18 ವರ್ಷಗಳಿಕ ಬಳಿಕ ಕಪ್ ಗೆದ್ದ ಆರ್‌ಸಿಬಿ (RCB) ವಿಜಯೋತ್ಸವದ ವೇಳೆ ದೊಡ್ಡ ದುರಂತವೇ ನಡೆದಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಉಂಟಾದ ಕಾಲ್ತುಳಿತದಿಂದಾಗಿ 11 ಜನ ದಾರುಣವಾಗಿ ಸಾವನ್ನಪ್ಪಿದರು. ಆ ದಿನದಿಂದ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಬಗ್ಗೆ ಉಂಟಾದ ಗೊಂದಲ ಇನ್ನೂ ಮುಗಿದಿಲ್ಲ. ಅದರಲ್ಲೂ ಮುಂಬರುವ 19ನೇ ಸೀಸನ್ ಐಪಿಎಲ್ ಪಂದ್ಯಾಟ (IPL Match) ಎಲ್ಲಿ ನಡೆಯುತ್ತೇ ಅನ್ನೋದೆ ಎಲ್ಲರಿಗೆ ಗೊಂದಲ ಉಂಟಾಗಿದೆ. ಇದೀಗ ಮತ್ತೆ ಚರ್ಚೆ ಮುನ್ನೆಲೆಗೆ ಬಂದಿದ್ದು, ಸರ್ಕಾರ ಒಪ್ಪಿಗೆ ನೀಡಿದ್ರೂ, ಆರ್‌ಸಿಬಿ ಫ್ರಾಂಚೈಸಿ ಐಪಿಎಲ್ ಪಂದ್ಯ ಆಡಲು ಸಿದ್ಧರಿಲ್ಲ.

ಇದೀಗ ಐಪಿಎಲ್ 2026ರ ವೇಳಾಪಟ್ಟಿ ಅಂತಿಮಗೊಳಿಸಲು ಚುನಾವಣಾ ಆಯೋಗದ ಘೋಷಣೆಗಾಗಿ ಬಿಸಿಸಿಐ ಕಾದು ಕುಳಿತಿದೆ. ತಮಿಳುನಾಡು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗಳ ದಿನಾಂಕಗಳು ನಿಗದಿಯಾದ ಬೆನ್ನಲ್ಲೇ, ಐಪಿಎಲ್ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.
ಐಪಿಎಲ್ ಪಂದ್ಯಾಟಕ್ಕೆ ಸ್ಥಳ ನಿಗದಿ
ವರದಿ ಪ್ರಕಾರ, ಐಪಿಎಲ್ 2026ರ ಪಂದ್ಯಾವಳಿಗೆ ಒಟ್ಟು 18 ಸ್ಥಳಗಳನ್ನು ಯೋಜಿಸಲಾಗಿದೆ. ಅವುಗಳೆಂದರೆ ಬೆಂಗಳೂರು (ಎಂ. ಚಿನ್ನಸ್ವಾಮಿ ಸ್ಟೇಡಿಯಂ), ಚೆನ್ನೈ, ದೆಹಲಿ, ಮುಂಬೈ (ವಾಂಖೆಡೆ ಸ್ಟೇಡಿಯಂ), ಕೋಲ್ಕತ್ತಾ, ಅಹಮದಾಬಾದ್, ಹೈದರಾಬಾದ್, ಪುಣೆ, ರಾಯ್‌ಪುರ, ರಾಂಚಿ, ನವಿ ಮುಂಬೈ (ಡಿವೈ ಪಾಟೀಲ್ ಸ್ಟೇಡಿಯಂ), ತಿರುವನಂತಪುರಂ, ಲಕ್ನೋ, ಧರ್ಮಶಾಲಾ, ವಿಶಾಖಪಟ್ಟಣಂ, ಗುವಾಹಟಿ, ಜೈಪುರ ಮತ್ತು ಹೊಸ ಚಂಡೀಗಢ್‌ಗಳಾಗಿದೆ.
ಈ 18 ಪ್ರಸ್ತಾವಿತ ಕ್ರೀಡಾಂಗಣಗಳಲ್ಲಿ 13 ಸ್ಥಳಗಳು ಐಪಿಎಲ್ 2025ರ ಪಂದ್ಯಗಳಿಗೂ ಆತಿಥ್ಯ ವಹಿಸಿದ್ದವು. ಪುಣೆ, ರಾಯ್‌ಪುರ ಮತ್ತು ನವಿ ಮುಂಬೈ ಈ ಬಾರಿ ಹೊಸದಾಗಿ ಪಟ್ಟಿಗೆ ಸೇರ್ಪಡೆಯಾಗಿವೆ. ತಮಿಳುನಾಡು ವಿಧಾನಸಭಾ ಚುನಾವಣೆಯಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್‌ನ ಕೆಲವು ತವರು ಪಂದ್ಯಗಳು ರಾಂಚಿ ಮತ್ತು ತಿರುವನಂತಪುರಂನಲ್ಲಿ ನಡೆಯುವ ನಿರೀಕ್ಷೆಯಿದೆ.
ಐಎಎನ್‌ಎಸ್ ಸುದ್ದಿ ಸಂಸ್ಥೆಗೆ ಬಿಸಿಸಿಐ ಮೂಲಗಳು ತಿಳಿಸಿರುವ ಮಾಹಿತಿಯ ಪ್ರಕಾರ, "ನಾವು ಐಪಿಎಲ್ ವೇಳಾಪಟ್ಟಿಯಲ್ಲಿ ಕೆಲಸ ಮಾಡುತ್ತಿದ್ದೇವೆ, ಆದರೆ ಸರ್ಕಾರದ ಚುನಾವಣಾ ದಿನಾಂಕಗಳ ಘೋಷಣೆಗಾಗಿ ಕಾಯುತ್ತಿದ್ದೇವೆ. ಆ ದಿನಾಂಕಗಳು ನಿಗದಿಯಾದ್ರೆ, ಚುನಾವಣಾ ಪ್ರಕ್ರಿಯೆಗೆ ಅಡ್ಡಿಯಾಗದಂತೆ ಅಥವಾ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಯಾವುದೇ ತೊಂದರೆಯಾಗದಂತೆ ವೇಳಾಪಟ್ಟಿಯನ್ನು ರೂಪಿಸಲು ಸಾಧ್ಯವಾಗುತ್ತದೆ" ಎಂದು ತಿಳಿಸಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳಿಗೆ ತಮ್ಮ ಐಪಿಎಲ್ 2026ರ ತವರು ಪಂದ್ಯಗಳ ಸ್ಥಳಗಳ ಕುರಿತು ಒಂದು ವಾರದೊಳಗೆ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಬಿಸಿಸಿಐ ಸೂಚಿಸಿದೆ.
ಸರ್ಕಾರ ಅನುಮತಿ ನೀಡಿದ್ರೂ, ಆರ್‌ಸಿಬಿ ಫ್ರಾಂಚೈಸಿ ಪಂದ್ಯಾಟ ಆಡಲು ಒಪ್ಪದೇ ಇರುವ ಕಾರಣ, ಸುದ್ದಿಗೋಷ್ಠಿ ನಡೆಸಿದ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, "ಆರ್‌ಸಿಬಿ ಫ್ರಾಂಚೈಸಿ ಬೆಂಗಳೂರಿನಲ್ಲಿ ಪಂದ್ಯಗಳನ್ನಾಡಲು ಹಿಂಜರಿಯುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಅವರು ಕೂಡಾ ಸರಕಾರದ ಜೊತೆ, ಬಿಸಿಸಿಐ ಜೊತೆ ಚರ್ಚೆ ಮಾಡಬೇಕಿದೆ. ಈಗಾಗಲೇ ಯಾವುದೇ ತೊಂದರೆಯಾಗುವುದಿಲ್ಲ ಎಂದು ಫ್ರಾಂಚೈಸಿಗೆ ಭರವಸೆ ನೀಡಿದ್ದೇನೆ. ಆದ್ದರಿಂದ ಪಂದ್ಯಾಟ ಆಡುವ ಬಗ್ಗೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಅವರೇ ಡಿಸೈಡ್ ಮಾಡಬೇಕು." ಎಂದು ಹೇಳಿದ್ದಾರೆ.


Click it and Unblock the Notifications