ಕರ್ನಾಟಕದ ಸಣ್ಣ ವ್ಯಾಪಾರಿಗಳ ತಾಳ್ಮೆ ಗಡಿ ದಾಟಿದೆ. ಜಿಎಸ್‌ಟಿ ಇಲಾಖೆಯ ದಕ್ಷಿಣವ್ಯಾಪಿ ಮರುಪಾವತಿ ನೋಟಿಸ್‌ಗಳ ವಿರುದ್ಧ ಕೆಂಡಾಮಂಡಲವಾಗಿ, ಅಂದಾಜು 65,000ಕ್ಕೂ ಹೆಚ್ಚು ಅಂಗಡಿಗಳು, ಜುಲೈ 23ರಿಂದ 25ರ ವರೆಗೆ ತೀವ್ರ ಪ್ರತಿಭಟನೆಗೆ ಮುಂದಾಗುತ್ತಿವೆ.

ಹೌದು, ಬೇಕರಿಗಳು, ಕಾಂಡಿಮೆಂಟ್ ಅಂಗಡಿಗಳು, ಪಾನ್ ಬೀಡಾ ಅಂಗಡಿಗಳು, ಹಾಲು ಹಾಗೂ ತಂಬಾಕು ಉತ್ಪನ್ನಗಳ ಮಾರುಕಟ್ಟೆ ವ್ಯವಹಾರಗಳು ಈ ಪ್ರತಿಭಟನೆಯ ಭಾಗವಾಗಿದೆ. ಜುಲೈ 23 ಹಾಗೂ 24 ರಂದು ಮಾರುಕಟ್ಟೆಗಳಲ್ಲಿ ಹಾಲು, ತಂಬಾಕು ಮಾರಾಟ ಸ್ಥಗಿತಗೊಳ್ಳಲಿದೆ. ಅಂತಿಮವಾಗಿ, ಜುಲೈ 25ರಂದು ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಲಾಗಿದೆ.
ಈ ಆಂದೋಲನದ ಹಿಂದಿರುವ ಪ್ರಮುಖ ಅಂಶವೆಂದರೆ ಅನ್ಯಾಯದ ತೆರಿಗೆ ನೋಟಿಸ್‌ಗಳು. ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ಇದರ ನೇತೃತ್ವ ವಹಿಸಿದ್ದು, ಸಂಘದ ಅಧ್ಯಕ್ಷ ಡಾ. ರವಿ ಶೆಟ್ಟಿ ಬೈಂದೂರು ಅವರು ಉದಾಹರಣೆ ನೀಡಿ, "ಯಲಹಂಕದ ಅಂಗಡಿಗೆ ₹39 ಲಕ್ಷ ಹಾಗೂ ನಾಗರಭಾವಿಯ ಮತ್ತೊಂದು ಅಂಗಡಿಗೆ ₹33 ಲಕ್ಷ ಜಿಎಸ್‌ಟಿ ನೋಟಿಸ್ ಬಂದಿದೆ, ಆದರೆ ಅವರ ವ್ಯಾಪಾರದ ಮೌಲ್ಯವೇ ಕೇವಲ ₹10 ಲಕ್ಷ!" ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅವರ ಪ್ರಕಾರ, ಈ ನೋಟಿಸ್‌ಗಳು ಕೇವಲ ಲೆಕ್ಕಪತ್ರದ ಲೋಪದೋಷಗಳ ಆಧಾರದ ಮೇಲೆ ಜಾರಿಗೊಂಡಿದ್ದು, ಸಣ್ಣ ವ್ಯಾಪಾರಿಗಳ ಬೆನ್ನೊಡೆದು ಹಾಕುವಂತಾಗಿದೆ.
ಫ್ರೀಡಂ ಪಾರ್ಕ್‌ನಲ್ಲಿ ಜುಲೈ 25ರಂದು ಸಮಾವೇಶ:
ಜುಲೈ 25ರಂದು ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯಮಟ್ಟದ ಸಮಾವೇಶ ನಡೆಯಲಿದೆ. ಬಸ್‌ಗಳಿಗೆ ಬದಲಾಗಿ ಟ್ರಕ್‌ಗಳಲ್ಲಿ ವ್ಯಾಪಾರಿಗಳು ಬೆಂಗಳೂರು ನಗರಕ್ಕೆ ಆಗಮಿಸಲು ಸಜ್ಜಾಗುತ್ತಿದ್ದಾರೆ. ಎಲ್ಲಾ ಜಿಲ್ಲೆಗಳ ವ್ಯಾಪಾರಿ ಸಂಘಟನೆಗಳು ಈ ಸಮಾವೇಶಕ್ಕೆ ಬೆಂಬಲ ವ್ಯಕ್ತಪಡಿಸಿವೆ.
ಡ್ರೈವರ್ ಸಂಘದಿಂದ ಕೇಂದ್ರಕ್ಕೆ ಮನವಿ:
ಈ ಹೋರಾಟವನ್ನು ಹೆಚ್ಚುವರಿ ಬಲ ನೀಡಿರುವುದು ರಾಜ್ಯದ ಬೀದಿ ಬದಿ ವ್ಯಾಪಾರಿಗಳು ಮತ್ತು ಡ್ರೈವರ್ ಸಂಘಗಳು. ಇವರ ಪ್ರಕಾರ, ಜಿಎಸ್‌ಟಿ ಅಧಿಕಾರಿಗಳ ನಿರ್ಬಂಧಾತ್ಮಕ ನಿಲುವುಗಳು ಸೂಕ್ಷ್ಮ ವ್ಯಾಪಾರ ಆರ್ಥಿಕತೆಯ ಮೇಲೆ ಮಾರಕ ಪರಿಣಾಮ ಬೀರುತ್ತಿವೆ. ಡ್ರೈವರ್ ಸಂಘಗಳು ಕೂಡ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮಧ್ಯಪ್ರವೇಶಿಸಲು ಕೇಳಿಕೊಂಡಿದ್ದು, "ಸಣ್ಣ ಉದ್ಯಮಿಗಳ ಬಗ್ಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು" ಎಂದು ಒತ್ತಾಯಿಸುತ್ತಿವೆ
ಜನಸಾಮಾನ್ಯರಿಗೂ ಪ್ರಭಾವ:
ಈ ಆಂದೋಲನದ ಒಂದು ಪ್ರಮುಖ ಮುಖವಾಡವೆಂದರೆ ಆಹಾರ-ತಂಬಾಕು ಉತ್ಪನ್ನಗಳ ತಾತ್ಕಾಲಿಕ ಲಭ್ಯತೆ ಸ್ಥಗಿತ. ಜನಸಾಮಾನ್ಯರಿಗೆ ಇದರಿಂದ ತೊಂದರೆ ಆಗಬಹುದಾದ ಕಾರಣ, ಸಂಘಟನೆಗಳು ಹಾಲು, ಮಾವಿನಹಣ್ಣು, ಸಿಗರೇಟು, ಗುಟ್ಕಾ ಮುಂತಾದವುಗಳ ಖರೀದಿಗೆ ಪೂರ್ವದಿನವೇ ವ್ಯವಸ್ಥೆ ಮಾಡಿಕೊಂಡುಬಿಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿವೆ.
ಈ ಚಳವಳಿ ತೆರಿಗೆ ನಿಯಮಗಳ ವಿರುದ್ಧವಲ್ಲ, ಅಸಮತೋಲನದ ನೀತಿಗಳ ವಿರುದ್ಧದ ಹೋರಾಟವಾಗಿದೆ. ಸರ್ಕಾರ ಈ ಚಳವಳಿಗೆ ಕಿವಿಗೊಡದಿದ್ದರೆ, ಸಣ್ಣ ವ್ಯಾಪಾರಿಗಳ ಸಂಘಟಿತ ಶಕ್ತಿಯು ಮುಂದಿನ ದಿನಗಳಲ್ಲಿ ಆರ್ಥಿಕ ಮತ್ತು ರಾಜಕೀಯ ಮಟ್ಟದಲ್ಲೂ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.


Click it and Unblock the Notifications