JioHotstar ಪ್ರಹಸನಕ್ಕೆ ಮತ್ತೊಂದು ತಿರುವು ಲಭಿಸಿದೆ. ಕೆಲದಿನಗಳ ಹಿಂದೆಯಷ್ಟೇ ವೆಬ್‌ಸೈಟ್ ತನಗೆ ಸೇರಿದ್ದು, ಎಂದು ದೆಹಲಿ ಮೂಲದ ಟೆಕ್ಕಿಯೊಬ್ಬ ವಾದಿಸಿದ್ದ ಬೆನ್ನಿಗೆ ಇದೀಗ ಯುಎಇ ಮೂಲದ ಸಹೋದರ ಸಹೋದರಿಯರು ವೆಬ್‌ಸೈಟ್ ಗೆ ನಾವೇ ನಿಜವಾದ ಮಾಲಕರು ಎಂದು ತಿಳಿಸಿದ್ದು, ಅಲ್ಲದೆ ಇದನ್ನು ನಾವು ಟೆಕ್ಕಿಯಿಂದ ಖರೀದಿಸಿದ್ದೇವೆ ಎಂದು ಕೂಡ ತಿಳಿಸಿದ್ದಾರೆ.
ಸದ್ಯ ಪ್ರಹಸನ ಮತ್ತಷ್ಟು ತಿರುವುಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಸದ್ಯ ವೆಬ್ ಸೈಟ್ ಅನ್ನು ತೆರೆದಾಗ ಡೊಮೇನ್‌ನ ಲ್ಯಾಂಡಿಂಗ್ ಪುಟವು ಇಬ್ಬರು ಒಡಹುಟ್ಟಿದವರು ವೆಬ್‌ಸೈಟ್ ಸಂದರ್ಶಕರು ಸ್ವಾಗತಿಸುವುದನ್ನು ಪೇಜ್ ತೋರಿಸುತ್ತದೆ. ನಾವು ಈ ವೆಬ್‌ಸೈಟ್ ಅನ್ನು ದೆಹಲಿ ಮೂಲದ ಟೆಕ್ಕಿಯಿಂದ ಖರೀದಿಸಿಕೊಂಡಿದ್ದೇವೆ ಎಂದು ಕೂಡ ಸಹೋದರ ಸಹೋದರಿಯರು ತಿಳಿಸಿದ್ದಾರೆ.

JioHotstar ಡೊಮೇನ್‌ನ ಹಕ್ಕುಗಳನ್ನು ಖರೀದಿಸಿದ ದೆಹಲಿ ಮೂಲದ ಅಪ್ಲಿಕೇಶನ್ ಡೆವಲಪರ್ ತನ್ನ ಮುಂದಿನ ವಿದ್ಯಾಭ್ಯಾಸಕ್ಕೆ ನೆರವನ್ನು ಕೇಳಿ ಹೆಚ್ಚು ಸುದ್ದಿಯಲ್ಲಿದ್ದ. ಆದರೆ ಇದೀಗ ಡೊಮೇನ್ ಹಕ್ಕನ್ನು ಇಬ್ಬರು ಮಕ್ಕಳಿಗೆ ಮಾರಾಟ ಮಾಡಿದ್ದಾನೆ ಎನ್ನಲಾಗಿದೆ.
ಯಾರು ಈ ಎಳೆಯ ಮಕ್ಕಳು
ಭಾರತ ಮೂಲವನ್ನು ಹೊಂದಿರುವ ಇವರು ಸದ್ಯ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಆದರೆ JioHotstar ವೆಬ್ ಸೈಟ್ ಖರೀದಿ ಮಾಡಿದ್ದೇವೆ ಎಂದು ತಿಳಿಸಿದ ಬಳಿಕ ಇವರು ಭಾರತದಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. 13 ವರ್ಷದ ಜೈನಮ್ ಜೈನ್ ಮತ್ತು 10 ವರ್ಷದ ಜೀವಿಕಾ ಜೈನ್ ಸದ್ಯ ಎಲ್ಲರ ಚಿತ್ತ ಇವರತ್ತ ಬಿದ್ದಿದೆ.
ಇನ್ನು ಜೈನಮ್ ಮತ್ತು ಜೀವಿಕಾ ತಮ್ಮ ಯೂಟ್ಯೂಬ್ ಚಾನೆಲ್ ಅನ್ನು 2017 ರಲ್ಲಿ ಪ್ರಾರಂಭಿಸಿದ್ದು, ಅಲ್ಲಿ ಅವರು ಆಟಿಕೆಗಳನ್ನು ಅನ್‌ಬಾಕ್ಸ್ ಮಾಡುತ್ತಿದ್ದರು ಮತ್ತು ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಟವಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು.
ಸದ್ಯ ಅವರು ತಮ್ಮ ಚಿತ್ತವನ್ನು ವಿಜ್ಞಾನದ ವಿಷಯಕ್ಕೆ ಬದಲಾಯಿಸಿದ್ದು, ಅವರು ಶೀಘ್ರದಲ್ಲೇ ಕೆಲವು ಪ್ರಸಿದ್ಧ ಸೆಲೆಬ್ರಿಟಿಗಳೊಂದಿಗೆ ಪಾಡ್‌ಕ್ಯಾಸ್ಟ್ ಅನ್ನು ಪ್ರಾರಂಭಿಸಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ನಡುವೆ JioHotstar ಪ್ರಹಸನದಲ್ಲಿ ಭಾಗಿಯಾಗಿದ್ದಾರೆ.
ಪತ್ರದಲ್ಲಿ ಹಲವು ವಿಚಾರಗಳು ಉಲ್ಲೇಖ
ಇನ್ನು ವೆಬ್‌ಸೈಟ್ ಖರೀದಿಸಿರುವ ಬಗ್ಗೆ ಸ್ವತಹ ಯೂಟ್ಯೂಬರ್ ಕೂಡ ಆಗಿರುವ ಯುಎಇ ಮೂಲದ ಈ ಇಬ್ಬರು ಸಹೋದರ ಸಹೋದರಿಯರು ಪತ್ರವೊಂದನ್ನು ಕೂಡ ಬಹಿರಂಗಪಡಿಸಿದ್ದು, ಹಲವು ವಿಚಾರಗಳನ್ನು ಕೂಡ ತಿಳಿಸಿದ್ದಾರೆ. ದೆಹಲಿ ಮೂಲದ ಯುವ ಸಾಫ್ಟ್‌ವೇರ್ ಟೆಕ್ಕಿಗೆ ನೆರವಾಗುವ ನಿಟ್ಟಿನಲ್ಲಿ ಖರೀದಿ ಮಾಡಲಾಗಿದೆ ಎಂದು ಕೂಡ ಇಬ್ಬರು ಒಡಹುಟ್ಟಿದವರು ತಿಳಿಸಿದ್ದಾರೆ.
ಇನ್ನು ಪತ್ರದಲ್ಲಿ ಒಡಹುಟ್ಟಿದವರು ಉಲ್ಲೇಖಿಸಿದಂತೆ, ʻನಾವು ಕೇವಲ ಮಕ್ಕಳಾಗಿದ್ದರೂ ಸಹ, ದಯೆ ಮತ್ತು ಸಕಾರಾತ್ಮಕತೆಯನ್ನು ಹರಡಲು ಬಂದಾಗ ವಯಸ್ಸು ಕೇವಲ ಒಂದು ಸಂಖ್ಯೆ ಎಂದು ನಾವು ನಂಬುತ್ತೇವೆ. ನಮ್ಮ ಬೇಸಿಗೆಯ ರಜಾದಿನಗಳನ್ನು ಕಳೆಯಲು ನಾವು ದುಬೈನಿಂದ ಹೊರಟು ಭಾರತದಲ್ಲಿ ನಾವು ಮರೆಯಲಾಗದ 50 ದಿನಗಳನ್ನು ಕಳೆದಿದ್ದು, ನಮ್ಮ ಇತ್ತೀಚಿಗಿನ ಹೊಸ ಜೀವನಕ್ಕೆ ದಾರಿ ಮಾಡಿಕೊಟ್ಟಿತ್ತು.
ನಾವು ಒಂದು ಉದ್ದೇಶವನ್ನು ಹೊಂದಿದ್ದೇವೆ. ವಿವಿಧ ಹಿನ್ನೆಲೆಯ ಮಕ್ಕಳೊಂದಿಗೆ ಸಂಪರ್ಕ ಸಾಧಿಸುವುದು, ಕಲಿಕೆಗಾಗಿ ನಮ್ಮ ಪ್ರೀತಿಯನ್ನು ಹಂಚಿಕೊಳ್ಳುವುದು, ಅಧ್ಯಯನ ಮಾಡಲು ಮತ್ತು ಗುರಿಗಳನ್ನು ಹೊಂದಿಸಲು ಕೌಶಲ್ಯಗಳನ್ನು ಕಲಿಸುವುದು ಮತ್ತು ದೊಡ್ಡ ಕನಸುಗಳನ್ನು ಮಾಡಲು ಅವರನ್ನು ಪ್ರೇರೇಪಿಸುವುದು ಇದರಲ್ಲಿ ಸೇರಿದೆ. ಒಡಹುಟ್ಟಿದವರು ಭವಿಷ್ಯದಲ್ಲಿ ಇತರರಿಗೆ ಸಹಾಯ ಮಾಡಲು ಡೊಮೇನ್ ಅನ್ನು ಮಾರಾಟಕ್ಕೆ ಲಭ್ಯವಾಗುವಂತೆ ಇರಿಸಲು ಉದ್ದೇಶಿಸಿದ್ದೇವೆ.
ನಮ್ಮ ಪ್ರಯಾಣವನ್ನು ಇಲ್ಲಿ ಹಂಚಿಕೊಳ್ಳುವ ಮೂಲಕ, ನಾವು ಇತರರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದ್ದೇವೆ ಮತ್ತು ಈ ಸಕಾರಾತ್ಮಕ ಮಿಷನ್ ಅನ್ನು ಮುಂದುವರಿಸಲು ಬಯಸುವ ಯಾರಿಗಾದರೂ ಭವಿಷ್ಯದ ಮಾರಾಟಕ್ಕಾಗಿ ಡೊಮೇನ್ ಅನ್ನು ತೆರೆದಿಡುತ್ತೇವೆ" ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಅಲ್ಪಮೊತ್ತಕ್ಕೆ ವೆಬ್‌ಸೈಟ್ ಖರೀದಿ!
ಇನ್ನು ಜೈನಮ್ ಮತ್ತು ಜೀವಿಕಾ ಅವರು ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಮತ್ತೊಂದು ವಿಚಾರವನ್ನು ತಿಳಿಸಿದ್ದಾರೆ. ವೆಬ್‌ಸೈಟ್ ಖರೀದಿ ಪ್ರಕ್ರಿಯೆಯಲ್ಲಿ ದೆಹಲಿ ಮೂಲದ ಸಾಫ್ಟ್‌ವೇರ್ ಟೆಕ್ಕಿಗೆ ಪಾವತಿಸಿದ ಮೊತ್ತವು ಆತ ಕೇಳಿದಕ್ಕಿಂತ ಒಂದು ಸಣ್ಣ ಭಾಗವಾಗಿದೆ ಎಂದು ತಿಳಿಸಿದ್ದಾರೆ.
ಯಾರೀತ ದೆಹಲಿಯ ಸಾಫ್ಟ್‌ವೇರ್ ಟೆಕ್ಕಿ
ಇನ್ನು JioHotstar ನ ಡೊಮೇನ್ ತನ್ನ ಬಳಿ ಇದ್ದು, ಒಂದು ವೇಳೆ ಇದು ನಿಮ್ಮ ವಶಕ್ಕೆ ಬೇಕಿದ್ದರೆ ನನ್ನ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಣ ನೀಡಿ ಎಂದು ತಿಳಿಸಿದ್ದ. ಬಳಿಕ ರಿಲಾಯನ್ಸ್ ಸಂಸ್ಥೆಯು ಸೂಕ್ತ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಬಳಿಕ ಆತ ಸುಮ್ಮನಾಗಿದ್ದ. ಇದೀಗ ಇಬ್ಬರು ಸಹೋದರ ಸಹೋದರಿಯರು ಟೆಕ್ಕಿಯಿಂದ ವೆಬ್‌ಸೈಟ್ ಖರೀದಿಸಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ವೆಬ್‌ಸೈಟ್ ಬಗೆಗಿನ ಪ್ರಹಸನ ಮತ್ತಷ್ಟು ಕಗ್ಗಂಟಾಗಿ ಪರಣಮಿಸಿದೆ.


Click it and Unblock the Notifications