ಬೆಂಗಳೂರು, ಆಗಸ್ಟ್ 5: ಜೀವನದಲ್ಲಿ ಎದುರಾಗುವ ಕಷ್ಟಗಳು, ವೈಫಲ್ಯಗಳನ್ನು ಸ್ಥೈರ್ಯ ಮತ್ತು ಮನೋಬಲದಿಂದ ಎದುರಿಸಿದ್ರೆ ಅವರು ಮತ್ತಷ್ಟು ಬಲಶಾಲಿಯಾಗಿ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಎನ್ನುವುದಕ್ಕೆ ವಿವಿಧ ಸವಾಲುಗಳನ್ನು ಮೆಟ್ಟಿ ನಿಂತ ಕನಿಕಾ ಟೆಕ್ರಿವಾಲ್ ಅವರ ಕಥೆಯೇ ಸ್ಪೂರ್ತಿ. ಕನಿಕಾ ಟೆಕ್ರಿವಾಲ್ ಅವರು ಜೆಟ್‌ಸೆಟ್‌ಗೊ(JetSetGo) ಎಂಬ ವಾಯುಯಾನ ಸ್ಟಾರ್ಟ್‌ಅಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದು ಇದು ಚಾರ್ಟರ್ಡ್ ಫ್ಲೈಟ್ ಮತ್ತು ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುವ ವಿಮಾನ ಅಗ್ರಿಗೇಟರ್ ಸ್ಟಾರ್ಟಪ್ ಆಗಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, JetSetGo ವಿಮಾನ ಸಂಗ್ರಾಹಕ ಕಂಪನಿಯಾಗಿದ್ದು ಇದನ್ನು ಖಾಸಗಿ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳ ಮಾರ್ಕೆಟ್ ಎಂದೇ ಕರೆಯಲಾಗುತ್ತದೆ. ಇದು ಐಷಾರಾಮಿ, ದಕ್ಷತೆ ಮತ್ತು ಸುರಕ್ಷತೆಯಿಂದ ಮೂಲಕ ವಾಯುಯಾನ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡುವ ಗುರಿಯನ್ನು ಹೊಂದಿದೆ.

ಕನಿಕಾ ಟೆಕ್ರಿವಾಲ್ ಅವರ ಪ್ರಯಾಣ:
ಕನಿಕಾ ಟೆಕ್ರಿವಾಲ್ ಅವರು ಸಂಪ್ರಾದಾಯಿಕ ಮಾರ್ವಾಡಿ ಕುಟುಂಬದಲ್ಲಿ ಜನಿಸಿದ್ದು, ಅವರು ಲವ್‌ಡೇಲ್‌ನ ಲಾರೆನ್ಸ್ ಶಾಲೆಗೆ ಪ್ರಾಥಮಿಕ ಹಾಗೂ ಭೋಪಾಲ್‌ನ ಜವಾಹರಲಾಲ್ ನೆಹರು ಹಿರಿಯ ಮಾಧ್ಯಮಿಕ ಶಿಕ್ಷಣ ಪಡೆದರು. ನಂತರ ಕೊವೆಂಟ್ರಿ ವಿಶ್ವವಿದ್ಯಾಲಯದಲ್ಲಿ ತನ್ನ ಉನ್ನತ ವ್ಯಾಸಂಗವನ್ನು ಪೂರ್ಣಗೊಳಿಸಲು ಅವಳು ಬ್ರಿಟನ್ ಗೆ ಪ್ರಯಾಣ ಬೆಳೆಸಿದರು. ಕನಿಕಾ ಅವರು ಬಾಲ್ಯದಿಂದಲೇ ಪೈಲೆಟ್ ಆಗಬೇಕೆಂಬ ಕನಸು ಕಂಡಿದ್ದರು. ಆದರೆ ಅವರ ಕನಸುಗಳನ್ನು ನನಸು ಮಾಡಲು ಹೊರಟಾಗ ಅವರ ಸಂಪ್ರದಾಯವಾದಿ ಮಾರ್ವಾಡಿ ಕುಟುಂಬದಿಂದ ವಿರೋಧವನ್ನು ಎದುರಿಸಬೇಕಾಯಿತು. ಮಾರ್ವಾಡಿ ಕುಟುಂಬದಲ್ಲಿ ಜನಿಸಿ ಪೋಷಕರ ವಿರೋಧ ಲಿಂಗಭೇದಭಾವವನ್ನು ಎದುರಿಸಿದ ಕಾರಣ ಅವರು ತಮ್ಮ ಕನಸುಗಳನ್ನು ತ್ಯಾಗ ಮಾಡಿದರು. ಇದಾಗಿ ಹತ್ತು ವರ್ಷಗಳ ಬಳಿಕ ಅವರು ಸುಮಾರು 10 ಖಾಸಗಿ ಜೆಟ್‌ಗಳನ್ನು ಹೊಂದಿದ್ದರು.!
ಕನಿಕಾ ತಮ್ಮ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಮರಳಿ ಬಂದು ತನ್ನ ಕನಸಿನ ಏವಿಯೇಷನ್ ಕಂಪನಿಗೆ ಸೇರಿಕೊಂಡರು. ಇದೇ ವೇಳೆ ಅಂದರೆ ತಮ್ಮ 22 ನೇ ವಯಸ್ಸಿನಲ್ಲಿ ತಾವು ಕ್ಯಾನ್ಸರ್ ನಿಂದ ಬಳಲುತ್ತಿರುವ ವಿಚಾರ ತಿಳಿದು ಜೀವನವು ಅನಿರೀಕ್ಷಿತ ತಿರುವು ಪಡೆಯಿತು. ಕ್ಯಾನ್ಸರ್ ವಿರುದ್ದ ಹೋರಾಡಿ ಕೊನೆಗೂ ಅದರ ವಿರುದ್ದ ಗೆದ್ದು ಚೇತರಿಸಿಕೊಂಡ ನಂತರ, ಕನಿಕಾ ಒಂದಷ್ಟು ಹಣ ಮತ್ತು ದೃಢಸಂಕಲ್ಪದ ಯೋಚನೆಯೊಂದಿಗೆ ದೆಹಲಿಗೆ ತೆರಳಲು ನಿರ್ಧರಿಸಿದರು.
ಶೀಘ್ರದಲ್ಲೇ, ಅವರು JetSetGo ಸಂಸ್ಥೆಯನ್ನು ಹುಟ್ಟುಹಾಕಿ ಮುಂದೆ ಇತಿಹಾಸ ನಿರ್ಮಿಸಿದರು. ಕನಿಕಾ ತಮ್ಮ ಕಂಪನಿಯನ್ನು ವಿಮಾನ ನಿರ್ವಹಣಾ ಸಂಸ್ಥೆಯಾಗಿ ವಿಕಸನಗೊಳಿಸಿದರು. JetSetGo ಖಾಸಗಿ ಜೆಟ್ ಮತ್ತು ಹೆಲಿಕಾಪ್ಟರ್ ಚಾರ್ಟರ್‌ಗಳಿಗಾಗಿ ಭಾರತದ ಮೊದಲ ಮತ್ತು ಏಕೈಕ ಮಾರುಕಟ್ಟೆಯಾಗಿದೆ . ಭಾರತದಲ್ಲಿ ಚಾರ್ಟರ್ ಪ್ಲೇನ್ ವಲಯವನ್ನು ವಿಭಿನ್ನವಾಗಿ ಪರಿವರ್ತಿಸುವಲ್ಲಿ ಇವರ ಕಂಪನಿಯು ಸಹಾಯ ಮಾಡಿದೆ.
ಕನಿಕಾ ಟೆಕ್ರಿವಾಲ್ ಅವರ ನಿವ್ವಳ ಮೌಲ್ಯ:
2022 ರ ಹೊತ್ತಿಗೆ, ಸ್ವಯಂ ನಿರ್ಮಿತ ಮಹಿಳಾ ಉದ್ಯಮಿಯಾಗಿ ಕನಿಕಾ ಟೆಕ್ರಿವಾಲ್ ಹೊರಹೊಮ್ಮಿದ್ದುಅವರ ಅಂದಾಜು ಮೌಲ್ಯ 420 ಕೋಟಿ ರೂ. ಆಗಿದ್ದು 2021 ರಲ್ಲಿ ಹುರುನ್ ಲೀಡಿಂಗ್ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ತಮ್ಮ ವ್ಯವಹಾರ ಕುಶಾಗ್ರಮತಿಗಾಗಿ ವಿವಿಧ ಪ್ರಶಸ್ತಿಗಳನ್ನು ಗೆದ್ದಿರುವ ಕನಿಕಾ ಅವರಿಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ವಾಣಿಜ್ಯೋದ್ಯಮ ಪ್ರಶಸ್ತಿ ಮತ್ತು ವಿಶ್ವ ಆರ್ಥಿಕ ವೇದಿಕೆಯಿಂದ ಯಂಗ್ ಗ್ಲೋಬಲ್ ಲೀಡರ್ಸ್ ಪ್ರಶಸ್ತಿಯನ್ನು ನೀಡಲಾಯಿತು. BBC 100 ವುಮೆನ್ಸ್, ಫೋರ್ಬ್ಸ್ 30 ಅಂಡರ್ 30 ಲಿಸ್ಟ್ ನಲ್ಲಿ ಕಾಣಿಸಿಕೊಂಡಿರುವ ಇವರು ವಾಣಿಜ್ಯೋದ್ಯಮಿಗಳಿಂದ "ದಿ ಸ್ಕೈ ಕ್ವೀನ್" ಗೌರವವನ್ನು ಸಹ ಪಡೆದುಕೊಂಡಿದ್ದಾರೆ.


Click it and Unblock the Notifications