯಮವು ಪ್ರಸ್ತುತ ಸವಾಲಿನ ಹಂತವನ್ನು ಎದುರಿಸುತ್ತಿದೆ ಎಂಬುದನ್ನು ಉದ್ಯೋಗಿಗಳೇ ಒಪ್ಪಿಕೊಂಡಿದ್ದಾರೆ.
ಇನ್ನು ಇನ್ಫೋಸಿಸ್ ಕೊನೆಯದಾಗಿ ವೇತನ ಹೆಚ್ಚಳ ಮಾಡಿದ್ದು, 2023ರ ನವೆಂಬರ್ 1ರಂದು..ಅದಕ್ಕೂ ಹಿಂದೆ 2022ರಲ್ಲಿ ಹಣವನ್ನು ಉಳಿಸುವ ಸಲುವಾಗಿ ಸಂಬಳ ಹೆಚ್ಚಳವನ್ನು ಸ್ಥಗಿತಗೊಳಿಸಿತ್ತು.ಆದರೆ ಅಕ್ಟೋಬರ್ 2023 ರಿಂದ ತನ್ನ ವಾರ್ಷಿಕ ಮೌಲ್ಯಮಾಪನ ಚಕ್ರವನ್ನು ಪುನರಾರಂಭಿಸಿತು.


Click it and Unblock the Notifications