ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ (Investment) ಮಾಡುವುದು ಪೋಷಕರ ಆದ್ಯ ಕರ್ತವ್ಯವಾಗಿದೆ. ಶಿಕ್ಷಣ, ಆರೋಗ್ಯ ದೃಷ್ಟಿ ಮತ್ತು ಉನ್ನತ ಅಧ್ಯಯನಕ್ಕಾಗಿ ಈ ರೀತಿ ಹೂಡಿಕೆ ಮಾಡಿದ್ರೆ ಬಹಳ ಪ್ರಯೋಜನವಾಗುತ್ತದೆ. ಸರ್ಕಾರಿ ಮತ್ತು ಮಾರುಕಟ್ಟೆ ಆಧಾರಿತ ಯೋಜನೆಗಳ ಮೂಲಕ ನಿಯಮಿತ ಹೂಡಿಕೆಗಳು, ಕಾಲಾನಂತರದಲ್ಲಿ ಉತ್ತಮ ಆದಾಯ ನೀಡುತ್ತದೆ. ಆದ್ದರಿಂದ, ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಪರಿಗಣಿಸಬಹುದಾದ ಪ್ರಮುಖ ಹೂಡಿಕೆ ಆಯ್ಕೆಗಳು ಇಲ್ಲಿವೆ.

ಸುಕನ್ಯಾ ಸಮೃದ್ಧಿ ಯೋಜನೆ:
ಸುಕನ್ಯಾ ಸಮೃದ್ಧಿ ಯೋಜನೆ (SSY) ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಹೂಡಿಕೆ ಮಾಡಬಹುದಾದ ಅದ್ಭುತ ಯೋಜನೆಯಾಗಿದೆ. 'ಬೇಟಿ ಬಚಾವೋ ಬೇಟಿ ಪಡಾವೋ' ಯೋಜನೆಯಡಿ ಇದನ್ನು ಪ್ರಾರಂಭಿಸಲಾಗಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಅತ್ಯಧಿಕ ಬಡ್ಡಿದರವನ್ನು (8.2%) ನೀಡುವ ಸುಕನ್ಯಾ ಸಮೃದ್ಧಿ ಯೋಜನೆ ಅದ್ಭುತವಾಗಿದೆ. ಈ ಯೋಜನೆಯ ಮೂಲಕ ತೆರಿಗೆ ಪ್ರಯೋಜನಗಳನ್ನು ಸಹ ಪಡೆಯಬಹುದು. ಯಾವುದೇ ಪೋಷಕರು ತಮ್ಮ ಹೆಣ್ಣು ಮಗುವಿಗಾಗಿ ಕೇವಲ ₹250 ರಿಂದ SSY ಖಾತೆಯನ್ನು ತೆರೆಯಬಹುದು. ಖಾತೆ ತೆರೆದ ದಿನಾಂಕದಿಂದ ಮಗಳ 21 ವರ್ಷಗಳ ಮುಕ್ತಾಯ ಅವಧಿಯನ್ನು ಇದು ಹೊಂದಿದೆ.
ಎನ್‌ಪಿಎಸ್ ವಾತ್ಸಲ್ಯ ಯೋಜನೆ:
ಎನ್‌ಪಿಎಸ್ ವಾತ್ಸಲ್ಯ ಯೋಜನೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿ ಮಕ್ಕಳಿಗಾಗಿ ರೂಪಿಸಲಾದ ಒಂದು ಯೋಜನೆಯಾಗಿದೆ. 18 ವರ್ಷ ತುಂಬುವವರೆಗೆ ಮಕ್ಕಳಿಗೆ ನಿವೃತ್ತಿ ಉಳಿತಾಯ ಖಾತೆಯನ್ನು ತೆರೆಯಲು ಪೋಷಕರಿಗೆ ಅಥವಾ ಪಾಲಕರಿಗೆ ಅನುಕೂಲವಾಗುವಂತೆ ಇದನ್ನು ಜಾರಿಗೆ ತರಲಾಗಿದೆ. ಮಗು 18 ವರ್ಷ ತಲುಪಿದಾಗ, ಖಾತೆಯು ಆಟೋಮೆಟಿಕ್ ಆಗಿ ಎನ್‌ಪಿಎಸ್ ಟೈರ್ I ಖಾತೆಯಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಚಿಕ್ಕ ವಯಸ್ಸಿನಿಂದಲೇ ನಿವೃತ್ತಿ ಉಳಿತಾಯ ಪ್ರಾರಂಭವಾಗಿ, ಚಕ್ರಬಡ್ಡಿ ಮೂಲಕ ನಂತರ ಹೆಚ್ಚು ಆದಾಯ ಗಳಿಸಬಹುದು. ವಾರ್ಷಿಕ ಕನಿಷ್ಠ ಕೊಡುಗೆ ₹1,000 ಆಗಿದ್ದು, ಇದರಲ್ಲಿ ಹೂಡಿಕೆ ಮಾಡಲು ಗರಿಷ್ಠ ಮಿತಿಯಿಲ್ಲ.
ಪಿಪಿಎಫ್ ಯೋಜನೆ:
ಮಕ್ಕಳಿಗಾಗಿ ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆಯು, ಭವಿಷ್ಯದ ಅಗತ್ಯಗಳಿಗಾಗಿ ದೀರ್ಘಾವಧಿಯ ಉಳಿತಾಯ ನಿಧಿಯನ್ನು ನಿರ್ಮಿಸಲು ಅತ್ಯುತ್ತಮ ಮಾರ್ಗವಾಗಿದೆ. 15 ವರ್ಷಗಳ ಲಾಕ್-ಇನ್ ಅವಧಿ, ತೆರಿಗೆ ಪ್ರಯೋಜನಗಳನ್ನು ಪಡೆಯಲು ಇದು ಉತ್ತಮವಾಗಿದೆ. ಆದ್ದರಿಂದ ಪೋಷಕರು ಮಗುವಿನ ಹೆಸರಿನಲ್ಲಿ PPF ಖಾತೆಯನ್ನು ತೆರೆಯಬಹುದು. ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ಮಾತ್ರ ಭಾಗಶಃ ಹಣವನ್ನು ಹಿಂಪಡೆಯಲು ಅನುಮತಿ ಇದೆ. ಅಲ್ಲದೆ, ಹಿಂಪಡೆಯುವ ಹಣವನ್ನು ಮಗುವಿನ ಅನುಕೂಲಕ್ಕಾಗಿ ಮಾತ್ರ ಬಳಸಬೇಕು.
ಆರ್‌ಡಿ ಯೋಜನೆ:
ಅನೇಕ ಬ್ಯಾಂಕ್‌ಗಳು ಮಕ್ಕಳಿಗಾಗಿಯೇ ವಿಶೇಷ ರಿಕರಿಂಗ್ ಠೇವಣಿ (RD) ಯೋಜನೆಗಳನ್ನು ನೀಡುತ್ತದೆ. ಇವು ಕಡಿಮೆ ಹೂಡಿಕೆ ಮಾಡಿದರೂ, ಹೆಚ್ಚಿನ ಬಡ್ಡಿದರಗಳಂತಹ ಆಕರ್ಷಕ ಪ್ರಯೋಜನಗಳನ್ನು ಒದಗಿಸುತ್ತವೆ. RD ಖಾತೆಯಲ್ಲಿ, ನಿಗದಿತ ಅವಧಿಗೆ ಪ್ರತಿ ತಿಂಗಳು ಪೂರ್ವನಿರ್ಧರಿತ ಮೊತ್ತವನ್ನು ಠೇವಣಿ ಇಡಲಾಗುತ್ತದೆ. ಉಳಿತಾಯದ ಮೇಲೆ ಸ್ಥಿರ ಬಡ್ಡಿದರ ಸಿಗುತ್ತದೆ, ಆದರೂ ಈ ದರ ಬ್ಯಾಂಕ್‌ಗಳಿಂದ ಬ್ಯಾಂಕ್‌ಗಳಿಗೆ ಬದಲಾಗುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications