ಮುಂಬೈನ ವರ್ಲಿ ನಗರದಲ್ಲಿ ಮನೆಯೊಂದು ನಿರ್ಮಾಣವಾಗುತ್ತಿದೆ. ಬಹುಷ್ಯ ಇದನ್ನು ಮನೆ ಅಥವಾ ಮಹಲು ಅಂದ್ರೂ ತಪ್ಪಾಗಬಹುದು. ವರ್ಲಿ ನಗರವೇ ಭಾರತದ ಅತ್ಯಂತ ದುಬಾರಿ ಪ್ರದೇಶ ಇಲ್ಲಿ ವಾಸಿಸುತ್ತಿರುವವರು ಆಗರ್ಭ ಶ್ರೀಮಂತರು. ಇಂತಹ ಪ್ರದೇಶದಲ್ಲಿ ಐಷಾರಾಮಿ ಜೀವನದ ಪರಾಕಾಷ್ಠೆಯನ್ನು ಪ್ರತಿನಿಧಿಸುವ ಐದು ಅಂತಸ್ತಿನ ಭವ್ಯವಾದ ಮಹಲು ತಲೆ ಎತ್ತಿ ನಿಂತಿದೆ.
ಈ ಮನೆಯ ಒಡಯ-ಒಡತಿ ದೇಶದ ನಂ.1 ಶ್ರೀಮಂತ ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಮತ್ತು ಅವರ ಪತಿ ಆನಂದ್ ಪಿರಾಮಲ್ ಡೈಮಂಡ್ ಆಕಾರದ ಅಥವಾ ಆ ವಿನ್ಯಾಸದಲ್ಲಿ ರೂಪುಗೊಳ್ಳುತ್ತಿರುವ ಈ ಮನೆ "ಗುಲಿತಾ" ಎಂದು ಹೆಸರಿಸಲಾಗಿದ್ದು, ಅದ್ಭುತ ವಿನ್ಯಾಸ, ವಾಸ್ತುಶಿಲ್ಪ ಮತ್ತು ಸಂಪೂರ್ಣ ಐಶ್ವರ್ಯದ ಪರಿಪೂರ್ಣ ಮಿಶ್ರಣವಾಗಿದೆ ಅಂದ್ರೂ ತಪ್ಪಾಗಲಾರದು. ಈ ಮಹಲಿನಲ್ಲಿ ಏನೇನಿದೆ, ವಿಶೇಷತೆ ಇತ್ಯಾದಿಗಳ ಬಗ್ಗೆ ನೋಡೋಣ

ಅತಿ ದೊಡ್ಡ ಉಡುಗೊರೆ.!
ಡಿಸೆಂಬರ್ 2018 ರಲ್ಲಿ ಉದ್ಯಮಿ ಆನಂದ್ ಪಿರಾಮಲ್ ಅವರನ್ನು ಇಶಾ ಅಂಬಾನಿ ವರಿಸಿದಾಗ, ಅವರಿಗೆ ನೀಡಲಾದ ವಿವಾಹದ ಅಸಾಧಾರಣ ಉಡುಗೊರೆ ಇದಾಗಿದೆ ಎನ್ನಲಾಗಿದೆ. ಆನಂದ್ ಅವರ ತಂದೆತಾಯಿಗಳಾದ ಸ್ವಾತಿ ಮತ್ತು ಅಜಯ್ ಪಿರಾಮಲ್ ಅವರು ನವವಿವಾಹಿತರಿಗೆ ಸಮುದ್ರಕ್ಕೆ ಎದುರಾಗಿರುವ ನಿಂತಿರುವ ಅದ್ಭುತವಾದ ಗುಲಿತಾ ಎಂಬ ಮಹಲನ್ನುಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.
ಇಂಡಿಯಾ.ಕಾಮ್ ವರದಿಯ ಪ್ರಕಾರ, ಪಿರಾಮಲ್ ಕುಟುಂಬವು ಈ ಆಸ್ತಿಯನ್ನು 2012 ರಲ್ಲಿ ಹಿಂದೂಸ್ತಾನ್ ಯೂನಿಲಿವರ್‌ನಿಂದ ಅಂದಾಜು $61.2 ಮಿಲಿಯನ್‌ಗೆ (ಸುಮಾರು 450 ಕೋಟಿ ರೂಪಾಯಿಗಳು) ಖರೀದಿಸಿತ್ತು. ಕಾಲಾನಂತರದಲ್ಲಿ ಈ ಆಸ್ತಿಯ ಮೌಲ್ಯವು ಗಣನೀಯವಾಗಿ ಏರಿಕೆಯಾಗಿದ್ದು, ಈಗ NoBroker.com ಪ್ರಕಾರ ಇದರ ಅಂದಾಜು ಮೌಲ್ಯ ಸುಮಾರು $100 ಮಿಲಿಯನ್ (ಅಂದಾಜು 818 ಕೋಟಿ ರೂಪಾಯಿಗಳು) ಎಂದು ಹೇಳಲಾಗಿದೆ.
ವಜ್ರದ ಥೀಮ್‌ನೊಂದಿಗೆ ವಾಸ್ತುಶಿಲ್ಪ ವೈಭವದ "ಗುಲಿತಾ"ದ ವಿಶೇಷತೆಗಳು
ಮುಂಬೈನಲ್ಲಿರುವ ಮುಕೇಶ್ ಅಂಬಾನಿಯವರ ನಿವಾಸ 'ಆಂಟಿಲಿಯಾ'ವು ಬಕಿಂಗ್ಹ್ಯಾಮ್ ಅರಮನೆಯ ನಂತರ ವಿಶ್ವದ ಎರಡನೇ ಅತಿ ದುಬಾರಿ ಖಾಸಗಿ ನಿವಾಸವಾಗಿದೆ. ಇದು 173 ಮೀಟರ್ ಎತ್ತರವಾಗಿದ್ದು, 27 ಅಂತಸ್ತುಗಳನ್ನು ಹೊಂದಿದೆ. 'ಗುಲಿತಾ' 'ಆಂಟಿಲಿಯಾ'ದಿಂದ ಕೇವಲ 4.5 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಂದ ಸಮುದ್ರ ಮತ್ತು ಬಾಂದ್ರಾ-ವರ್ಲಿ ಸಮುದ್ರ ಸೇತುವೆಯ ಸುಂದರ ನೋಟವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಲಂಡನ್ ಮೂಲದ ವಾಸ್ತುಶಿಲ್ಪ ಸಂಸ್ಥೆಯಾದ ಎಕರ್ಸ್ಲೆ ಓ'ಕಲ್ಲಾಘನ್ ಅವರು ವಿನ್ಯಾಸಗೊಳಿಸಿದ ಈ ಭವ್ಯವಾದ ಮಹಲು, ವಜ್ರದ ಆಕಾರದ ವಿನ್ಯಾಸದೊಂದಿಗೆ ಐಷಾರಾಮಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡುವಂತೆ, ಈ ಆಸ್ತಿಯಲ್ಲಿ ಅತ್ಯಾಧುನಿಕ 3D ಮಾಡೆಲಿಂಗ್ ಉಪಕರಣಗಳನ್ನು ಬಳಸಿ ರಚಿಸಲಾದ ವಿಶಿಷ್ಟವಾದ ಮೂರು ಮೆರುಗುಗೊಳಿಸಲಾದ ಉಕ್ಕಿನ 'ತಾಳೆ ಮರ (palm tree)'ದಂತಹ ರಚನೆಗಳಿವೆ. ಅವುಗಳಲ್ಲಿ ಅತಿ ದೊಡ್ಡದಾದ ರಚನೆಯು ಬರೋಬ್ಬರಿ 11 ಮೀಟರ್ ಎತ್ತರವನ್ನು ಹೊಂದಿದೆ ಎನ್ನಲಾಗಿದೆ.
ಗುಲಿಟಾ' ಮುಂಬೈನ ವರ್ಲಿ ಸಮುದ್ರ ತೀರ ಪ್ರದೇಶದಲ್ಲಿದೆ ಮತ್ತು ಇದು 50,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಈ ಭವ್ಯವಾದ ಮಹಲಿನಲ್ಲಿ ತಕ್ಷಣವೇ ಗಮನ ಸೆಳೆಯುವುದು ಅದರ ವಿಶಾಲವಾದ ಗಾಜಿನ ಗೋಡೆಗಳು. ಇವು ವಜ್ರದ ವಿನ್ಯಾಸಕ್ಕೆ ಪೂರಕವಾಗಿರುವುದಲ್ಲದೆ, ಅರಬ್ಬೀ ಸಮುದ್ರದ ಅದ್ಬುತ ನೋಟವನ್ನು ಒದಗಿಸುತ್ತವೆ
ಈ ಭವ್ಯವಾದ ಮನೆಯು ಐದು ಅಂತಸ್ತುಗಳನ್ನು ಹೊಂದಿದ್ದು, ಅದಕ್ಕೆ ಪೂರಕವಾಗಿ ಮೂರು ನೆಲಮಾಳಿಗೆಯ ಹಂತಗಳಿವೆ, ಎಲ್ಲಾ ಅಂತಸ್ತುಆಧುನಿಕ ಸೌಕರ್ಯಗಳನ್ನು ಒಳಗೊಂಡಿದೆ. ಕೆಳಗಿನ ನೆಲಮಾಳಿಗೆಗಳು ಸೇವೆಗಳು ಮತ್ತು ವಾಹನ ನಿಲುಗಡೆಗೆ ಮೀಸಲಾಗಿವೆ. ನೆಲ ಮಹಡಿಯು ಪ್ರಭಾವಶಾಲಿ ಪ್ರವೇಶ ದ್ವಾರವಾಗಿದ್ದು, ಇದು ಮೂರು ಅಂತಸ್ತಿನ ಎತ್ತರದ ಬಹುಪಯೋಗಿ ಕೊಠಡಿಗಳು ಮತ್ತು ವೃತ್ತಾಕಾರದ ಅಧ್ಯಯನ ಕೊಠಡಿಗಳಿಗೆ ದಾರಿ ಮಾಡಿಕೊಡುತ್ತದೆ. ಮೊದಲ ಮೂರು ಅಂತಸ್ತುಗಳಲ್ಲಿ ಅಡುಗೆ ಮನೆ, ಊಟದ ಕೋಣೆ, ಕಚೇರಿ, ಅಧ್ಯಯನ ಕೊಠಡಿ ಮತ್ತು ಸಿಬ್ಬಂದಿ ವಸತಿಗೃಹಗಳಿವೆ. ನಾಲ್ಕನೇ ಮಹಡಿಯಲ್ಲಿ ಸಮಾರಂಭಗಳನ್ನು ನಡೆಸಲು ದೊಡ್ಡ ಸಭಾಂಗಣವಿದೆ, ಮತ್ತು ಐದನೇ ಮಹಡಿಯಲ್ಲಿ ಮಲಗುವ ಕೋಣೆಗಳಿವೆ. ಇದರ ಜೊತೆಗೆ, 20 ಕಾರುಗಳನ್ನು ನಿಲುಗಡೆ ಮಾಡಲು ಸಾಕಷ್ಟು ಸ್ಥಳಾವಕಾಶವಿದೆ.


Click it and Unblock the Notifications