ವಿಶ್ವದ ಶ್ರೀಮಂತ ವ್ಯಕ್ತಿ, ಹಲವಾರು ಕಂಪನಿಗಳ ಒಡೆಯ ಎಲಾನ್ ಮಸ್ಕ್ (Elon Musk) ಬಗ್ಗೆ ಯಾರಿಗೆಲ್ಲಾ ಗೊತ್ತಿಲ್ಲ ಹೇಳಿ. ಅದರಲ್ಲೂ ಹಳೆಯ ಟ್ವಿಟರ್ ಅನ್ನು ಖರೀದಿಸಿದಾಗಿನಿಂದ ಎಲಾನ್ ಮಸ್ಕ್ ಸದಾ ಸುದ್ದಿಯಲ್ಲಿದ್ದಾರೆ. ಟೆಸ್ಲಾ (Tesla), ಸ್ಪೇಸ್‌ಎಕ್ಸ್ (Spacex), ನ್ಯೂರಲಿಂಕ್, ಎಕ್ಸ್‌ಎಐ ಮುಂತಾದ ಕಂಪನಿಗಳ ಸ್ಥಾಪಕ ಎಲಾನ್ ಮಸ್ಕ್, ಇದೀಗ ಎಐ (Ai) ಲೋಕದಲ್ಲೂ ಕ್ರಾಂತಿ ಮೂಡಿಸುತ್ತಿದ್ದಾರೆ. ಅಲ್ಲದೇ ಇತ್ತೀಚೆಗಷ್ಟೇ ಎಲಾನ್ ಮಸ್ಕ್ 1 ಶತಕೋಟಿ ಡಾಲರ್ ಸ್ಯಾಲರಿ ಮೂಲಕ ಭಾರಿ ಚರ್ಚೆಗೆ ಗುರಿಯಾಗಿದ್ದರು, ಇದೀಗ ಮತ್ತೆ ಟೆಸ್ಲಾ ಸ್ಮಾರ್ಟ್‌ಫೋನ್‌ನಿಂದಾಗಿ (Tesla Smartphone) ಸುದ್ದಿಯಲ್ಲಿದ್ದಾರೆ.

ಹೌದು, ಕೆಲವು ತಿಂಗಳಿಂದ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯ ಸ್ಮಾರ್ಟ್‌ಫೋನ್ ಬರಲಿದೆ ಎಂದು ಸುದ್ದಿಗಳು ಹರಿದಾಡುತ್ತಲೇ ಇದೆ. ಅಲ್ಲದೇ ಜನರೂ ಕೂಡಾ ಇದಕ್ಕಾಗಿ ಕಾತುರದಲ್ಲಿದ್ದಾರೆ. ಹಾಗಿದ್ರೆ ನಿಜವಾಗಲೂ ಟೆಸ್ಲಾ ಕಂಪನಿ ಮೊಬೈಲ್ ತಯಾರಿಗೆ ಮುಂದಾಗಿದ್ಯಾ? ಈ ಬಗ್ಗೆ ಎಲಾನ್ ಮಸ್ಕ್ ಹೇಳಿದ್ದೇನು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ಬರ್ತಿದ್ಯಾ Tesla Pi Phone?
ಇತ್ತೀಚೆಗೆ ಟೆಸ್ಲಾ ಪೈ ಫೋನ್ ತಂತ್ರಜ್ಞಾನ ಸುದ್ದಿಗಳಲ್ಲಿ ಹೆಚ್ಚು ಹುಡುಕಲ್ಪಟ್ಟ ವಿಷಯಗಳಲ್ಲಿ ಒಂದಾಗಿದೆ. ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿ ರಹಸ್ಯವಾಗಿ ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಸಜ್ಜಾಗಿದೆ ಎಂದು ಹಲವು ವರ್ಷಗಳಿಂದ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾ, ಯೂಟ್ಯೂಬ್‌ಗಳಲ್ಲಿ ಸುದ್ದಿಗಳು, ವಿಡಿಯೋಗಳು ಹರಿದಾಡುತ್ತಲೇ ಇದೆ. ಇನ್ನು ಈ ಫೋನ್‌ನ ಸ್ಟಾರ್‌ಲಿಂಕ್ ಉಪಗ್ರಹ ಬೆಂಬಲ, ಸೋಲಾರ್ ಚಾರ್ಜಿಂಗ್, ಕ್ರಿಪ್ಟೋ ಮೈನಿಂಗ್ ಮತ್ತು ನ್ಯೂರಾಲಿಂಕ್ ಏಕೀಕರಣದಂತಹ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂದು ವರದಿಯಾಗಿತ್ತು.
ಆದರೆ, ಸೆಪ್ಟೆಂಬರ್ 2025ರವರೆಗೂ ಟೆಸ್ಲಾ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. "ಭವಿಷ್ಯದಲ್ಲಿ ಸ್ಮಾರ್ಟ್‌ಫೋನ್‌ಗಾಗಿ ಒತ್ತಾಯಿಸದಿದ್ದರೆ, ಟೆಸ್ಲಾ ಫೋನ್ ತಯಾರಿಸುತ್ತಿಲ್ಲ" ಎಂದು ಎಲಾನ್ ಮಸ್ಕ್ ಸ್ವತಃ ಹೇಳಿಕೊಂಡಿದ್ದಾರೆ. ಸ್ಮಾರ್ಟ್‌ಫೋನ್ ತಯಾರಿ ಬಗ್ಗೆ ಮಸ್ಕ್‌ರನ್ನು ಹಲವು ಬಾರಿ ಕೇಳಿದಾಗ, ಅವರ ಉತ್ತರ "ಆಪಲ್ ಅಥವಾ ಗೂಗಲ್, ಟೆಸ್ಲಾ ಅಪ್ಲಿಕೇಶನ್‌ಗಳು ಅಥವಾ ಸೇವೆಗಳನ್ನು ನಿಲ್ಲಿಸಿದರೆ ಮಾತ್ರ ಟೆಸ್ಲಾ ಫೋನ್ ತಯಾರಿಸಬಹುದು" ಎಂದು ಹೇಳುತ್ತಾರೆ. ಅಂದಿನಿಂದೂ ಮಸ್ಕ್ ಇದನ್ನೇ ಹೇಳಿಕೊಂಡು ಬಂದಿದ್ದಾರೆ.
ಸದ್ಯ, ಟೆಸ್ಲಾ ಕಾರುಗಳು ಮತ್ತು ಇಂಧನ ಉತ್ಪನ್ನಗಳು ಈಗಾಗಲೇ ಐಒಎಸ್ ಮತ್ತು ಆಂಡ್ರಾಯ್ಡ್‌ನೊಂದಿಗಿನ ಸಹಭಾಗಿತ್ವದಲ್ಲಿ ಕಾರ್ಯರ್ವಹಿಸುತ್ತಿದೆ. ಆದ್ದರಿಂದ ಪ್ರತ್ಯೇಕವಾಗಿ ಟೆಸ್ಲಾದ ಸಾಧನದ ತಯಾರಿ ಅಗತ್ಯವಿಲ್ಲ. ಇದೊಂದು ಊಹಾಪೋಹ ಎಂದು ವರದಿಯಾಗಿದೆ.
"ಟೆಸ್ಲಾ ಮಾಡೆಲ್ ಪೈ" ಎಂದು ಹೇಳಿಕೊಂಡು ಹಲವಾರು ಫೋಟೋಗಳು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲೂ 2021 ಮತ್ತು 2022 ರ ಸುಮಾರಿಗೆ ಈ ಸುದ್ದಿಗಳು, ಫೋಟೋಗಳು ಭಾರೀ ಸದ್ದು ಮಾಡಿತ್ತು. ವೈರಲ್ ಆದ ಸುದ್ದಿಗೂ, ಟೆಸ್ಲಾದ ಭವಿಷ್ಯದ ಯೋಜನೆಗಳಿಗೂ ಲಿಂಕ್ ಆಗಿದ್ದರಿಂದ, ಇದು ಮತ್ತಷ್ಟು ವೈರಲ್ ಆಗಲು ಕಾರಣವಾಯಿತು. ಇನ್ನು ಟೆಸ್ಲಾ 5ಜಿ ಮೊಬೈಲ್‌ಗಳು ಬ್ರೈನ್ ಮೆಷಿನ್ ಇಂಟರ್‌ಫೇಸ್ (BMI) ಚಿಪ್ ಅನ್ನು ಹೊಂದಿರುತ್ತದೆ ಎಂದು ವೈರಲ್ ಆಗಿತ್ತು.
ಇಂದು ಟೆಸ್ಲಾ ಫೋನ್‌ಗಳು ಮಾರಾಟವಾಗುತ್ತಿದ್ಯಾ?
ಹೌದು, ಮೊಬೈಲ್ ಮಾರಾಟವಾಗುತ್ತಿದೆ, ಆದ್ರೆ ಟೆಸ್ಲಾ ಕಂಪನಿಯಿಂದ ಬಂದವುಗಳಲ್ಲ. ಯುರೋಪ್ ಮತ್ತು ಏಷ್ಯಾದಂತಹ ಮಾರುಕಟ್ಟೆಗಳಲ್ಲಿ ಟೆಸ್ಲಾ ಬ್ರ್ಯಾಂಡಿಂಗ್‌ನೊಂದಿಗೆ ಹಲವಾರು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಉದಾಹರಣೆಗೆ, ಟೆಸ್ಲಾ ಎಕ್ಸ್‌ಪ್ಲರ್ 9 ಆನ್‌ಲೈನ್‌ನಲ್ಲಿ 6.3-ಇಂಚಿನ ಡಿಸ್‌ಪ್ಲೇ, 5000mAh ಬ್ಯಾಟರಿ ಮತ್ತು ವಾಟರ್ ಪ್ರೂಫ್‌ನ ವಿನ್ಯಾಸದೊಂದಿಗೆ ಮಾರಾಟವಾಗುತ್ತದೆ. ಈ ಫೋನ್‌ಗಳನ್ನು ಟೆಸ್ಲಾ ಹೆಸರನ್ನು ಲೈಸೆನ್ಸ್ ಆಗಿ ಬಳಸಿಕೊಂಡು ಮತ್ತೊಂದು ಕಂಪನಿ ಉತ್ಪಾದಿಸುತ್ತದೆ. ಇವುಗಳಿಗೆ ಟೆಸ್ಲಾ ಅಥವಾ ಎಲಾನ್ ಮಸ್ಕ್‌ಗೆ ಯಾವುದೇ ಸಂಬಂಧವಿಲ್ಲ.
ಟೆಸ್ಲಾ ಪೈ ಫೋನ್ ಸದ್ಯ ವದಂತಿಯಾಗಿದ್ದು, ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ಇತರ ಕ್ಷೇತ್ರಗಳಲ್ಲಿ ಭಾರಿ ಪ್ರಗತಿ ಸಾಧಿಸುತ್ತಿವೆ. ಸ್ಟಾರ್‌ಲಿಂಕ್ ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ ಮತ್ತು ಅಸ್ತಿತ್ವದಲ್ಲಿರುವ ಫೋನ್‌ಗಳಿಗೆ ನೇರ ಸಂಪರ್ಕಗಳನ್ನು ಅಭಿವೃದ್ಧಿಪಡಿಸುತ್ತಿದೆ. ಟೆಸ್ಲಾ ಸ್ಮಾರ್ಟ್‌ಫೋನ್ ಬದಲಿಗೆ, ಇವಿ ಉತ್ಪಾದನೆ, ಬ್ಯಾಟರಿ ಸ್ಟೋರೇಜ್ ಮೇಲೆ ಹೆಚ್ಚು ಗಮನಹರಿಸುತ್ತಿದೆ..


Click it and Unblock the Notifications