ಕರ್ನಾಟಕ ಆಯವ್ಯಯವನ್ನು ಮಾ. 7 ರಂದು ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ದತೆ ನಡೆಸುತ್ತಿದ್ದಾರೆ. ಆದರೆ ಇದರ ಬೆನ್ನಲ್ಲೇ ನಂದಿನಿ ಹಾಲಿನ ದರ ಹೆಚ್ಚಳವಾಗುವ ಸಾಧ್ಯತೆ ನಿಚ್ಚಳವಾಗಿದೆ.
ಈಗಾಗಲೇ ರಾಜ್ಯದಲ್ಲಿ ಮೆಟ್ರೋ ಟಿಕೆಟ್ ದರ, ಶೇ.15ರಷ್ಟು ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡಿದ್ದ ರಾಜ್ಯ ಸರ್ಕಾರ ಈಗ ಜನತೆಗೆ ಮೇಲೆ ಮತ್ತೊಂದು ಹೊರೆ ಏರಿಸಲು ಸಿದ್ದತೆ ನಡೆಸುತ್ತಿದೆ ಎಂಬ ಅನುಮಾನ ಕಾಡತೊಡಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ನಂದಿನಿ ಹಾಲಿನ ಮಾರಾಟ ದರವನ್ನು ಲೀಟರ್‌ಗೆ 5 ರೂ. ಹೆಚ್ಚಳ ಮಾಡುವಂತೆ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು (KMF) ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಬಜೆಟ್ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಲಿನ ಬೆಲೆ ಹೆಚ್ಚಳಕ್ಕೆ ಸಮ್ಮತಿಸುವ ಸಾಧ್ಯತೆಯಿದೆ. ಹೈನುಗಾರಿಕೆಗೆ ತಗಲುವ ಖರ್ಚು ವೆಚ್ಚಗಳು ಹೆಚ್ಚಳವಾಗಿದ್ದು ಇದಕ್ಕಾಗಿ ಹಾಲಿನ ಬೆಲೆ ಏರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಲಾಗಿದೆ.

ಕೆಎಂಎಫ್ ಮತ್ತು ಅದರ ಸದಸ್ಯ ಜಿಲ್ಲಾ ಹಾಲು ಒಕ್ಕೂಟಗಳು ಹಲವು ತಿಂಗಳುಗಳಿಂದ ಹಾಲಿನ ಬೆಲೆ ಹೆಚ್ಚಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿವೆ. ಇದರ ಜೊತೆಗೆ, ರೈತರು ಸಹ ಬೆಂಗಳೂರಿನ ಕೆಎಂಎಫ್ ಮುಖ್ಯ ಕಚೇರಿ ಎದುರು ಪ್ರತಿಭಟನೆ ನಡೆಸಿ, ಹಾಲಿನ ಬೆಲೆ ಏರಿಸುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಕೆಎಂಎಫ್ ಮತ್ತು ಜಿಲ್ಲಾ ಹಾಲು ಒಕ್ಕೂಟಗಳ ಪ್ರತಿನಿಧಿಗಳು ಸಭೆ ನಡೆಸಿ, ಹಾಲಿನ ಬೆಲೆ ಹೆಚ್ಚಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಿದ್ದರು.
ಅಂದು ಕೈಗೊಂಡ ನಿರ್ಧಾರದಂತೆ ಹಾಲಿನ ಬೆಲೆಯನ್ನು ಲೀಟರ್‌ಗೆ 5 ರೂ.ಏರಿಕೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಒಂದು ವೇಳೆ ಹಾಲಿನ ದರ ಹೆಚ್ಚಿಸದಿದ್ದರೆ ಜಿಲ್ಲಾ ಹಾಲು ಒಕ್ಕೂಟಗಳು ನಷ್ಟ ಅನುಭವಿದುವುದರ ಜೊತೆಗೆ ಮತ್ತೊಂದೆಡೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಇತರೆ ಬ್ರ್ಯಾಂಡ್‌ಗಳ ಹಾಲಿನ ದರಕ್ಕೆ ಹೋಲಿಸಿದರೆ ರಾಜ್ಯದಲ್ಲಿ ನಂದಿನಿ ಹಾಲಿನ ಬೆಲೆ ಕಡಿಮೆಯಾಗಿದೆ ಎಂದು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ತಿಂಗಳಷ್ಟೇ ರಾಜ್ಯದ ಎಲ್ಲಾ 16 ಹಾಲು ಒಕ್ಕೂಟದ ಅಧ್ಯಕ್ಷರು, ನಿರ್ದೇಶಕರು, ಹಾಗೂ ಕೆ.ಎಂ.ಎಫ್ ಅಧಿಕಾರಿಗಳೊಂದಿಗೆ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರೊಂದಿಗೆ ಸಭೆ ನಡೆಸಿ ಹಾಲು ದರ ಏರಿಕೆ ಮಾಡಬೇಕಾದ ಅನಿವಾರ್ಯತೆಯ ಕುರಿತು ಚರ್ಚೆ ನಡೆಸಿದ್ದರು. ಒಂದೆಡೆ ಪಶು ಆಹಾರದ ಬೆಲೆ ಗಗನಕ್ಕೇರಿದ್ದು ಇದರಿಂದ ರೈತರ ಆದಾಯದಲ್ಲಿ ಕಡಿತವಾಗಿದೆ. ಮೇವು, ಕೆಲಸಗಾರರ ವೇತನ, ವಿದ್ಯುತ್ ಸೇರಿ ಖರ್ಚು ವೆಚ್ಚಗಳು ಹೆಚ್ಚಾಗುತ್ತಿದ್ದು, ಹೀಗಾಗಿ ಹಾಲಿನ ದರ ಲೀಟರ್ ಗೆ 5 ರೂ. ಏರಿಸಬೇಕು ಎಂಬ ಒತ್ತಡ ಹಾಕಿದ್ದರು.
ಒಟ್ಟಾರೆ ಹಾಲಿನ ದರ ಏರಿಕೆ ವಿಚಾರವು ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರ ಅಂಗಳ ತಲುಪಿದ್ದು, ಮುಖ್ಯಮಂತ್ರಿಗಳು ಬಜೆಟ್ ಹಾಗೂ ವಿಧಾನಮಂಡಲ ಅಧಿವೇಶನದ ಬಳಿಕ ಸಹಕಾರ ಸಚಿವರು, ಪಶು ಸಂಗೋಪನಾ ಸಚಿವರು, ಕೆಎಂಎಫ್ ಅಧ್ಯಕ್ಷರು, ಜಿಲ್ಲಾ ಹಾಲು ಒಕ್ಕೂಟಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಗ್ರಾಹಕರಿಗೂ ಹೊರೆಯಾಗದಂತೆ, ಆರ್ಥಿಕವಾಗಿ ಹಾಲು ಒಕ್ಕೂಟಗಳಿಗೂ ಸಮಸ್ಯೆಯಾಗದಂತೆ ದರ ಏರಿಕೆ ಬಗ್ಗೆ ನಿರ್ಣಯ ಕೈಗೊಳ್ಳುವ ಹೊಣೆಗಾರಿಕೆ ಸಿಎಂ ಮೇಲಿದೆ. ಹೀಗಾಗಿ ಹಾಲಿನ ದರವನ್ನು ಲೀಟರ್‌ಗೆ 3 ರೂ. ಹೆಚ್ಚಳ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಇನ್ನು ಈ ಹಿಂದೆ ಕೆಎಂಎಫ್ 2023ರ ಆಗಸ್ಟ್‌ನಲ್ಲಿ ಹಾಲಿನ ದರವನ್ನು ಲೀಟರ್‌ಗೆ 3 ರೂ. ಹೆಚ್ಚಿಸಿತ್ತು. ಆಗ ದರ ಪರಿಷ್ಕರಣೆಯೊಂದಿಗೆ ಹಾಲಿನ ದರವು ಲೀಟರ್‌ಗೆ 39 ರೂ.ನಿಂದ 42 ರೂ.ಗೆ ಹೆಚ್ಚಳವಾಗಿತ್ತು. ನಂತರ ರಾಜ್ಯದಲ್ಲಿ ಹಾಲು ಸಂಗ್ರಹಣೆಯು ದಾಖಲೆ ಪ್ರಮಾಣದಲ್ಲಿಏರಿಕೆಯಾಗಿದ್ದ ಕಾರಣಕ್ಕೆ ಕೆಎಂಎಫ್, 2024ರ ಜೂನ್ 26ರಿಂದ ಅನ್ವಯವಾಗುವಂತೆ ಹಾಲಿನ ದರ ಪರಿಷ್ಕರಣೆಯೊಂದಿಗೆ ಗ್ರಾಹಕರಿಗೆ ಹೆಚ್ಚುವರಿ ಹಾಲು ವಿತರಿಸಲು ಆರಂಭಿಸಿತ್ತು. ನಂದಿನಿ ಬ್ರ್ಯಾಂಡ್‌ನ ಎಲ್ಲಾ ಮಾದರಿಯ ಹಾಲಿನ ದರದಲ್ಲಿ ಲೀಟರ್‌ಗೆ 2 ರೂ. ಹೆಚ್ಚಿಸಲಾಗಿತ್ತು. ಗ್ರಾಹಕರು ಕೊಡುವ 2 ರೂ. ಹೆಚ್ಚುವರಿ ಹಣಕ್ಕೆ ಪ್ರತಿಯಾಗಿ 50 ಎಂಎಲ್ ಹೆಚ್ಚುವರಿ ಹಾಲು ವಿತರಣೆ ಮಾಡಲಾಗುತ್ತಿದೆ.


Click it and Unblock the Notifications