ಸ್ತ್ರೀ ಎಂದರೆ ಅಷ್ಟೇ ಸಾಕೆ..ಆಕೆ ಮನೆಯ ಮಗಳ ಒಡತಿ, ಗರತಿ. ತಾಯಾಗಿ, ತಂಗಿಯಾಗಿ, ಮಡದಿಯಾಗಿ, ಅಕ್ಕನಾಗಿ ಸಲಹುವಳು. ಅವಳನ್ನು ಸ್ತ್ರೀ ಎಂದರೆ ಅಷ್ಟೇ ಸಾಕೆ? ಒಂದು ಮನೆಯ ಮಗಳಾಗಿ ಹುಟ್ಟಿ, ಮತ್ತೊಂದು ಮನೆಗೆ ಬೆಳಕಾಗುವಳು. ಒಂದು ಹೊಸ ಜೀವಕ್ಕೆ ಜೀವ ಆಗುವವಳು. ಬದುಕಿಡೀ ಗಂಧದಂತೆ ತೇಯುವಳು, ದೀಪದಂತೆ ಉರಿಯುವಳು. ಅವಳು ಬರೀ ಹೆಣ್ಣಲ್ಲ, ಜಗತ್ತಿಗೆ ಕಣ್ಣು...ಪ್ರತಿ ದಿನ ದುಡಿಯುವ ಅವಳಿಗಾಗಿ ಒಂದು ದಿನ ಅವಳ ಜೀವನದ ಕರ್ತವ್ಯವನ್ನು ನೆನಪಿಸಬಾರದೇ?

ಪ್ರತಿ ವರ್ಷ ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ..ಈ ದಿನ ಮಹಿಳೆಯರ ಸಾಧನೆಯನ್ನು ಗೌಗೌರವಿಸುವುದರ ಜೊತೆಗೆ ಲಿಂಗ ಸಮಾನತೆ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ದಿನವಾಗಿದೆ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿರುವ ಕೊಡುಗೆಯನ್ನು ಈ ದಿನದಲ್ಲಿ ವಿಶೇಷವಾಗಿ ನೆನಪಿಸಲಾಗುತ್ತದೆ.
2026ರ ಅಂತರರಾಷ್ಟ್ರೀಯ ಮಹಿಳಾ ದಿನದ ವಿಷಯವಾಗಿ ವಿಶ್ವಸಂಸ್ಥೆ "ಹಕ್ಕುಗಳು, ನ್ಯಾಯ ಮತ್ತು ಕ್ರಿಯೆ - ಎಲ್ಲಾ ಮಹಿಳೆಯರು ಮತ್ತು ಹುಡುಗಿಯರಿಗಾಗಿ" ಎಂಬ ಸಂದೇಶವನ್ನು ಘೋಷಿಸಿದೆ. ಈ ವಿಷಯವು ಮಹಿಳೆಯರಿಗೆ ಕಾನೂನಿನಲ್ಲಿ ಇರುವ ಹಕ್ಕುಗಳು ನಿಜ ಜೀವನದಲ್ಲಿಯೂ ಅನುಷ್ಠಾನವಾಗಬೇಕು ಎಂಬುದನ್ನು ಒತ್ತಿಹೇಳುತ್ತದೆ. ಇನ್ನೂ ಜಗತ್ತಿನ ಹಲವು ಭಾಗಗಳಲ್ಲಿ ಮಹಿಳೆಯರು ಪುರುಷರಿಗೆ ಇರುವ ಹಕ್ಕುಗಳಿಗಿಂತ ಕಡಿಮೆ ಅವಕಾಶಗಳನ್ನು ಪಡೆಯುತ್ತಿದ್ದಾರೆ ಎಂಬುದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ.
ಮಹಿಳಾ ದಿನಾಚರಣೆಯ ಇತಿಹಾಸ ತಿಳಿಯಿರಿ:
ಮಾರ್ಚ್ 8 ದಿನಾಂಕಕ್ಕೂ ವಿಶೇಷವಾದ ಇತಿಹಾಸವಿದೆ. 1908ರಲ್ಲಿ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳೆಯರು ಉತ್ತಮ ವೇತನ, ಕಡಿಮೆ ಕೆಲಸದ ಸಮಯ ಮತ್ತು ಮತದಾನದ ಹಕ್ಕಿಗಾಗಿ ಮೆರವಣಿಗೆ ನಡೆಸಿದರು. ನಂತರ 1910ರಲ್ಲಿ ಡೆನ್ಮಾರ್ಕ್ನ ಕೋಪನ್ಹೇಗನ್ನಲ್ಲಿ ನಡೆದ ಮಹಿಳಾ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸುವ ಕಲ್ಪನೆ ಮುಂದುವರಿಯಿತು. 1917ರಲ್ಲಿ ರಷ್ಯಾದಲ್ಲಿ ಮಹಿಳೆಯರು "ಬ್ರೆಡ್ ಮತ್ತು ಶಾಂತಿ"ಗಾಗಿ ನಡೆಸಿದ ಪ್ರತಿಭಟನೆ ಕೂಡ ಈ ದಿನದ ಇತಿಹಾಸದಲ್ಲಿ ಮಹತ್ವದ ಪಾತ್ರ ವಹಿಸಿದೆ.
ಭಾರತದಲ್ಲಿಯೂ ಮಹಿಳಾ ದಿನವನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಸರ್ಕಾರ ಮತ್ತು ಸಾಮಾಜಿಕ ಸಂಸ್ಥೆಗಳು ಮಹಿಳೆಯರ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತವೆ. ಕೆಲ ನಗರಗಳಲ್ಲಿ ಮಹಿಳೆಯರ ಆರೋಗ್ಯವನ್ನು ಉತ್ತೇಜಿಸಲು ವಿಶೇಷ ಓಟಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಇಂದಿನ ಸಮಾಜದಲ್ಲಿ ಮಹಿಳೆಯರು ಶಿಕ್ಷಣ, ವಿಜ್ಞಾನ, ರಾಜಕೀಯ, ಕ್ರೀಡೆ ಮತ್ತು ವ್ಯಾಪಾರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದರೆ ಇನ್ನೂ ಸಮಾನ ಅವಕಾಶ ಮತ್ತು ಸುರಕ್ಷತೆಗಾಗಿ ಹೋರಾಟ ಮುಂದುವರಿಯುತ್ತಿದೆ. ಆದ್ದರಿಂದ ಮಹಿಳಾ ದಿನವು ಕೇವಲ ಆಚರಣೆಯ ದಿನವಲ್ಲ, ಮಹಿಳೆಯರ ಸಮಾನತೆ ಮತ್ತು ಗೌರವಕ್ಕಾಗಿ ಸಮಾಜ ಒಟ್ಟಾಗಿ ಕೆಲಸ ಮಾಡುವ ಸಂಕಲ್ಪದ ದಿನವಾಗಿದೆ.


Click it and Unblock the Notifications