ಸಿಎಂ ಕುರ್ಚಿ ಕಾದಾಟದ ನಡುವೆಯೇ ಇದೀಗ 2026-27ನೇ ಸಾಲಿನ ಕರ್ನಾಟಕ ಬಜೆಟ್ (Karnataka Budget 2026-27) ಮಂಡನೆಗೆ ದಿನ ಫಿಕ್ಸ್ ಆಗಿದೆ. ಸದ್ಯ ರಾಜ್ಯದಲ್ಲಿ ಸಿಎಂ ಸ್ಥಾನಕ್ಕಾಗಿ ಭಾರೀ ಚರ್ಚೆಗಳು ನಡೆಯುತ್ತಿದೆ. ಈ ಮಧ್ಯೆ ಮಾರ್ಚ್ 6, 2026 ರಿಂದ ಮಾರ್ಚ್ 27, 2026 ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಅಲ್ಲದೇ ಮಾರ್ಚ್ 6 ರಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಇದು ಅವರ 17ನೇ ದಾಖಲೆಯ ಬಜೆಟ್ ಆಗಿದ್ದು, ರಾಜ್ಯದ ಇತಿಹಾಸದಲ್ಲೇ ಒಬ್ಬ ವ್ಯಕ್ತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಸೃಷ್ಟಿಸಲಿದ್ದಾರೆ.

ರಾಜ್ಯ ಬಜೆಟ್‌ಗೆ ಮುಹೂರ್ತ ಫಿಕ್ಸ್!
ಹೌದು, ಸಿಎಂ ಸಿದ್ದರಾಮಯ್ಯ ಅವರು ಮಾರ್ಚ್ 6, 2026 ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಈಗಾಗಲೇ ಸಿದ್ಧತೆಗಳು ನಡೆಯುತ್ತಿದ್ದು, ಈ ಬಜೆಟ್ ಮಂಡನೆ ಮೂಲಕ ಸಿದ್ದರಾಮಯ್ಯ ಅವರು ಇತಿಹಾಸ ಬರೆಯಲಿದ್ದಾರೆ. ಮಾರ್ಚ್ 6 ರಂದು ಬಜೆಟ್ ಮಂಡಿಸುವ ಮೂಲಕ ರಾಜ್ಯದಲ್ಲಿ ಅತೀ ಹೆಚ್ಚು ಬಜೆಟ್ ಮಂಡನೆ ಮಾಡಿದ ಸಿಎಂ ಎಂಬ ದಾಖಲೆ ಬರೆಯಲಿದ್ದಾರೆ.
ಸೋಷಿಯಲ್ ಮೀಡಿಯಾ ಪೋಸ್ಟ್!
ಇನ್ನು ಬಜೆಟ್ ಮಂಡನೆ ಬಗ್ಗೆ ಸಿಎಂ ಸಿದ್ದರಾಮಯ್ಯನವರು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಅದರಲ್ಲಿ "ಮಾರ್ಚ್ 6 ರಿಂದ 27 ರವರೆಗೆ ಒಟ್ಟು 14 ದಿನಗಳ ಕಾಲ ರಾಜ್ಯ ಬಜೆಟ್ ಅಧಿವೇಶ ನಡೆಸಲು ಗುರುವಾರ ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಮಾರ್ಚ್ 6 ರಂದು ದಾಖಲೆಯ 17ನೇ ಬಜೆಟ್ ಅನ್ನು ನಾನು ಮಂಡನೆ ಮಾಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ಸಚಿವ ಸಂಪುಟದಲ್ಲಾದ ಪ್ರಮುಖ ನಿರ್ಣಯಗಳು:
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಎಲ್ಲಾ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳ ಜೊತೆಗೆ ಗುರುವಾರ ಸಚಿವ ಸಂಪುಟ ಸಭೆ ನಡೆಯಿತು. ಈ ವೇಳೆ ಬಜೆಟ್ ಮಂಡನೆ ಜೊತೆಗೆ ರಾಜ್ಯದ ಅಭಿವೃದ್ಧಿಗಾಗಿ ಹಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಇದೀಗ ಈ ನಿರ್ಣಯಗಳ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
- ಬೀದರ್, ಕೊಪ್ಪಳ, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ 14 ವರ್ಷದ ಹೆಣ್ಣು ಮಕ್ಕಳಿಗೆ ಕೆಕೆಆರ್‌ಡಿಬಿ ಅನುದಾನದಡಿ ಎಚ್‌ಪಿವಿ ಲಸಿಕೆ ಖರೀದಿಸಲು 15.34 ಕೋಟಿಗಳ ಅನುದಾನ ಬಳಕೆಗೆ ಒಪ್ಪಿಗೆ ನೀಡಲಾಗಿದೆ.
- ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ 71.41 ಕೋಟಿಗಳ ಅಂದಾಜು ಮೊತ್ತದಲ್ಲಿ 43 ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಘಟನೋತ್ತರ ಅನುಮೋದನೆ ನೀಡಿದೆ.
- 2021 ರಿಂದ 2025 ರವರೆಗೆ ಸ್ಥಾಪಿಸಲಾದ 148 ಬಿಪಿಎಚ್‌ಯುಗಳ ಪೈಕಿ 50 ಕೇಂದ್ರಗಳಲ್ಲಿ ಪ್ರಯೋಗಾಲಯ, ಐಸಿಟಿ ಘಟಕ ಮತ್ತು ಪೀಠೋಪಕರಣಗಳ ಖರೀದಿಗೆ 15ನೇ ಹಣಕಾಸು ಆಯೋಗದ 22.37 ಕೋಟಿಗಳ ಅನುದಾನ ಬಳಕೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ 11.12 ಕೋಟಿಗಳ ಅಂದಾಜು ಮೊತ್ತದಲ್ಲಿ ಜೀನ್ ಬ್ಯಾಂಕ್ ಸ್ಥಾಪನೆಗೆ ತೀರ್ಮಾನ ಮಾಡಿದೆ.
- ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಟಿಬಿ ಆಸ್ಪತ್ರೆ ಆವರಣದಲ್ಲಿ ಹೊಸದಾಗಿ ಆರಂಭಿಸುತ್ತಿರುವ 200 ಹಾಸಿಗೆ ಸಾಮರ್ಥ್ಯದ ಕ್ಯಾನ್ಸರ್ ಆಸ್ಪತ್ರೆಯನ್ನು 330.59 ಕೋಟಿಗಳ ಅಂದಾಜು ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- ಬೆಂಗಳೂರು ಟರ್ಫ್ ಕ್ಲಬ್ ಅನ್ನು ಕುಣಿಗಲ್ ಸ್ಟಡ್ ಫಾರ್ಮ್‌ಗೆ ಸ್ಥಳಾಂತರಿಸಲು ತೀರ್ಮಾನ
- 2026-27ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಒಂದು ಜೊತೆ ಶೂ ಮತ್ತು 2 ಜೊತೆ ಸಾಕ್ಸ್‌ಗಳನ್ನು ವಿದ್ಯಾವಿಕಾಸ ಯೋಜನೆಯಡಿ ನೀಡಲು ನಿರ್ಧರಿಸಲಾಗಿದೆ.


Click it and Unblock the Notifications