ವಿವಿಧ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಗುರಿಗಳೊಂದಿಗೆ ಕರ್ನಾಟಕ ಸರ್ಕಾರ ಬೃಹತ್ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡ್ತಿದೆ. ಎರಡು ವಿವಿಧ ಉನ್ನತ ಮಟ್ಟದ ಸಮಿತಿಗಳ ಜೊತೆ ಸಭೆ ನಡೆಸಿದ ರಾಜ್ಯ ಸರ್ಕಾರ, ಒಟ್ಟು 17,182.77 ಕೋಟಿ ರೂ.ಗಳ ಹೂಡಿಕೆ ಬಜೆಟ್ ಹೊಂದಿರುವ 69 ಯೋಜನೆಗಳಿಗೆ ಆಮೋದನೆ ಒದಗಿಸಿದೆ.

ಹೌದು, ಬುಧವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಉನ್ನತ ಮಟ್ಟದ ಸಭೆ ನಡೆಯಿತು. ಅನುಮತಿ ಸಮಿತಿಯ 65ನೇ ಸಭೆಯಲ್ಲಿ ಒಟ್ಟು 15,441.17 ಕೋಟಿ ರೂ.ಗಳ ಆರು ಮಹತ್ವದ ಹೂಡಿಕೆ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಾಯಿತು. ಈ ಹೂಡಿಕೆಗಳು ಹೊಸ ಮತ್ತು ವಿಸ್ತರಣಾ ಯೋಜನೆಗಳೇ ಆಗಿದ್ದು, 5,277 ಉದ್ಯೋಗಗಳ ಸೃಷ್ಟಿಯನ್ನು ನಿರೀಕ್ಷಿಸಲಾಗಿದೆ. ವಿಶೇಷವಾಗಿ, 13,921 ಕೋಟಿ ರೂ.ಗಳ ಮೌಲ್ಯದ ನಾಲ್ಕು ಹೊಸ ಹೂಡಿಕೆ ಪ್ರಸ್ತಾವನೆಗಳು 3,948 ಉದ್ಯೋಗಾವಕಾಶಗಳನ್ನು ಒದಗಿಸುವದಾಗಿ ತಿಳಿಸಲಾಗಿದೆ.
ಸಾವಿರಾರು ಜನರಿಗೆ ಉದ್ಯೋಗವಕಾಶ:
ಇನ್ನು ಈ ಹೂಡಿಕೆಗಳಲ್ಲಿ ಎಮ್ವೀ ಎನರ್ಜಿ ಪ್ರೈವೇಟ್ ಲಿಮಿಟೆಡ್ 5,495 ಕೋಟಿ ರೂ. ಹೂಡಿಕೆ ಮಾಡುವ ಮೂಲಕ 2,508 ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆಯನ್ನು ಮಂಡಿಸಿದೆ. ಡಾಲ್ಮಿಯಾ ಸಿಮೆಂಟ್ (ಭಾರತ್) ಲಿಮಿಟೆಡ್ ಎರಡು ಪ್ರಸ್ತಾವನೆಗಳಿಗೆ ಒಪ್ಪಿಗೆ ಪಡೆದಿದ್ದು, ಬೆಳಗಾವಿ ಜಿಲ್ಲೆಯ ಯಾದವಾಡದಲ್ಲಿ 3,000 ಕೋಟಿ ರೂ. ಹೂಡಿಕೆ ಮಾಡುವ ಮೂಲಕ 570 ಉದ್ಯೋಗ ಸೃಷ್ಟಿಸುವುದು ಮತ್ತು ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ 3,020 ಕೋಟಿ ರೂ. ಹೂಡಿಕೆ ಮೂಲಕ ಮತ್ತೊಂದು 570 ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಶ್ರೀ ಸಿಮೆಂಟ್ ಲಿಮಿಟೆಡ್ 2,406 ಕೋಟಿ ರೂ. ಹೂಡಿಕೆ ಮಾಡುವ ಮೂಲಕ 300 ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಯೋಜನೆ ಸಹ ಅನುಮೋದನೆ ಪಡೆದಿದೆ.
ಹಲವು ತಿದ್ದುಪಡಿ ಪ್ರಸ್ತಾವನೆಗಳಿಗೂ ಒಪ್ಪಿಗೆ ನೀಡಲಾಗಿ, ಒಟ್ಟು 1,520.17 ಕೋಟಿ ರೂ. ಹೂಡಿಕೆ ಮತ್ತು 1,329 ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ. ಈ ಹಿಂದಿನ ಹೂಡಿಕೆ ಯೋಜನೆಗಳಲ್ಲಿ ಬಾಷ್ ಆಟೋಮೋಟಿವ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 1,330 ಕೋಟಿ ರೂ. ಹೂಡಿಕೆ ಮಾಡಿ 958 ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ಮತ್ತು ಕಲರ್‌ಟೋನ್ ಟೆಕ್ಸ್ಟೈಲ್ಸ್ ಪ್ರೈವೇಟ್ ಲಿಮಿಟೆಡ್ 190.17 ಕೋಟಿ ರೂ. ಹೂಡಿಕೆ ಮೂಲಕ 371 ಉದ್ಯೋಗಗಳನ್ನು ಒದಗಿಸುವ ಯೋಜನೆಯಿದೆ. ಹೆಚ್ಚುವರಿ ಭೂ ಹಂಚಿಕೆ ಮತ್ತು ಸಮಯ ವಿಸ್ತರಣೆಗಾಗಿ 10 ತಿದ್ದುಪಡಿ ಯೋಜನೆಗಳಿಗೆ ಸಹ ಅವಕಾಶ ನೀಡಲಾಗಿದೆ.
ಅಂದಹಾಗೆ ಇದಕ್ಕೂ ಮುನ್ನವೇ ನಡೆದ 153ನೇ ರಾಜ್ಯ ಮಟ್ಟದ ಏಕ ಗವಾಕ್ಷಿ ಅನುಮತಿ ಸಮಿತಿಯು 1,741.6 ಕೋಟಿ ರೂ. ಹೂಡಿಕೆಯ 63 ಯೋಜನೆಗಳಿಗೆ ಅನುಮೋದನೆ ನೀಡಿತ್ತು. ಈ ಯೋಜನೆಗಳು ರಾಜ್ಯದಾದ್ಯಂತ 7,219 ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ನಿರೀಕ್ಷೆಯಾಗಿದೆ.
ಹೂಡಿಕೆ ಮೌಲ್ಯ ಆಧಾರಿತವಾಗಿ, 50 ಕೋಟಿ ರೂ.ಕ್ಕಿಂತ ಹೆಚ್ಚು ಮೌಲ್ಯದ ಏಳು ಯೋಜನೆಗಳಿಗೆ ಒಪ್ಪಿಗೆ ನೀಡಿದ್ದು, 593.8 ಕೋಟಿ ರೂ. ಹೂಡಿಕೆ ಮತ್ತು 2,093 ಉದ್ಯೋಗಾವಕಾಶಗಳೊಂದಿಗೆ ಇವೆ. 15-50 ಕೋಟಿ ರೂ.ಗಳ ವ್ಯಾಪ್ತಿಯ 53 ಯೋಜನೆಗಳು 1,106.6 ಕೋಟಿ ರೂ. ಹೂಡಿಕೆಯೊಂದಿಗೆ 4,961 ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾಗಿ ನಿರೀಕ್ಷಿಸಲಾಗಿದೆ. ಉಳಿದ ಮೂರು ಯೋಜನೆಗಳು 41.2 ಕೋಟಿ ರೂ. ಹೂಡಿಕೆ ಹಾಗೂ 165 ಉದ್ಯೋಗಾವಕಾಶಗಳೊಂದಿಗೆ ಅನುಮೋದನೆ ಪಡೆದಿವೆ.
ಈ ಹೂಡಿಕೆಗಳಲ್ಲಿ ಪ್ರಮುಖ ಕಂಪನಿಗಳು ಪ್ರೊವಿಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ (125.88 ಕೋಟಿ ರೂ.), ವಿಕೆ ಬಿಲ್ಡಿಂಗ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (97.52 ಕೋಟಿ ರೂ.), ಮತ್ತು ಟಿಟಿಪಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (91.2 ಕೋಟಿ ರೂ.) ಸೇರಿವೆ.


Click it and Unblock the Notifications