ಬೆಂಗಳೂರು, ಸೆಪ್ಟೆಂಬರ್ 2: ಯಾರಿಗೆ ಸಾಲುತ್ತೆ ಸಂಬಳ ಎನ್ನುವಂತೆ ನಿರೀಕ್ಷೆಗಳನ್ನೆಲ್ಲ ಪೂರೈಸಲು ವೇತನ ಸಾಲುವುದಿಲ್ಲ. ಮನೆ ಕಟ್ಟಬೇಕು, ಕಾರು ಕೊಂಡುಕೊಂಡುಕೊಳ್ಳಬೇಕು ಎನ್ನುವ ಆಸೆ ಅನೇಕ ಯುವಕರಲ್ಲಿ ಇದ್ದರೂ ದುಡಿದ ಸಂಬಳ ಆಸೆ ಪೂರೈಸಲು ಸಾಕಾಗುವುದಿಲ್ಲ. ದೈನಂದಿನ ಖರ್ಚುಗಳನ್ನು ಪೂರೈಸಲು ಜೇಬಿನಲ್ಲಿರುವ ಹಣ ಸಾಲದೆಂಬಂತಾಗುತ್ತದೆ.
ಹೀಗಾಗಿ ಕನಸುಗಳು ಮತ್ತು ಆಸೆಗಳಿಗೆ ಲಗಾಮು ಹಾಕಬೇಕಾಗುತ್ತದೆ ಅಥವಾ ಅವುಗಳನ್ನು ಈಡೇರಿಸಲು ಹೆಚ್ಚುವರಿ ಆದಾಯ ಗಳಿಸುವುದು ಮುಖ್ಯವಾಗುತ್ತದೆ. ನೀವು ಯುವಕರಾಗಿದ್ದರೆ, ಹೆಚ್ಚುವರಿ ಆದಾಯ ಗಳಿಸಲು ಅನೇಕ ಅವಕಾಶಗಳು ನಿಮ್ಮ ಮುಂದೆ ಇದೆ. ಈ ಪೈಕಿ ಆಹಾರ ವಿತರಣಾ ಕಾರ್ಯನಿರ್ವಾಹಕರಾಗಿ ಅಥವಾ ಗಿಗ್ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುವುದು ಒಂದು. ಝೊಮ್ಯಾಟೋ, ಸ್ವಿಗ್ಗಿ ಅಮೇಜಾನ್, ಫ್ಲಿಪ್‌ಕಾರ್ಟ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಪೊ, ಬಿಗ್ ಬಾಸ್ಕೆಟ್, ಡೊಮಿನೋಸ್ ಹೀಗೆ ಅನೇಕ ಸಂಸ್ಥೆಗಳಲ್ಲಿ ಡೆಲಿವರಿ ವೃತಿಯಲ್ಲಿ ತೊಡಗಿರುವವರನ್ನು ಗಿಗ್ (ಡೆಲಿವರಿ ಕಾರ್ಮಿಕ/ ಬಾಯ್) ಕಾರ್ಮಿಕರು ಎಂದು ಹೇಳಬಹುದು.

2023-24 ರ ಆರ್ಥಿಕ ಸಮೀಕ್ಷೆಯ ಪ್ರಕಾರ, 2029-30 ರ ವೇಳೆಗೆ ಗಿಗ್ ವರ್ಕ್‌ಫೋರ್ಸ್ 2.35 ಕೋಟಿಗೆ (23.5 ಮಿಲಿಯನ್) ವಿಸ್ತರಿಸುವ ನಿರೀಕ್ಷೆ ಇದ್ದು , ಇದು ಭಾರತದಲ್ಲಿ ಒಟ್ಟು ಜೀವನೋಪಾಯದ ಶೇಕಡಾ 4.1 ರಷ್ಟಾಗಲಿದೆ. ರಾಷ್ಟ್ರೀಯ ಕಾರ್ಮಿಕ ಬಲ ಸಮೀಕ್ಷೆಯ ಡೇಟಾವನ್ನು ಆಧರಿಸಿ NITI ಆಯೋಗ್‌ನ ಸೂಚಕ ಅಂದಾಜಿನ ಪ್ರಕಾರ, 2020-21ರಲ್ಲಿ 77 ಲಕ್ಷ (7.7 ಮಿಲಿಯನ್) ಕಾರ್ಮಿಕರು ಗಿಗ್ ಆರ್ಥಿಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಆಹಾರ ವಿತರಣಾ ಅಪ್ಲಿಕೇಶನ್‌ಗಳು ಮತ್ತು ಇತರ ತ್ವರಿತ ವಿತರಣಾ ಅಪ್ಲಿಕೇಶನ್‌ಗಳು ಈಗ ನಗರ ಜೀವನಕ್ಕೆ ಅಂತರ್ಗತವಾಗಿತ್ತು, ಗಿಗ್ ವರ್ಕ್‌ಫೋರ್ಸ್ ಯಾವುದೇ ಚೌಕಟ್ಟಿಗೆ, ನೀತಿ ನಿಯಮಗಳಿಗೆ ಒಳಗಾಗದೇ ಅನಿಯಂತ್ರಿತವಾಗಿ ಕಾರ್ಯನಿರ್ವಹಿಸುತ್ತದೆ ಅಂದರೆ ತಪ್ಪಾಗಲಾರದು. ಕೆಲವರು ಇದನ್ನು ಪಾರ್ಟ್ ಟೈಮ್ ವೃತ್ತಿಯಾಗಿ ತೆಗೆದುಕೊಂಡ್ರೆ, ಹೆಚ್ಚಿನವರು ಇದನ್ನೇ ತಮ್ಮ ಪೂರ್ಣಕಾಲಿಕ ವೃತ್ತಿಯನ್ನಾಗಿಸಿದ್ದಾರೆ. ಆದರೆ ಇವರು ಒಂದು ಸಂಸ್ಥೆಯ ಸಿಬ್ಬಂದಿಯಾಗದ ಕಾರಣ ಇವರಿಗೆ ಪಿ.ಎಫ್ , ವಿಮೆ, ವಿವಿಧ ಭತ್ಯೆಗಳು ಸೇರಿ ಇತರ ಉದ್ಯೋಗಿಗಳಿಗಿರುವ ಯಾವುದೇ ಸೌಲಭ್ಯಗಳು ದೊರಕುವುದಿಲ್ಲ.
ಗಿಗ್ ಕೆಲಸವು ಕಾರ್ಯಸಾಧ್ಯವಾದ ಅರೆಕಾಲಿಕ ಉದ್ಯೋಗದ ಆಯ್ಕೆಯಾಗಬಹುದೇ? ಎಂಬ ಪ್ರಶ್ನೆಗೆ ಡೆಕ್ಕನ್ ಹೆರಾಲ್ಡ್ ನ ಪತ್ರಕರ್ತರೊಬ್ಬರು ಉತ್ತರ ಹುಡುಕಲು ಸ್ವಯಂ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದಾರೆ.
ಇವರು ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ ಮೊದಲ ದಿನ ಒಂದೂವರೆ ಗಂಟೆಯಲ್ಲಿ170ರೂ. ಹಾಗೂ ಎರಡನೇ ದಿನ ಎರಡೂವರೆ ಗಂಟೆಯಲ್ಲಿ 184 ರೂ. ಗಳಿಸಿದ್ದಾರೆ. ಮೂರನೇ ದಿನ 3 ಗಂಟೆ ದುಡಿಯಲು ನಿರ್ಧರಿಸಿದ್ರು, ಗೂಗಲ್ ಮ್ಯಾಪ್ ಮತ್ತು ಫುಡ್ ಡೆಲಿವರ್ ಆಪ್ ನ್ನು ಜೊತೆ ಜೊತೆಗೆ ಬಳಕೆ ಮಾಡುತ್ತಿದ್ದರಿಂದ ಅವರ ಮೊಬೈಲ್ ಬ್ಯಾಟರಿ ಮುಗಿದು ಸಮಸ್ಯೆ ಎದುರಿಸಿದ್ದಾರೆ. ಜೊತೆಗೆ ಅವರು ಬಳಸುತ್ತಿದ್ದ ಬೈಕ್ ಕೂಡಾ ರಾಯಲ್ ಎನ್‌ಫೀಲ್ಡ್ ಆಗಿದ್ದ ಕಾರಣ ಇದು ಲಾಭದಾಯಕವಾಗಿರಲಿಲ್ಲ ಉಳಿಕೆಗಿಂತ ವೆಚ್ಚವೇ ಅಧಿಕವಾಗಿತ್ತು.
ಡೆಲಿವರಿ ಬಾಯ್ ಅನುಭವದ ವೇಳೆ ಒಂದಷ್ಟು ಆಹಾರ ವಿತರಣಾ ಕಾರ್ಯನಿರ್ವಾಹಕ ಕೆಲಸಗಾರರನ್ನು ಮಾತನಾಡಲು ಯತ್ನಿಸಿದ್ದು, ಈ ವೇಳೆ ಪ್ರಮುಖವಾಗಿ ಹಂಚಿಕೊಂಡಿದ್ದು ಉದ್ಯೋಗದಾತರ ಹಂಗಿಲ್ಲದೇ, ಸಮಯದ ಇತಿಮಿತಿಗಳಿಲ್ಲದೇ ತಮ್ಮಿಚ್ಚೆಯಂತೆ ದುಡಿಯಬಹುದೆಂದು ಅನೇಕ ಡೆಲಿವರಿ ಬಾಯ್ಸ್ ಅನುಭವ ಹಂಚಿಕೊಂಡಿದ್ದಾರೆ. ಜೊತೆಗೆ ಹಲವು ಮಂದಿ ಈ ಹಿಂದಿನಂತೆ ಲಾಭ ಸಿಗುತ್ತಿಲ್ಲ, ಕಿ.ಮೀ 5 ರಿಂದ 6 ರೂ ಮಾತ್ರ ಸಿಗುತ್ತದೆ. ನಮ್ಮ ಯೂನಿಯನ್ ಇದ್ರು ಯಾವುದೇ ಹೋರಾಟ ಮಾಡಿದ್ರು ಹೆಚ್ಚಿನ ಪ್ರಯೋಜನ ಸಿಗುತ್ತಿಲ್ಲ.ಕೆಲವೊಮ್ಮೆ ದಿನ ಪೂರ್ತಿ ಕಾದರೂ ಕೇವಲ ಮೂರರಿಂದ ನಾಲ್ಕು ಡೆಲವರಿ ಮಾತ್ರ ಸಿಗುತ್ತದೆ ಎಂದು ಅನೇಕ ಸಮಸ್ಯೆಗಳನ್ನು ಗಿಗ್ ಕಾರ್ಮಿಕರು ಹಂಚಿಕೊಂಡಿದ್ದಾರೆ.
ಇದೇ ವೇಳೆ ಪತ್ರಕರ್ತ ರಜತ್ ಅವರು ಸಚಿವ ಸಂತೋಷ್ ಲಾಡ್ ಅವರನ್ನು ಮಾತನಾಡಿಸಿದ್ದು, "ಗಿಗ್ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರಿಗೆ ಸಾಮಾಜಿಕ ಮತ್ತು ಆದಾಯದ ಭದ್ರತೆಯನ್ನು ನೀಡಲು, ರಾಜ್ಯ ಸರ್ಕಾರವು ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ವರ್ಕರ್ಸ್ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ ಶೀಘ್ರದಲ್ಲೇ ಸಂಪುಟ ಸಭೆಯ ಮುಂದೆ ಇಡಲಾಗುವುದು" ಎಂದು ತಿಳಿಸಿದ್ದಾರೆ.
ಒಟ್ಟಾರೆ ಪತ್ರಕರ್ತರೊಬ್ಬರು ಮಾಡಿರುವ ಅಧ್ಯಯನವು ಆಹಾರ ವಿತರಣಾ ಉದ್ಯಮದ ಚೌಕಟ್ಟಿನಲ್ಲಿ ಸಾಮಾನ್ಯವಾಗಿ ಡೆಲಿವರಿ ಬಾಯ್ಸ್ ಎಂದು ಕರೆಯಲ್ಪಡುವ ಆಹಾರ ವಿತರಣಾ ಕಾರ್ಯನಿರ್ವಾಹಕರು ಎದುರಿಸುವ ಬಹುಮುಖಿ ಸವಾಲುಗಳ ಪರಿಶೋಧನೆಗೆ ಒಳಗಾಗುತ್ತದೆ ಅಂದರೆ ತಪ್ಪಾಗಲಾರದು.
ಈ ಅಧ್ಯಯನ ಮೂಲಕ, ವಿತರಣಾ ಕಾರ್ಯನಿರ್ವಾಹಕರು ತಮ್ಮ ದಿನನಿತ್ಯದ ಕಾರ್ಯಾಚರಣೆಗಳಲ್ಲಿ ಎದುರಿಸುತ್ತಿರುವ ವಿವಿಧ ಸವಾಲು, ಕೆಲಸದ ಬಗೆಗಿರುವ ತೃಪ್ತಿ ಮತ್ತು ಯೋಗಕ್ಷೇಮದ ಮೇಲೆ ಸವಾಲುಗಳ ಪರಿಣಾಮಗಳು ತೆರೆದುಕೊಂಡಿದೆ.
ದೈಹಿಕ ಒತ್ತಡ, ಸುರಕ್ಷತೆ ಕಾಳಜಿಗಳು, ಮಾನಸಿಕ ಒತ್ತಡ ಮತ್ತು ಹಣಕಾಸು, ಇದು ವಿತರಣಾ ಕಾರ್ಯನಿರ್ವಾಹಕರ ಕೆಲಸದ ಅನುಭವಗಳು ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಈ ಸವಾಲುಗಳ ಹೊರತಾಗಿಯೂ, ವಿತರಣಾ ಕಾರ್ಯನಿರ್ವಾಹಕರು ತಮ್ಮ ಪಾತ್ರಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಮಾಡಲು ವಿವಿಧ ನಿಭಾಯಿಸುವ ಕಾರ್ಯವಿಧಾನಗಳನ್ನು ಬಳಸುತ್ತಾರೆ ಎಂದು ತಿಳಿದುಬಂದಿದೆ.
ಒಟ್ಟಾರೆ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಕರ್ನಾಟಕ ಸರ್ಕಾರ ಕರಡು ಮಸೂದೆಯ ಅಡಿಯಲ್ಲಿ, ಸರ್ಕಾರವು ಕಾರ್ಮಿಕರಿಗೆ ಕುಂದುಕೊರತೆ ಪರಿಹಾರ ಹಾಗೂ ಸುರಕ್ಷತೆ ಕ್ರಮ ಕೈಗೊಳ್ಳುತ್ತಿದ್ದು ಈ ಕ್ರಮವು ದೇಶದಲ್ಲಿ ಒಂದು ಸಕಾರಾತ್ಮಕ ಹೆಜ್ಜೆಯಾಗಿದೆ.


Click it and Unblock the Notifications