ಬೆಂಗಳೂರು ಅಕ್ಟೋಬರ್ 22: ಸರ್ಕಾರ ಬಡವರಿಗಾಗಿ ನೀಡುತ್ತಿರುವ ಸೌಲಭ್ಯಗಳನ್ನು ಅನರ್ಹರು ಪಡೆಯುತ್ತಿರುವ ಘಟನೆ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರಾಜ್ಯದಲ್ಲಿ 14 ಲಕ್ಷ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿದೆ. ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಸೋಮವಾರ ವಿವರಿಸಿದ್ದಾರೆ.
ರಾಜ್ಯದಲ್ಲಿ 4.35 ಕೋಟಿ ಫಲಾನುಭವಿಗಳು 1.51 ಕೋಟಿ ಪಡಿತರ ಚೀಟಿ ಮೂಲಕ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಆದರೆ ಇತ್ತೀಚೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು 13.87 ಲಕ್ಷ ಅನರ್ಹ ಕಾರ್ಡ್‌ಗಳನ್ನು ಗುರುತಿಸಿದ್ದು, ಅವುಗಳಲ್ಲಿ 3.64 ಲಕ್ಷ ರದ್ದುಗೊಳಿಸಲಾಗಿದೆ. ಇದರಲ್ಲಿ ಸರ್ಕಾರಿ ನೌಕರರ 2,964 ಕಾರ್ಡ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಸಚಿವ ಕೆ ಎಚ್ ಮುನಿಯಪ್ಪ ತಿಳಿಸಿದ್ದಾರೆ.

6 ತಿಂಗಳವರೆಗೆ ಪಡಿತರ ಪಡೆಯದಿರುವವರು, ಒಂದು ವರ್ಷದವರೆಗೆ ಡಿಬಿಟಿ ಪಡೆಯದಿರುವವರು ಮತ್ತು ನಿಗದಿತಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರು ಅನರ್ಹರೆಂದು ಪರಿಗಣಿಸಲ್ಪಟ್ಟಿರುವುದರಿಂದ ಅನರ್ಹ ಪಡಿತರ ಚೀಟಿಗಳ ಸಂಖ್ಯೆ 20 ಲಕ್ಷಕ್ಕಿಂತ ಹೆಚ್ಚಿರಬಹುದು ಎಂದು ಮುನಿಯಪ್ಪ ಅವರು ಹೇಳಿದ್ದಾರೆ.
ಹೀಗಾಗಿ ಇದನ್ನು ತಪ್ಪಿಸಲು ಸರ್ಕಾರ ಮುಂದಾಗಿದ್ದು ಮುಂದಿನ ದಿನಗಳಲ್ಲಿ ಫಲಾನುಭವಿಗಳು ಹೊಸ ಕಾರ್ಡ್‌ಗಳನ್ನು ಪಡೆಯಲು ಹೊಸ ಅರ್ಜಿಗಳನ್ನು ಸಲ್ಲಿಸಲು ಆಹ್ವಾನಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಪ್ರತಿ ಅನ್ನಭಾಗ್ಯ ಫಲಾನುಭವಿಗೆ ಐದು ಕೆಜಿ ಅಕ್ಕಿ ಬದಲಿಗೆ 170 ರೂ.ಗಳ ನೇರ ಬ್ಯಾಂಕ್ ವರ್ಗಾವಣೆ (ಡಿಬಿಟಿ) ಮುಂದುವರಿಯುತ್ತದೆ ಎಂದು ಮುನಿಯಪ್ಪ ಹೇಳಿದರು.
ರಾಜ್ಯಕ್ಕೆ ಕೆಜಿ ಅಕ್ಕಿಯನ್ನು 28 ರೂ.ಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಹೆಚ್ಚುವರಿ ಕಾರ್ಡ್‌ಗಳಿಗೆ ಅಗತ್ಯವಿರುವ ಹೆಚ್ಚುವರಿ 20,000 MT ಅಕ್ಕಿಯನ್ನು ರಾಜ್ಯವು ಸಂಗ್ರಹಿಸುತ್ತದೆ. 2023-24ರಲ್ಲಿ ಕರ್ನಾಟಕಕ್ಕೆ ವಾರ್ಷಿಕ 27.48 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಕೆಜಿಗೆ 34.6 ರೂಪಾಯಿಗೆ ನೀಡಲು ಕೇಂದ್ರ ನಿರಾಕರಿಸಿದಾಗ, ರಾಜ್ಯವು ತನ್ನ ಚುನಾವಣಾ ಪೂರ್ವ ಭರವಸೆಯಂತೆ 5 ಕೆಜಿ ಅಕ್ಕಿ ಬದಲಿಗೆ 170 ರೂಪಾಯಿ ನೀಡಲು ನಿರ್ಧರಿಸಿತು. ನುಡಿದಂತೆ ಸರ್ಕಾರ ನಡೆದುಕೊಂಡಿದೆ ಎಂದು ಹೇಳಿದರು.
ಇನ್ನೂ ಹೋಟೆಲ್, ಸಮುದಾಯ ಭವನಗಳಲ್ಲಿ ಆಹಾರ ಪೋಲು ಮಾಡುವುದನ್ನು ತಡೆಯಲು ಕಾನೂನು ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೆ ಎಚ್ ಮುನಿಯಪ್ಪ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.


Click it and Unblock the Notifications