ಬೆಂಗಳೂರು: ಖಾಸಗಿಯವರಿಗೆ ಬಾಹ್ಯಾಕಾಶ ಕ್ಷೇತ್ರವನ್ನು ತೆರೆಯುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ.ಶಿವನ್ ಸ್ವಾಗತಿಸಿದ್ದಾರೆ.
ಗುರುವಾರ ನಡೆದ ಡಿಜಿಟಲ್ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ನಾವು ಬಹಳ ಉತ್ಸುಕರಾಗಿದ್ದೇವೆ ಮತ್ತು ಇದರಿಂದ ಉಂಟಾಗುವ ಎಲ್ಲಾ ಅವಕಾಶಗಳನ್ನು ಪಡೆಯಲು ನಮ್ಮ ಯುವಕರು ಮುಂದೆ ಬರುತ್ತಾರೆ ಎಂಬ ವಿಶ್ವಾಸವಿದೆ. ಬಾಹ್ಯಾಕಾಶ ವಲಯಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಲು ಹಲವಾರು ಸ್ಟಾರ್ಟ್ ಅಪ್ ಕಂಪನಿಗಳು ಈಗಾಗಲೇ ಮುಂದೆ ಬಂದಿವೆ. ಜಗತ್ತಿನಲ್ಲಿ ಬಾಹ್ಯಾಕಾಶ ಕ್ಷೇತ್ರದ ಆರ್ಥಿಕತೆಯ ಪ್ರಮುಖ ಕೇಂದ್ರವಾಗಿ ಭಾರತ ಹೊರಹೊಮ್ಮಲಿದೆ ಎಂದು ಹೇಳಿದ್ದಾರೆ.
ಖಾಸಗಿಯವರು ಮುಂದೆ ಬಂದು ಬಾಹ್ಯಾಕಾಶ ಚಟುವಟಿಕೆಗಳನ್ನು ನಿರ್ವಹಿಸಲು ಮತ್ತು ಭಾರತವನ್ನು ಜಾಗತಿಕ ತಂತ್ರಜ್ಞಾನ ಶಕ್ತಿ ಕೇಂದ್ರ ಮಾಡಲು ಖಾಸಗಿಯವರನ್ನು ನಾನು ತುಂಬಾ ಸಂತೋಷದಿಂದ ಆಹ್ವಾನಿಸುತ್ತೇನೆ. ಈ ಸುಧಾರಣೆಗಳು ಭಾರತವನ್ನು ಬಾಹ್ಯಾಕಾಶ ಕ್ಷೇತ್ರದ ಹೊಸ ಯುಗಕ್ಕೆ ಕರೆದೊಯ್ಯುತ್ತವೆ ಎಂದು ಇಸ್ರೋ ಮುಖ್ಯಸ್ಥರು ಹೇಳಿದರು.
ಇದಕ್ಕಾಗಿ IN-SPACe ರಚಿಸಲಾಗಿದ್ದು, ಇದು ಉದ್ಯಮ, ಶೈಕ್ಷಣಿಕ ಮತ್ತು ಭಾರತದ ಸರ್ಕಾರದ ಪ್ರತಿನಿಧಿಗಳನ್ನು ಹೊಂದಿರುತ್ತದೆ. IN-SPACe ಕಾರ್ಯರೂಪಕ್ಕೆ ಬರಲು 3 ರಿಂದ 6 ತಿಂಗಳುಗಳು ತೆಗೆದುಕೊಳ್ಳುತ್ತದೆ ಎಂದು ಶಿವನ್ ಹೇಳಿದರು.

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆಯಲು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ (ಐಎನ್-ಸ್ಪೇಸ್) ರಚನೆಗೆ ಅನುಮೋದನೆ ನೀಡಿತು. ಖಾಸಗಿ ವಲಯಕ್ಕೆ ಭಾರತೀಯ ಬಾಹ್ಯಾಕಾಶ ಮೂಲಸೌಕರ್ಯಗಳನ್ನು ಬಳಸಲು ಐಎನ್-ಸ್ಪೇಸ್ ಅವಕಾಶ ಮಾಡಿ ಕೊಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.


Click it and Unblock the Notifications