ಇರಾನ್-ಇಸ್ರೇಲ್ ನಡುವಿನ ಉದ್ವಿಗ್ನತೆ ಕ್ಷಣ ಕ್ಷಣಕ್ಕೂ ಭೀಕರವಾಗುತ್ತಿದೆ. ಸಾಲು ಸಾಲು ಸಾವು ನೋವುಗಳು. ಸಿಡಿಮದ್ದಿನ ಸದ್ದುಗಳು ಭೀತಿ ಹೆಚ್ಚಿಸಿವೆ. ದಾಳಿಯ ಆರ್ಭಟಕ್ಕೆ ಇರಾನ್ ಅಲ್ಲೋಲ ಕಲ್ಲೋಲವಾಗಿದೆ. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಅಯತೊಲ್ಲಾ ಅಲಿ ಖಮೇನಿ ಅಸುನೀಗಿದ್ದಾರೆ.

ಹೌದು, 1989ರಿಂದ ಇರಾನ್ ದೇಶದ ಸರ್ವೋಚ್ಚ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಅಯತೊಲ್ಲಾ ಅಲಿ ಖಮೇನಿ ಮೃಪಟ್ಟಿದ್ದಾರೆ. ಅವರ ಸಾವಿನ ಸುದ್ದಿ ವಿಶ್ವ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹಲವು ವರದಿಗಳ ಪ್ರಕಾರ ಅಮೆರಿಕಾ ಮತ್ತು ಇಸ್ರೇಲ್ ಸೇನೆಗಳು ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಅವರು ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ. ಟೆಹ್ರಾನ್ನಲ್ಲಿರುವ ಭದ್ರತಾ ವಲಯದ ಒಳಗೆ ನಡೆದ ದಾಳಿಯೇ ಈ ಘಟನೆಗೆ ಕಾರಣವಾಗಿದ್ದು, ಇದು ಇರಾನ್ ಸರ್ಕಾರಕ್ಕೂ ಜನತೆಗೆ ದೊಡ್ಡ ಆಘಾತವಾಗಿದೆ. ನಂತರ ಇರಾನ್ ರಾಜ್ಯದ ದೂರದರ್ಶನವು ಖಮೇನಿ ಅವರ ಸಾವನ್ನು ದೃಢಪಡಿಸಿದ್ದು, ದೇಶದಾದ್ಯಂತ 40 ದಿನಗಳ ಶೋಕಾಚರಣೆ ಘೋಷಿಸಲಾಗಿದೆ.
ಈ ದಾಳಿ ಸಾಮಾನ್ಯ ಸೈನಿಕ ಕ್ರಮವಲ್ಲ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಕಳೆದ ಕೆಲವು ತಿಂಗಳಿಂದ ಇರಾನ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿತ್ತು. ವಿಶೇಷವಾಗಿ ಇರಾನ್ನ ಪರಮಾಣು ಕಾರ್ಯಕ್ರಮದ ಕುರಿತು ನಡೆದ ಮಾತುಕತೆಗಳು ಸ್ಪಷ್ಟ ಫಲಿತಾಂಶ ನೀಡಲಿಲ್ಲ. ಇದೇ ಹಿನ್ನೆಲೆಯಲ್ಲಿ ಇರಾನ್ ಮೇಲೆ ಒತ್ತಡ ಹೆಚ್ಚಿಸುವ ಉದ್ದೇಶದಿಂದ ಈ ದಾಳಿ ನಡೆದಿದೆ ಎಂದು ಅಂದಾಜಿಸಲಾಗಿದೆ. ಅಮೆರಿಕಾ ಸೇನೆಯ ಹೇಳಿಕೆಯಲ್ಲಿ, ಇರಾನ್ನ ಕ್ಷಿಪಣಿ ತಾಣಗಳು, ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಕ್ರಾಂತಿಕಾರಿ ಗಾರ್ಡ್ ಕಮಾಂಡ್ ಕೇಂದ್ರಗಳನ್ನು ಗುರಿಯಾಗಿಸಲಾಗಿದೆ ಎಂದು ತಿಳಿಸಲಾಗಿದೆ.
ಖಮೇನಿ ಅವರು ಮೂರು ದಶಕಕ್ಕಿಂತ ಹೆಚ್ಚು ಕಾಲ ಇರಾನ್ನ ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ದೇಶದ ಪ್ರಮುಖ ನಿರ್ಧಾರಗಳು ಅವರ ಮಾರ್ಗದರ್ಶನದಲ್ಲಿ ತೆಗೆದುಕೊಳ್ಳಲಾಗುತ್ತಿತ್ತು. ಆದ್ದರಿಂದ ಅವರ ಅಕಾಲಿಕ ಸಾವಿನಿಂದ ಇರಾನ್ನ ಒಳರಾಜಕೀಯದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ. ಮುಂದಿನ ಸರ್ವೋಚ್ಚ ನಾಯಕ ಯಾರು ಎಂಬ ಪ್ರಶ್ನೆ ಈಗ ದೊಡ್ಡ ಚರ್ಚೆಯ ವಿಷಯವಾಗಿದೆ.
ಈ ಬೆಳವಣಿಗೆಗೆ ಪ್ರತಿಯಾಗಿ ಇರಾನ್ ತಕ್ಷಣವೇ ಕಠಿಣ ಕ್ರಮ ಕೈಗೊಂಡಿದೆ. ಇಸ್ರೇಲ್ ಸೇರಿದಂತೆ ಕೆಲವು ಅರಬ್ ರಾಷ್ಟ್ರಗಳ ಕಡೆ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ವರದಿಯಾಗಿದೆ. ಕೆಲವು ದೇಶಗಳು ದಾಳಿಯನ್ನು ತಡೆಹಿಡಿದಿರುವುದಾಗಿ ತಿಳಿಸಿವೆ. ಇಸ್ರೇಲ್ನಲ್ಲಿ ಸಣ್ಣಪುಟ್ಟ ಗಾಯಗಳ ವರದಿ ಬಂದಿದೆ. ಕೆಲವು ನಗರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಇದ್ದ ಉದ್ವಿಗ್ನತೆ ಈ ಘಟನೆಯ ನಂತರ ಮತ್ತಷ್ಟು ಹೆಚ್ಚುವ ಆತಂಕ ವ್ಯಕ್ತವಾಗಿದೆ.
ವಿಶ್ವದ ಪ್ರಮುಖ ರಾಷ್ಟ್ರಗಳು ಪರಿಸ್ಥಿತಿಯನ್ನು ಗಮನದಿಂದ ವೀಕ್ಷಿಸುತ್ತಿವೆ. ಹಲವಾರು ದೇಶಗಳು ಶಾಂತಿಯ ಮಾತುಕತೆಗಳನ್ನು ಮುಂದುವರಿಸಲು ಕರೆ ನೀಡಿದ್ದಾರೆ. ಈ ಘಟನೆ ಕೇವಲ ಒಂದು ದೇಶಕ್ಕೆ ಸೀಮಿತವಾಗಿಲ್ಲ; ಇದರ ಪರಿಣಾಮ ಜಾಗತಿಕ ರಾಜಕೀಯ, ತೈಲ ಮಾರುಕಟ್ಟೆ ಮತ್ತು ಭದ್ರತಾ ಪರಿಸ್ಥಿತಿಗಳ ಮೇಲೂ ಬೀರುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಈ ಸಂಘರ್ಷ ಯಾವ ದಿಕ್ಕಿನಲ್ಲಿ ಸಾಗುತ್ತದೆ ಮತ್ತು ಪ್ರದೇಶದಲ್ಲಿ ಶಾಂತಿ ಸ್ಥಾಪನೆಯಾಗುತ್ತದೆಯೇ ಎಂಬುದು ವಿಶ್ವದ ಗಮನ ಸೆಳೆಯುತ್ತಿದೆ.


Click it and Unblock the Notifications