ಹೊಸವರ್ಷದ ಆರಂಭದಲ್ಲಿ ಕರ್ನಾಟಕ ರಾಜ್ಯದ ಜನತೆಗೆ ಸರ್ಕಾರವು, ಸರಕಾರಿ ಬಸ್ ಪ್ರಯಾಣ ದರ ಏರಿಕೆ ಮಾಡಿ ಶಾಕ್ ನೀಡಿದೆ. ಜನವರಿ 2ರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆ.ಎಸ್ ಆರ್.ಟಿ.ಸಿ ಮತ್ತು ಬಿಎಂಟಿಸಿ ಸೇರಿದಂತೆ ನಾಲ್ಕು ರಾಜ್ಯ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಲು ಅನುಮೋದನೆ ನೀಡಿದೆ.
ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಶಕ್ತಿಯಿಂದ ರಾಜ್ಯದ 4 ಸಾರಿಗೆ ನಿಗಮಗಳಿಗೆ ಹೆಚ್ಚು ಆದಾಯ ಬರುತ್ತಿದೆ ಎಂದು ಘೋಷಿಸಿಕೊಂಡಿದ್ದ ಸರ್ಕಾರ ಈಗ ಅದೇ ಸಾರಿಗೆ ನಿಗಮಗಳಿಗೆ ಮತ್ತಷ್ಟು ಆರ್ಥಿಕ ' ಶಕ್ತಿ' ತುಂಬುವ ಯೋಜನೆಯಲ್ಲಿ ಎಲ್ಲಾ ಪ್ರಕಾರಗಳ ಬಸ್ ಪ್ರಯಾಣ ದರವನ್ನು ಸರಾಸರಿ ಶೇ. 15 ರಷ್ಟು ಹೆಚ್ಚಳ ಮಾಡಿದೆ.

ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ , "ಸಾರಿಗೆ ನಿಗಮಗಳು ಶೇ. 15 ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಸಾಧಕ ಭಾದಕ ಲೆಕ್ಕಾಚಾರ ಹಾಕಿ ಎಲ್ಲಾ ಬಸ್ ಗಳ ಪ್ರಯಾಣ ದರವನ್ನು ಶೇ. 15 ರಷ್ಟು ಹೆಚ್ಚಿಸಲು ಸಚಿವ ಸಂಪುಟ ಅಸ್ತು ಎಂದಿದೆ. ಜನವರಿ 5ರಿಂದ ಪ್ರಯಾಣ ದರ ಏರಿಕೆ ಜಾರಿಗೆ ಬರಲಿದೆ. ಇಂಧನ ಬೆಲೆ ಹಾಗೂ ಸಿಬ್ಬಂದಿ ಮೇಲಿನ ಖರ್ಚು, ಸಂಬಳ ಹೆಚ್ಚಳ ಸೇರಿದಂತೆ ಕಾರ್ಯಾಚರಣೆ ವೆಚ್ಚ ಗಣನೀಯವಾಗಿ ಏರಿಕೆಯಾಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. 2021 ರ ನಂತರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಉತ್ತರ ಪಶ್ಚಿಮ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಗಳಿಗೆ ಮತ್ತು 2015 ರ ನಂತರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಗೆ ಇದು ಮೊದಲ ಬಾರಿಗೆ ದರ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರದ ಲೆಕ್ಕಾಚಾರ
ಸದ್ಯಕ್ಕೆ ಯಾವುದೇ ಚುನಾವಣೆಗಳು ಕಾರಣ ಜನಾಕ್ರೋಶದ ಪರಿಣಾಮ ತಟ್ಟುವುದಿಲ್ಲ ಎಂಬ ಲೆಕ್ಕಚಾರದಲ್ಲಿ ಸಾರಿಗೆ ಸಂಸ್ಥೆಗಳ ಬಹುದಿನಗಳ ಬೇಡಿಕೆಗೆ ಸಚಿವ ಸಂಪುಟ ಸಮ್ಮತಿ ನೀಡಿದೆ. ಆ ಮೂಲಕ ಹೊಸವರ್ಷದಲ್ಲಿ ರಾಜ್ಯದ ಜನರಿಗೆ ಅದರಲ್ಲೂ ಪುರುಷ ಪ್ರಯಾಣಿಕರಿಗೆ ಸರಕಾರ ಅಘಾತ ನೀಡಿದೆ. ಈ ದರ ಪರಿಷ್ಕರಣೆಯಿಂದ ನಾಲ್ಕು ಸಾರಿಗೆ ನಿಗಮಗಳಿಗೆ ನಿತ್ಯ 7.84 ಹಾಗೂ ಮಾಸಿಕವಾಗಿ ಆದಾಯದಲ್ಲಿ 74.85 ಕೋಟಿ ರೂ.ನಷ್ಟು ಹೆಚ್ಚಳವಾಗಲಿದೆ.
"ಸದ್ಯ ರಾಜ್ಯದಲ್ಲಿ ಡಿಸೇಲ್ ಬೆಲೆ 88.99 ರೂ. ಇದೆ. 2020 ರಲ್ಲಿ ರಾಜ್ಯದಲ್ಲಿ 68 ರೂ ಡಿಸೇಲ್ ಇತ್ತು. ಅದು 2014 ರಲ್ಲಿ ರಾಜ್ಯದಲ್ಲಿ 54 ರಿಂದ 55 ರೂ. ಇತ್ತು. ಇದರಿಂದ ದಿನಕ್ಕೆ 9.16 ಕೋಟಿ ರೂ. ಖರ್ಚು ಆಗುತ್ತಿತ್ತು. ಆದರೆ ಈಗ ಡೀಸೆಲ್ ಖರ್ಚು 13..21 ಕೋಟಿ ರೂ. ತಲುಪಿದೆ. ಸಿಬ್ಬಂದಿ ವೆಚ್ಚ 12.58 ಕೋಟಿ ರೂ. ಇದ್ದದ್ದು18.36 ಕೋಟಿ.ರೂ ಆಗಿದೆ. ಇದೆಲ್ಲದ್ದರಿಂದ ನಾಲ್ಕು ಸಾರಿಗೆ ನಿಗಮಗಳಿಗೆ ನಿತ್ಯ 9.56 ಕೋಟಿ ರೂ. ಹೆಚ್ಚುವರಿ ಹೊರೆಯಾಗುತ್ತಿದೆ. ಇದನ್ನು ಸರಿದೂಗಿಸಲು ಬಸ್ ದರ ಹೆಚ್ಚಳ ಮಾಡಲಾಗುತ್ತಿದೆ. ಶಕ್ತಿ ಯೋಜನೆಗಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 5,015 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಪ್ರತಿ ತಿಂಗಳು ನಾಲ್ಕು ನಿಗಮಗಳಿಗೆ 417 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಆಗುವುದಿಲ್ಲ" ಎಂದು ಎಚ್‌ಕೆ ಪಾಟೀಲ್ ವಿವರಿಸಿದರು.


Click it and Unblock the Notifications