ಇನ್ನೇನು ಕೆಲವೇ ದಿನಗಳಲ್ಲಿ 19ನೇ ಆವೃತ್ತಿಯ ಐಪಿಎಲ್ ಪಂದ್ಯಾಟ (IPL Match) ಆರಂಭವಾಗಲಿದೆ. ಆರ್‌ಸಿಬಿ ಈ ಬಾರಿ ತವರು ಮೈದಾನ ಬೆಂಗಳೂರಿನಲ್ಲಿ ಆಡುತ್ತಾ ಎಂಬ ಪ್ರಶ್ನೆ ಎದುರಾಗಿದೆ. ಆದ್ರೆ ಇದೀಗ ಆರ್‌ಸಿಬಿ ಖರೀದಿ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಈಗಾಗಲೇ ಆರ್‌ಸಿಬಿ ಫ್ರಾಂಚೈಸಿ ಮಾರಾಟದ ಬಗ್ಗೆ ಊಹಾಪೋಹಗಳು ಹರಿದಾಡುತ್ತಲೇ ಇತ್ತು. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ (Virat Kohli-Anushka Sharma) ಜೊತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಷೇರು ಖರೀದಿಸಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಈ ಒಪ್ಪಂದದ ಅಂದಾಜು 400 ಕೋಟಿ ರೂ. ಎಂದು ಉದ್ಯಮ ತಜ್ಞರು ಅಂದಾಜಿಸಿದ್ದಾರೆ.

ವೃತ್ತಿಜೀವನದುದ್ದಕ್ಕೂ ಆರ್‌ಸಿಬಿ ಪರ ಆಡಿದ ಕೊಹ್ಲಿ, ಈಗ ಅದರ ಪಾಲುದಾರರಾಗಲು ಬಯಸಿದ್ದಾರೆ ಎಂದು ವರದಿಯಾಗಿದೆ. ಡಿಯಾಜಿಯೋ ಇಂಡಿಯಾ ಮಾಲೀಕತ್ವದಲ್ಲಿರುವ ಆರ್‌ಸಿಬಿಯನ್ನು ಐಪಿಎಲ್ 2025ರ ಸೀಸನ್ ನಂತರ ಮಾರಾಟ ಮಾಡಲು ಯೋಜಿಸುತ್ತಿದೆ ಎಂದು ಹಲವು ವರದಿಗಳಾಗಿತ್ತು. ಇದೀಗ ಈ ಆರ್‌ಸಿಬಿ ಪಾಲುದಾರರಾಗಲು ಕೊಹ್ಲಿ ಪ್ಲಾನ್ ಮಾಡಿದ್ದಾರೆ ಎಂದು ಮತ್ತೊಂದು ಸುದ್ದಿ ಹೊರಬಿದ್ದಿದೆ.
ಮಾರಾಟವಾಗುತ್ತಾ ಆರ್‌ಸಿಬಿ?
ಫ್ರಾಂಚೈಸಿಯ ಅಂದಾಜು ಮೌಲ್ಯ 2 ಬಿಲಿಯನ್ ಡಾಲರ್ (ಸುಮಾರು 17,000 ಕೋಟಿ ರೂ.). ಸದ್ಯ ಮಾಲೀಕತ್ವ ಹೊಂದಿರುವ ಡಿಯಾಜಿಯೋ, ಅಮೆರಿಕಾದಲ್ಲಿ ಸುಂಕ ಹೆಚ್ಚಳ-ಗ್ರಾಹಕರ ಇಳಿಕೆಯಿಂದ ಮದ್ಯ ಮಾರಾಟ ಕುಸಿದು ಆರ್ಥಿಕ ತೊಂದರೆ ಎದುರಿಸುತ್ತಿದೆ. ಆದ್ದರಿಂದ ಆರ್‌ಸಿಬಿ ಮಾರಾಟದ ಹಣವನ್ನು ತನ್ನ ಮುಖ್ಯ ವ್ಯವಹಾರದಲ್ಲಿ ಹೂಡಿಕೆ ಮಾಡಲು ಡಿಯಾಜಿಯೋ ಯೋಚಿಸಿದೆ ಎನ್ನಲಾಗುತ್ತಿದೆ. ಐಪಿಎಲ್ 2025ರ ಯಶಸ್ಸು ಆರ್‌ಸಿಬಿ ಮೌಲ್ಯ ದ್ವಿಗುಣಗೊಳಿಸಿದ್ದರಿಂದ, ಈ ಜನಪ್ರಿಯತೆ ಬಳಸಿಕೊಳ್ಳಲು ಸಂಸ್ಥೆ ಮುಂದಾಗಿದೆ. ಆದರೆ, ಇದುವರೆಗೆ ಅಧಿಕೃತ ಹೇಳಿಕೆ ಎಲ್ಲೂ ವರದಿಯಾಗಿಲ್ಲ.
ರಣಬೀರ್ ಕಪೂರ್ ಪಾಲು?
ಆರ್‌ಸಿಬಿ ಖರೀದಿಗೆ ಅದಾನಿ ಗ್ರೂಪ್, ಜೇಎಸ್‌ಡಬ್ಲ್ಯೂ-ಪಾರ್ಟ್ ಜಿಂದಾಲ್ (ದೆಹಲಿ ಕ್ಯಾಪಿಟಲ್ಸ್ ಸಹ-ಮಾಲೀಕರು), ಆಧಾರ್ ಪೂನಾವಾಲಾ, ಹೊಂಬಾಳೆ ಫಿಲ್ಮ್ಸ್, ಎರಡು ಅಮೆರಿಕನ್ ಕಂಪನಿಗಳು ಸೇರಿದಂತೆ ಹಲವರು ಆಸಕ್ತರಾಗಿದ್ದಾರೆ ಎಂದು ವರದಿಯಾಗಿದೆ. ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ಪ್ರಕಾರ, ಅನುಷ್ಕಾ ಶರ್ಮಾ ಜೊತೆ ನಟ ರಣಬೀರ್ ಕಪೂರ್ ಕೂಡ 2% ಷೇರುಗಳನ್ನು (ಸುಮಾರು 300 ಕೋಟಿ ರೂ.) ಖರೀದಿಸಲು ಸಿದ್ಧರಿದ್ದಾರೆ ಎಂದು ಹೇಳಲಾಗಿದೆ.
ಕೊಹ್ಲಿ ಏಕೆ ಹೂಡಿಕೆ ಮಾಡುವುದಿಲ್ಲ?
ಅನುಷ್ಕಾ, ಆರ್‌ಸಿಬಿ ಪಾಲು ಖರೀದಿಗೆ ಬಿಸಿಸಿಐ ನಿಯಮಗಳು ಸವಾಲಾಗಿವೆ. ಐಪಿಎಲ್ ಆಟಗಾರರು ಫ್ರಾಂಚೈಸಿಯಲ್ಲಿ ಪಾಲು ಹೊಂದಲು ಬಿಸಿಸಿಐ ನಿಯಮಗಳು ಅನುಮತಿಸುವುದಿಲ್ಲ. ಕೊಹ್ಲಿ ಆರ್‌ಸಿಬಿ ಐಕಾನ್ ಆಗಿರುವುದರಿಂದ, ಅವರ ಪತ್ನಿ ಹೆಸರಿನಲ್ಲಿ ಷೇರು ಖರೀದಿ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಬಿಸಿಸಿಐ ನೀತಿ ಅಧಿಕಾರಿಗಳ ಅನುಮತಿ ಅಗತ್ಯವೆಂದು ಹೇಳಲಾಗಿದೆ.
ಕೊಹ್ಲಿ ವೃತ್ತಿಜೀವನದ ಅಂತಿಮ ಹಂತದಲ್ಲಿರುವುದರಿಂದ, ಬಿಸಿಸಿಐ ಅನುಮತಿ ನೀಡುವ ಸಾಧ್ಯತೆಯಿದೆ ಎಂದೂ ಹೇಳಲಾಗುತ್ತಿದೆ. ಕೊಹ್ಲಿ ಆರ್‌ಸಿಬಿ ಮಾಲೀಕರಾಗಬೇಕು ಎಂಬ ಅಭಿಮಾನಿಗಳ ಆಶಯ, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.


Click it and Unblock the Notifications