ಬೆಂಗಳೂರು: ಬಡವರ ಅಭಿವೃದ್ಧಿಗಾಗಿ ರೇಷನ್ ಕಾರ್ಡ್ (Ration Card) ಬಹಳ ಮುಖ್ಯ ಪಾತ್ರವಹಿಸುತ್ತದೆ. ಕರ್ನಾಟಕ ಸರ್ಕಾರ ಕೂಡಾ ಅನ್ನಭಾಗ್ಯ ಯೋಜನೆಯಡಿ ಬಡವರ ಅನುಕೂಲಕ್ಕಾಗಿ ಉಚಿತ ಅಕ್ಕಿ, ಆಹಾರ ಧಾನ್ಯಗಳನ್ನು ನೀಡುತ್ತಾ ಬಂದಿದೆ. ಬಡವರು ಮತ್ತು ಬಿಪಿಎಲ್ ಕಾರ್ಡ್‌ಗಳನ್ನು (BPL Card) ಹೊಂದಿರುವ ಕುಟುಂಬಗಳಿಗೆ ಉಚಿತ ಅಕ್ಕಿ (Free Rice) ಒದಗಿಸುವ ಯೋಜನೆ ಇದಾಗಿದ್ದು, ಕಾಂಗ್ರೆಸ್ ಸರ್ಕಾರ ಮಹತ್ವದ ಯೋಜನೆಯಾಗಿದೆ. ಇದೀಗ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಕರ್ನಾಟಕ ಸರ್ಕಾರ 2026-27ನೇ ಸಾಲಿನ ಬಜೆಟ್‌ನಲ್ಲಿ (Karnataka Budget 2026-27) ಬಂಪರ್ ಗಿಫ್ಟ್ ಕೊಟ್ಟಿದೆ.

ಹೌದು, ಇದೀಗ 2026-27ನೇ ಆರ್ಥಿಕ ಬಜೆಟ್ ಮಂಡನೆ ವೇಳೆ, ಅನ್ನ ಭಾಗ್ಯ ಯೋಜನೆಯಡಿ ನೀಡಲಾಗುವ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಾಗಿ, ಇಂದಿರಾ ಆಹಾರ ಕಿಟ್ ವಿತರಿಸುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಬಿಪಿಎಲ್ ಕಾರ್ಡ್‌ದಾರರಿಗೆ ಸಿಹಿ ಸುದ್ದಿ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಾರ್ಚ್ 6) ದಾಖಲೆಯ 17ನೇ ಕರ್ನಾಟಕ ಬಜೆಟ್ ಮಂಡಿಸಿದರು. ಈ ಸಂದರ್ಭದಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ನೀಡಲಾಗುತ್ತಿದ್ದ ಅಕ್ಕಿಯಲ್ಲಿ ಭಾರೀ ಬದಲಾವಣೆಯಾಗಲಿದೆ. ಆ ಪ್ರಕಾರ ಪ್ರತೀ ತಿಂಗಳು ಸಿಗುತ್ತಿದ್ದ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ರದ್ದುಗೊಳಿಸಿ, ಅದರ ಬದಲಿಗೆ ಇಂದಿರಾ ಆಹಾರ ಕಿಟ್ ನೀಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಇದು ಬಡವರಿಗೆ ಪೌಷ್ಠಿಕಾಂಶಯುಕ್ತ ಆಹಾರ ಒದಗಿಸುವ ಉದ್ದೇಶದಿಂದ ತೆಗೆದುಕೊಂಡ ಮಹತ್ವದ ನಿರ್ಧಾರವೆಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಒಂದು ಯೋಜನೆ, ಕೋಟಿಗಟ್ಟಲೆ ಫಲಾನುಭವಿಗಳಿಗೆ ಲಾಭ!
ಅನ್ನಭಾಗ್ಯ ಯೋಜನೆಯಡಿ 4.54 ಕೋಟಿ ಫಲಾನುಭವಿಗಳಿಗೆ ಪ್ರತೀ ತಿಂಗಳು ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಕಳೆದ ಮೂರು ವರ್ಷಗಳಿಂದ ಈ ಯೋಜನೆಗಾಗಿ ಒಟ್ಟು 17,167 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಆದ್ರೆ ಇದೀಗ ಈ ಹೆಚ್ಚುವರಿ 5 ಕೆಜಿ ಅಕ್ಕಿ ನೀಡುವುದರ ಬದಲಾಗಿ, ಪ್ರತೀ ತಿಂಗಳು ಪೌಷ್ಠಿಕಾಂಶ ಒಳಗೊಂಡ ಇಂದಿರಾ ಕಿಟ್ ವಿತರಿಸಲು ಸರ್ಕಾರ ನಿರ್ಧರಿಸಿದೆ.
ಇಂದಿರಾ ಆಹಾರ ಕಿಟ್‌ನಲ್ಲಿ ಏನೇನು ಇರುತ್ತೆ?
ಇನ್ನು ಇಂದಿರಾ ಕಿಟ್‌ನಲ್ಲಿ ತೊಗರಿ ಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ ಇರಲಿದೆ ಎಂದು ಹೇಳಲಾಗಿದೆ. ಇನ್ನು ಕಿಟ್ ವಿತರಣೆ ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಬದಲಾಗಲಿದೆ.
ಅನ್ನಭಾಗ್ಯ ಯೋಜನೆ ಕೋಟಿ ಅನುದಾನ ಮೀಸಲು:
2026-27 ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಅನ್ನಭಾಗ್ಯ ಯೋಜನೆಗೆ ಸುಮಾರು 6,200 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಡಲಾಗಿದೆ. ಈ ನಿರ್ಧಾರದಿಂದ ಬಿಪಿಎಲ್ ಕಾರ್ಡ್‌ನಲ್ಲಿ ಆಗುತ್ತಿರುವ ಅಕ್ರಮ, ಅಕ್ಕಿಯ ದುರುಪಯೋಗಗಳನ್ನು ನಿಯಂತ್ರಿಸಲಾಗುತ್ತದೆ. ಅಲ್ಲದೇ ಪೌಷ್ಠಿಕಾಂಶ ಸುಧಾರಣೆ ಮತ್ತು ಸರ್ಕಾರಿ ವೆಚ್ಚವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಈ ಮೂಲಕ ಸಿದ್ದರಾಮಯ್ಯ ಅವರು ರಾಜ್ಯದ 17 ನೇ ದಾಖಲೆಯ ಬಜೆಟ್ ಮಂಡನೆಯಲ್ಲಿ ಹಲವು ಅನುದಾನಗಳನ್ನು ಘೋಷಿಸಿದ್ದು, ಕೃಷಿ, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ ಕ್ಷೇತ್ರಗಳು ಸೇರಿ ಕೋಟಿಗಟ್ಟಲೆ ಅನುದಾನ ಘೋಷಣೆ ಮಾಡಿದ್ದಾರೆ.


Click it and Unblock the Notifications