ಕ್ರಿಕೆಟ್ ಪ್ರೇಕ್ಷಕರು ಕಾದು ಕುಳಿತಿರುವ, ರಣರೋಚಕ ಐಪಿಎಲ್ 2026 ರ ಆರಂಭ ಯಾವಾಗ ಅನ್ನೋದೆ ಎಲ್ಲರ ಪ್ರಶ್ನೆ. ಇದೀಗ ಕೊನೆಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2026 (IPL 2026) 19 ನೇ ಸೀಸನ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈಗಾಗಲೇ ಬಿಸಿಸಿಐ ಐಪಿಎಲ್ ಆರಂಭದ ದಿನಾಂಕವನ್ನು ಘೋಷಣೆ ಮಾಡಿದ್ದು, ಈ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ ಓದಿ.
ಯಾವಾಗ ಆರಂಭ ಐಪಿಎಲ್ 2026?
19 ಆವೃತ್ತಿಯ ಐಪಿಎಲ್ 2026 (IPL 2026) ಇದೇ ಮಾರ್ಚ್ 28, 2026 ರಂದು ಅಧಿಕೃತವಾಗಿ ಆರಂಭವಾಗಲಿದೆ. ಇನ್ನು ಈ ಬಗ್ಗೆ ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ ಭಾನುವಾರ ಘೋಷಣೆ ಮಾಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ರ (ICC Men's T20 World Cup 2026) ಫೈನಲ್ ಕದನಕ್ಕೂ ಮುನ್ನ ಈ ಐಪಿಎಲ್ ಆರಂಭದ ದಿನಾಂಕ ಹೊರಬಿದ್ದಿದೆ. ಇನ್ನು ಐಪಿಎಲ್ 2026ರ ಆರಂಭದ ದಿನಾಂಕವನ್ನು ಮಾತ್ರ ಘೋಷಿಸಲಾಗಿದ್ದು, ಇನ್ನೂ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.

ಐಪಿಎಲ್ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಷಯಗಳು:
ಐಪಿಎಲ್ ಪ್ರಾರಂಭದ ದಿನಾಂಕ: ಮಾರ್ಚ್ 28, 2026 (ಶನಿವಾರ)
ಫೈನಲ್ ದಿನಾಂಕ: ಮೇ 31, 2026
ಒಟ್ಟು ಪಂದ್ಯಾಟದ ಅವಧಿ: ಸುಮಾರು 2 ತಿಂಗಳು
ಆಡುವ ತಂಡಗಳ ಸಂಖ್ಯೆ: 10 ತಂಡಗಳು
ಇನ್ನು ಸಂಪ್ರದಾಯದಂತೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಉದ್ಘಾಟನಾ ಪಂದ್ಯವನ್ನು ಆಯೋಜಿಸಲಿದೆ. ಆದ್ದರಿಂದ ಈ ಪಂದ್ಯಾಟ ಬೆಂಗಳೂರಿನಲ್ಲೇ ನಡೆಯುವ ಸಾಧ್ಯತೆ ಇದೆ. ವರದಿ ಪ್ರಕಾರ ಈ ಉದ್ಘಾಟನಾ ಪಂದ್ಯ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾನ್ ಕಿಂಗ್ಸ್ ನಡುವೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಆರ್‌ಸಿಬಿ ಹೋಮ್ ಗ್ರೌಂಡ್‌ನಲ್ಲಿ ನಡೆಯಲಿರುವ ಪಂದ್ಯಾಟಗಳು:
ಕಳೆದ ವರ್ಷ ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ದುರಂತ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಸೀಸನ್ ಆರಂಭಕ್ಕೂ ಮೊದಲೇ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ವರ್ಷ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಒಟ್ಟು 5 ಹೋಮ್ ಪಂದ್ಯಗಳು ಮತ್ತು ಒಂದು ಪ್ಲೇ ಆಫ್ ಮ್ಯಾಚ್ ಮತ್ತು ಫೈನಲ್ ನಡೆಯಲಿದೆ ಎಂದು ಹೇಳಲಾಗಿದೆ.
ಯಾವಾಗ ವೇಳಾಪಟ್ಟಿ ಬಿಡುಗಡೆ?
ಈಗಾಗಲೇ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡಿನಲ್ಲಿ ಚುನಾವಣೆ ಘೋಷಣೆಯಾಗಿರುವುದರಿಂದ, ಬಿಸಿಸಿಐ ಆರಂಭದಲ್ಲಿ ಐಪಿಎಲ್ 2026 ರ ಮೊದಲ 15 ದಿನಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಿದೆ. ಉಳಿದ ವೇಳಾಪಟ್ಟಿಯನ್ನು ಮತದಾನ ನಡೆಯುವ ದಿನಾಂಕಗಳು ಬಹಿರಂಗವಾದ ನಂತರ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಅತ್ತ ಐಸಿಸಿ ಮೆನ್ಸ್ ಟಿ20 ವಿಶ್ವಕಪ್ ಟೂರ್ನಿ ಮುಗಿಯುತ್ತಿದ್ದಂತೆ, ಕ್ರಿಕೆಟ್ ಪ್ರೇಮಿಗಳಿಗೆ ಬಿಸಿಸಿಐ ಗುಡ್ ನ್ಯೂಸ್ ಕೊಟ್ಟಿದೆ. ಕೊನೆಗೂ ಐಪಿಎಲ್ ಪಂದ್ಯಾಟದ ದಿನಾಂಕ ಬಿಡುಗಡೆಯಾಗಿದ್ದು, ಕೆಲವೇ ದಿನಗಳಲ್ಲಿ ಐಪಿಎಲ್ ಪಂದ್ಯಾಟದ ವೇಳಾಪಟ್ಟಿ ಕೂಡಾ ಬಿಡುಗಡೆಯಾಗುವ ನಿರೀಕ್ಷೆಯಿದೆ.


Click it and Unblock the Notifications