ರಾಜ್ಯಕ್ಕೆ ವಿದೇಶಿ ಹೂಡಿಕೆಗಳನ್ನು ಆಕರ್ಷಿಸಲು ಫೆಬ್ರವರಿ 2025ರಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೇಟ್‌ನಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರವು 2023-24ನೇ ಸಾಲಿನಲ್ಲಿ ಸುಮಾರು 88,150 ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸಿದೆ. ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್, ವಿದ್ಯುತ್ ಚಾಲಿತ ವಾಹನಗಳಿಗೆ ಲಿಥಿಯಂ ಅಯಾನ್ ಬ್ಯಾಟರಿ ತಯಾರಿಕೆ, ತಯಾರಿಕಾ ವಲಯ, ಆಟೊಮೊಬೈಲ್, ಡೇಟಾ ಸೆಂಟರ್ ಮತ್ತಿತರ ವಲಯಗಳಲ್ಲಿ ಈ ಹೂಡಿಕೆಗಳನ್ನು ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

80 ಸಾವಿರ ಉದ್ಯೋಗ
ಬೆಂಗಳೂರು ಸಮೀಪ ಸುಮಾರು 2000 ಎಕರೆ ಪ್ರದೇಶದಲ್ಲಿ Knowledge Health Care, Innovation and Research City ಅಭಿವೃದ್ಧಿಪಡಿಸಲು ಯೋಜಿಸಲಾಗಿದ್ದು, ಈ ಯೋಜನೆಯಿಂದ ಅಂದಾಜು 40,000 ಕೋಟಿ ರೂ.ಗಳ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 80,000 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಕೈಗಾರಿಕಾ ಅಭಿವೃದ್ಧಿಯಲ್ಲಿ ಕರ್ನಾಟಕದ ಉನ್ನತ ಸ್ಥಾನವನ್ನು ಉಳಿಸಿಕೊಳ್ಳಲು ಹಾಗೂ ಇನ್ನೂ ಹೆಚ್ಚು ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಾಗುವುದು ಎಂದಿದ್ದಾರೆ. .
ಗ್ರಾಮೀಣ ಜನರಲ್ಲಿ ಆರ್ಥಿಕ ಶಿಸ್ತು ಮತ್ತು ಉಳಿತಾಯ ಮನೋಭಾವವನ್ನು ಉತ್ತೇಜಿಸಲು ಎಂ.ಎಸ್.ಐ.ಎಲ್. ವತಿಯಿಂದ ಚಿಟ್‌ಫಂಡ್ ಅನ್ನು ಗ್ರಾಮಾಂತರ ಪ್ರದೇಶಗಳಿಗೆ ವಿಸ್ತರಿಸಲಾಗುವುದು. ಯಶವಂತಪುರದಲ್ಲಿ ಕೆ.ಎಸ್.ಡಿ.ಎಲ್ ವತಿಯಿಂದ ಜಮೀನಿನಲ್ಲಿ ವಿವಿಧ ಸರ್ಕಾರಿ ಇಲಾಖೆಗಳನ್ನು ನಿರ್ವಹಿಸಲು ಸುಸಜ್ಜಿತ ಕಛೇರಿ ಸಂಕೀರ್ಣವನ್ನು ನಿರ್ಮಿಸಲಾಗುವುದು ಎಂದು ಭರವಸೆಯನ್ನು ನೀಡಿದ್ದಾರೆ.
ವಿವಿಧ ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಕೈಗಾರಿಕಾ ವಸಾಹತುಗಳನ್ನು ಕೇಂದ್ರ ಸರ್ಕಾರದ ಸಹಯೋಗದಲ್ಲಿ 39 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ನಿಗಮದ ಮೂಲಕ ಮೇಲ್ದರ್ಜೆಗೇರಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ಧಾರೆ.
ಧಾರವಾಡದಲ್ಲಿ ಕೈಗಾರಿಕಾ ನೋಡ್
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಬೆಂಗಳೂರು-ಮುಂಬಯಿ ಎಕನಾಮಿಕ್ ಕಾರಿಡಾರ್ ಯೋಜನೆಯಡಿ ಧಾರವಾಡ ಸಮೀಪ ಸುಮಾರು 6,000 ಎಕರೆ ಜಮೀನಿನಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡುವ ಸಂಬಂಧ ಕೈಗಾರಿಕಾ ನೋಡ್ ಅನ್ನು ಅಭಿವೃದ್ಧಿಪಡಿಸುವ ಮೂಲಕ ಉತ್ತರ ಕರ್ನಾಟಕದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ಆರ್ಥಿಕ ಬೆಳವಣಿಗೆಗಳಿಗೆ ಉತ್ತೇಜನ ನೀಡಲು ತೀರ್ಮಾನಿಸಿದೆ ಎಂದಿದ್ದಾರೆ.
ಸರ್ಕಾರಿ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು ಮತ್ತು ಎಂ.ಎಸ್.ಎಂ.ಇ.ಗಳನ್ನು TReDS ವೇದಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಎಂ.ಎಸ್.ಎಂ.ಇ. ಗಳಿಗೆ ಬರಬೇಕಾದ ಪಾವತಿಗಳು ಕಾಲಮಿತಿಯೊಳಗೆ ಸ್ವೀಕೃತಿಯಾಗಿ ಅವುಗಳ ನಗದು ಹರಿವು ಸಧೃಡಗೊಳಿಸಬೇಕು ಎಂಬ ಉದ್ದೇಶದಿಂದ TReDS ಸೇವಾ ಪೂರೈಕೆದಾರರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡ್ಯದ ಮೈಶುಗರ್ ಕಾರ್ಖಾನೆಯ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆಯನ್ನು ನಿರ್ಮಿಸಲಾಗುವುದು. ಸರ್ಕಾರದ ಅನುದಾನ, ಇತರೆ ಮೂಲಗಳು ಹಾಗೂ ಕಾರ್ಖಾನೆಯ Asset Monetisation ಮೂಲಕ ಸಂಪನ್ಮೂಲವನ್ನು ಕ್ರೋಢೀಕರಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.
ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ (ರಾಯಚೂರು) ಮತ್ತು ಮೈಸೂರು ವಿಭಾಗಗಳಲ್ಲಿ ನೂತನ ಜವಳಿ ಪಾರ್ಕ್ಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗುವುದು. ಇದರಿಂದ ಸುಮಾರು 10,000 ಉದ್ಯೋಗ ಸೃಷ್ಟಿಯಾಗಲಿದೆ. ಜವಳಿ ಪಾರ್ಕ್ಗಳು ಇಲ್ಲದಿರುವ ರಾಜ್ಯದ 25 ಜಿಲ್ಲೆಗಳಲ್ಲಿ ಮಿನಿ ಜವಳಿ ಪಾರ್ಕ್ಗಳನ್ನು ಸ್ಥಾಪಿಸುವ ಉದ್ದಿಮೆದಾರರಿಗೆ ಮೂಲಸೌಕರ್ಯಕ್ಕಾಗಿ ಜವಳಿ ನೀತಿಯನ್ವಯ ಸಹಾಯಧನವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.


Click it and Unblock the Notifications