ನವದೆಹಲಿ, ಏಪ್ರಿಲ್ 16: ಇಸ್ರೇಲ್ & ಇರಾನ್ ನಡುವೆ ಕಿತ್ತಾಟ ಶುರುವಾಗಿ ಯುದ್ಧದ ರೂಪ ಪಡೆಯುತ್ತಿದೆ. ಹೀಗಾಗಿ ಮಧ್ಯಪ್ರಾಚ್ಯ ಸ್ಥಿತಿ ತೀವ್ರ ಸೂಕ್ಷ್ಮ ಸ್ವರೂಪ ಪಡೆದಿದೆ. ಇದರ ಫಲವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಪತನ ಕೂಡ ಶುರುವಾಗಿದ್ದು, ಭಾರತದಲ್ಲೂ ಷೇರು ಪೇಟೆ ಮುಗ್ಗರಿಸಿ ಬಿದ್ದಿದೆ. ನಿನ್ನೆಯಂತೆ ಇಂದು ಕೂಡ ಷೇರು ಪೇಟೆಗೆ ಭಾರಿ ಹೊಡೆತ ಬಿದ್ದಿದೆ.
ಇಸ್ರೇಲ್ & ಪ್ಯಾಲೆಸ್ತೀನ್ ನಡುವೆ ಈಗಾಗಲೇ ಭೀಕರ ಕಾಳಗ ನಡೆಯುತ್ತಿದೆ. ಇದೇ ಕಾರಣ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಅಲ್ಲೋಲ ಕಲ್ಲೋಲ ಸೃಷ್ಟಿ ಆಗಿದೆ. 30 ಸಾವಿರಕ್ಕು ಹೆಚ್ಚು ಜನರು ಈಗಾಗಲೇ ಇಸ್ರೇಲ್ & ಪ್ಯಾಲೆಸ್ತೀನ್ ಯುದ್ಧಕ್ಕೆ ಬಲಿಯಾಗಿದ್ದಾರೆ. ಇಷ್ಟೆಲ್ಲಾ ತಿಕ್ಕಾಟದ ನಡುವೆ ಈಗ ಮತ್ತೊಂದು ಭಯಾನಕ ಸುದ್ದಿ ಹೊರಬಿದ್ದಿದೆ. ಇಸ್ರೇಲ್ ವಿರುದ್ಧ ಇರಾನ್ ಇನ್ನೂ ದೊಡ್ಡ ಮಟ್ಟದಲ್ಲಿ ದಾಳಿ ಮಾಡಲಿದೆ ಎಂಬ ಭಯ ಹರಡಿದೆ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಮಹಾ ಕುಸಿತ ಎದುರಾಗುವ ಭಯ ಸೃಷ್ಟಿಯಾಗಿದೆ.

ಭಾರತದಲ್ಲೂ ಶುರುವಾಯ್ತು ಭಯ
ಯುದ್ಧದ ಭೀತಿ ಕಾರಣ ಹೂಡಿಕೆದಾರರು ಆತಂಕ ಪಡುತ್ತಿದ್ದು ಷೇರು ಮಾರುಕಟ್ಟೆಯಿಂದ ತಮ್ಮ ಬಂಡವಾಳ ವಾಪಸ್ ಪಡೆಯುತ್ತಿದ್ದಾರೆ. ಹೀಗಾಗಿ ಅಮೆರಿಕದಲ್ಲಿ ಕೂಡ ಷೇರು ಪೇಟೆ ಮಹಾ ಕುಸಿತ ಕಂಡಿದೆ. ಈ ನಡುವೆ ಭಾರತದಲ್ಲಿ ಕೂಡ ಷೇರು ಮಾರುಕಟ್ಟೆ, ಸತತವಾಗಿ ಕುಸಿತ ಕಾಣುತ್ತಿದೆ. ನಿನ್ನೆಯಂತೆ ಇಂದು ಕೂಡ ಷೇರು ಪೇಟೆಯಲ್ಲಿ ಕರಡಿ ಆರ್ಭಟಿಸಿತ್ತು, ಹೀಗಾಗಿ ಷೇರು ಸೂಚ್ಯಂಕಗಳಾದ ಸೆನ್‌ಸೆಕ್ಸ್ 456.10 ಅಂಕ ಕುಸಿತ ಕಂಡಿತು. ಮತ್ತೊಂದು ಷೇರು ಸೂಚ್ಯಂಕ ನಿಫ್ಟಿ-50 ಕೂಡ ಬರೋಬ್ಬರಿ 124.60 ಅಂಕಗಳ ಹಾಗೂ ಬ್ಯಾಂಕ್ ನಿಫ್ಟಿ 288.45 ಅಂಕಗಳನ್ನು ಕಳೆದುಕೊಂಡಿವೆ.
5.18 ಲಕ್ಷ ಕೋಟಿ ನಷ್ಟ!
ನಿನ್ನೆ ಒಂದೇ ದಿನ ಷೇರು ಮಾರುಕಟ್ಟೆಯಲ್ಲಿ ರಣರಂಗವೇ ನಡೆದು ಹೋಗಿತ್ತು. ಯುದ್ಧದ ಭಯಕ್ಕೆ ಹೂಡಿಕೆದಾರರು ತಮ್ಮ ಬಂಡವಾಳ ವಾಪಸ್ ಪಡೆದ ಹಿನ್ನೆಲೆ ನಿನ್ನೆ ಷೇರು ಪೇಟೆ ಭಾರಿ ದೊಡ್ಡ ನಷ್ಟ ಅನುಭವಿಸಿತ್ತು. ಸುಮಾರು 5.18 ಲಕ್ಷ ಕೋಟಿ ರೂಪಾಯಿಯ ನಷ್ಟ ಅನುಭವಿಸಿತ್ತು ಷೇರು ಮಾರುಕಟ್ಟೆ. ಹೀಗೆ ಇಂದು ಕೂಡ ನಷ್ಟದ ಹಾದಿ ಮುಂದುವರಿದು ಹೂಡಿಕೆ ಮಾಡಿದ್ದವರು ಸಂಕಷ್ಟ ಅನುಭವಿಸಿದ್ದಾರೆ. ಈಗಿನ ಸ್ಥಿತಿಯಲ್ಲಿ ಈ ವಾತಾವರಣ ಮತ್ತಷ್ಟು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ. ಮತ್ತೊಂದು ಕಡೆ ಯುದ್ಧದ ಭಯದಲ್ಲಿ ಕಚ್ಚಾ ತೈಲ ಬೆಲೆಯಲ್ಲೂ ಏರುಪೇರು ಉಂಟಾಗುತ್ತಿದೆ. ಆದರೆ ಚಿನ್ನಕ್ಕೆ ಇದೀಗ ಮತ್ತಷ್ಟು ಡಿಮ್ಯಾಂಡ್ ಬಂದಿದ್ದು, ಆಭರಣ ಪ್ರಿಯರಿಗೆ ಆಘಾತ ನೀಡುತ್ತಿದೆ.


Click it and Unblock the Notifications