ಅಂತು ಇಂತು ರಾಜ್ಯ ಬಜೆಟ್ ಘೋಷಣೆಯಾಗಿದೆ. 2025 ರ ಮೊದಲ ವಿಧಾನಮಂಡಲ ಅಧಿವೇಶನ ಮಾರ್ಚ್ 3 ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 7ರಂದು ರಾಜ್ಯ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ಮೊದಲ ದಿನ ರಾಜ್ಯಪಾಲರು ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ.ಆದಾದ ನಂತರ ಅವರ ಭಾಷಣದ ಮೇಲೆ ಚರ್ಚೆ ಇರುತ್ತದೆ' ಎಂದರು. ನಾನು ಕಾಲು ನೋವಿನಿಂದ ಬಳಲುತ್ತಿದ್ದು ಆದರೂ ಮನೆಯಲ್ಲಿ ಕುಳಿತು ಇಲಾಖೆಗಳ ಸಭೆ ನಡೆಸಿದ್ದೇನೆ. ಇಂದು ರೈತ ಮುಖಂಡರ ಸಭೆ ಮಾಡಿದ್ದೇನೆ. ನಾನು ಎಂದಿಗೂ ರೈತರ ಪರ. ಅತಿ ಹೆಚ್ಚು ಉದ್ಯೋಗ ಅವಲಂಬನೆ ಇರುವುದು ಕೂಡಾ ಕೃಷಿ ಕ್ಶೇತ್ರದಲ್ಲೇ. ಆದ್ದರಿಂದ ರೈತರ ಬೇಡಿಕೆಗಳಿಗೆ ನಮ್ಮದು ಪ್ರಥಮ ಆದ್ಯತೆಯಾಗಿದೆ. ನಮ್ಮ ಸರ್ಕಾರ ಕೂಡಾ ರೈತರ ಹಿತ ಕಾಪಾಡುವಲ್ಲಿ ಮುಂಚೂಣಿಯಲ್ಲಿ ಇರುತ್ತದೆ ಎಂದಿದ್ದಾರೆ

ಬಜೆಟ್ ಮಾಡುವಾಗ ನಮ್ಮ ಇತಿಮಿತಿಯಲ್ಲಿ ಏನು ಸೇರಿಸಬೇಕು ಎಂಬ ಬಗ್ಗೆ ಚರ್ಚೆ ಆಗಿದೆ. ನಮ್ಮ ಸರ್ಕಾರ ಕೃಷಿಕರಿಗೆ ಪೂರಕವಾಗಿ ಇರುತ್ತೇನೆ ಎಂಬ ಮಾತು ಕೊಡುತ್ತೇನೆ. ಬೆಲೆ ಏರಿಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಮಾಡಬೇಕು. ರಾಜ್ಯ ಸರ್ಕಾರದ ಕಡೆಯಿಂದ ಬೆಲೆ ಏರಿಕೆ ನಿಯಂತ್ರಿಸಲು ಏನು ಮಾಡಬೇಕೊ ಅದು ಮಾಡುತ್ತೇವೆ. ಕೇಂದ್ರ ಸರ್ಕಾರ ಕೂಡಾ ಬೆಲೆ ಏರಿಕೆ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು' ಹೇಳಿದ್ದಾರೆ
ರಾಜ್ಯದ ಅಭಿವೃದ್ದಿಗೆ ಇನ್ನಾದರೂ ಸಿಗಲಿದೆಯೇ 'ಗ್ಯಾರಂಟಿ'
2023-24 ರಲ್ಲಿ, ಅಧಿಕಾರಕ್ಕೆ ಬಂದ ಕೂಡಲೇ, ಕಾಂಗ್ರೆಸ್ ಆಡಳಿತವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತು. ಇದರ ನೇರ ಪರಿಣಾಮ ಬೀರಿದ್ದು ರಾಜ್ಯದ ಬೊಕ್ಕಸದ ಮೇಲೆ ಎನ್ನುವುದು ಸುಳ್ಳಲ್ಲ. ರಾಜ್ಯ ಸರ್ಕಾರ ತೆರಿಗೆ ಆದಾಯವನ್ನು ಪಂಚಗ್ಯಾರಂಟಿ, ಬದ್ಧ ವೆಚ್ಚಕ್ಕಾಗಿ ಬಳಕೆ ಮಾಡುತ್ತಿರುವ ಕಾರಣ ಅಭಿವೃದ್ಧಿಗಾಗಿನ ಬಂಡವಾಳ ವೆಚ್ಚಕ್ಕಾಗಿ ಸಂಪೂರ್ಣ ಸಾಲವನ್ನೇ ನೆಚ್ಚಿಕೊಂಡಿದೆ. ರಾಜ್ಯ ಸರ್ಕಾರವು ಡಿಸೆಂಬರ್ ವರೆಗೆ ನಾಲ್ಕು ಪ್ರಮುಖ ತೆರಿಗೆಗಳಿಂದ ಒಟ್ಟು 1,25,101 ಕೋಟಿ ರೂಪಾಯಿ ರಾಜಸ್ವ ಸಂಗ್ರಹಿಸಿದೆ. ಈ ಆದಾಯವು ರಾಜಸ್ವ ವೆಚ್ಚವನ್ನು ಭರಿಸಲು ಉಪಯೋಗವಾಗುತ್ತಿದೆ. ಆರ್‌ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಹೆಚ್ಚಿನ ಸಾಲ ಎತ್ತುವಳಿ ಮಾಡಲು ಆರಂಭಿಸಿದ ಸರ್ಕಾರ ಡಿಸೆಂಬರ್ ತಿಂಗಳಲ್ಲೇ 20,000 ಕೋಟಿ ಸಾಲ ಎತ್ತುವಳಿ ಮಾಡಿದೆ. ಅಲ್ಲದೇ ಇದು ಮುಂದುವರಿಯುತ್ತಲೇ ಬಂದಿದೆ.
ಈ ಹಿಂದಿನ ಎರಡು ಬಜೆಟ್ ನಲ್ಲೂ ಪಂಚ ಗ್ಯಾರಂಟಿಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದ ಕಾರಣ ರಾಜ್ಯ ಹೆಚ್ಚಿನ ಜಿಲ್ಲೆಗಳಿಗೆ ಸಮರ್ಪಕ ಅನುದಾನ ಬಂದಿರಲಿಲ್ಲ. ಈಗ ಮೂರನೇ ಬಜೆಟ್ ಗೆ ಅಣಿಯಾಗುತ್ತಿದ್ದಂತೆಯೇ ನಿರೀಕ್ಷೆಗಳು ಗರಿಕೆದರಿವೆ. ಪಂಚ ಗ್ಯಾರಂಟಿ ಹೊರತುಪಡಿದ್ರೆ ಆಡಳಿತಕ್ಕೆ ಬರುವ ಮುಂಚೆ ಕಾಂಗ್ರೆಸ್ ನೀಡಿದ ಭರವಸೆಗಳಲ್ಲಿ ಬಹುತೇಕ ಚುನಾವಣೆ ಹೇಳಿಕೆಗಳಾಗಿ ಮಾತ್ರ ಉಳಿದುಕೊಂಡಿದೆ. ಹೀಗಾಗಿ ಈ ಬಾರಿಯಾದರೂ ವಿವಿಧ ಕ್ಷೇತ್ರಗಳಿಗೆ ಹಣಕಾಸು ಸಚಿವರಾದ ಸಿಎಂ ಸಿದ್ದರಾಮಯ್ಯ ಅನುದಾನ ಹಂಚಿಕೆ ಮಾಡಬಹುದೆಂಬ ನಿರೀಕ್ಷೆ ಹುಟ್ಟಿಕೊಂಡಿದೆ.
ಗ್ಯಾರಂಟಿ ಮುಂದಿಟ್ಟುಕೊಂಡು ಸಾಧನೆ ಮಾಡಿದ್ದೇವೆ ಎನ್ನುವ ಕಾಲವು ಕಳೆದುಹೋಗಿದೆ. ರಾಜ್ಯದ ಪ್ರಗತಿಗೆ ವೇಗ ನೀಡುವ ಕೆಲಸವಾಗಬೇಕು ಎಂಬ ನಿರೀಕ್ಷೆ ಜನರಲ್ಲಿದೆ. ನೀರಾವರಿ, ಕೈಗಾರಿಕೆ, ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವತ್ತ ಸರ್ಕಾರ ಗಮನ ಹರಿಸಿದ್ರೆ ಉದ್ಯೋಗ ಸೃಷಿಯಾದುವ ಸಾಧ್ಯತೆ ಇದೆ. ಬೆಲೆ ಏರಿಕೆಯಿಂದ ತತ್ತರಿಸುವ ಜನಕ್ಕೆ ಮೆಟ್ರೋ, ಬಸ್ ಪ್ರಯಾಣ ದರ ಏರಿಕೆ ಬಿಸಿತುಪ್ಪದಂತಾಗಿದೆ. ಹೀಗಾಗಿ ಜನಸಾಮಾನ್ಯರಿಗೆ ಯಾವುದೇ ಹೊರೆಯಾದಂತೆ ಬಜೆಟ್ ಮಂಡಿಸುವ ಸವಾಲು ಸಿದ್ದರಾಮಯ್ಯ ಅವರ ಮುಂದಿದೆ.


Click it and Unblock the Notifications