ಕೇಂದ್ರ ಸರ್ಕಾರವು ಫೆ.1 ರಂದು ಬಜೆಟ್ ಮಂಡನೆ ಮಾಡಿದ್ದು ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ಆಯವ್ಯಯ ಮಂಡನೆಗೆ ತಯಾರಿ ಆರಂಭಿಸಿದೆ. ನಾಳೆಯಿಂದ ಅಂದರೆ ಫೆ. 6ರಿಂದ ಸಿಎಂ ಸಿದ್ದರಾಮಯ್ಯ ಬಜೆಟ್ ಸಿದ್ಧತೆ ಆರಂಭಿಸಲಿದ್ದಾರೆ. ಫೆಬ್ರವರಿ 6ರಿಂದ 14ರ ತನಕ ಬಜೆಟ್ ಪೂರ್ವಭಾವಿ ಚರ್ಚೆ ನಿಗದಿಯಾಗಿದ್ದು, ಶಕ್ತಿ ಭವನದಲ್ಲಿ ವಿವಿಧ ಇಲಾಖೆಗಳ ಬೇಡಿಕೆಗಳ ಕುರಿತ ಬಜೆಟ್ ಸಿದ್ಧತಾ ಸಭೆ ನಡೆಯಲಿದೆ.
ರಾಜ್ಯ ವಿಧಾನಸಭೆಯ ಅಧಿವೇಶನ ಮಾ. 3ರಂದು ಆರಂಭಗೊಳ್ಳಲಿದೆ. ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಅಂದು ರಾಜ್ಯಪಾಲರು ಭಾಷಣ ಮಾಡಲಿದ್ದು, ಮಾ.7ರಂದು ಬಹು ನಿರೀಕ್ಷಿತ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ. ಮುಂದಿನ ಕ್ಯಾಬಿನೆಟ್ ನಲ್ಲಿ ಬಜೆಟ್ ದಿನಾಂಕ, ಜಂಟಿ ಅಧಿವೇಶನ ದಿನಾಂಕ ಅಂತಿಮಗೊಳಿಸಲಿರುವ ಸರ್ಕಾರ ಅಧಿಕೃತ ಘೋಷಣೆ ಮಾಡಲಿದೆ.

ಬಜೆಟ್ ಹಿನ್ನಲೆಯಲ್ಲಿ ನಾಳೆ ಮುಖ್ಯಮಂತ್ರಿಗಳು ಬ್ಯಾಕ್ ಟು ಬ್ಯಾಕ್ ಆಗಿ ೧೩ ಇಲಾಖೆಗಳೊಂದಿಗೆ ಸಭೆ ನಡೆಸಲಿದ್ದಾರೆ. ಗುರುವಾರ 13 ಇಲಾಖೆಗಳ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಿದ್ದು ಇದು ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಅವರು ನಡೆಸಿರುವ ಅತೀ ದೀರ್ಘಾವಧಿ ಸಭೆಯಾಗಿದೆ. ಈ ಸಭೆ ಬೆಳಗ್ಗೆ 11ರಿಂದ ರಾತ್ರಿ 7ರವರೆಗೆ ಚರ್ಚೆ ನಡೆಯಲಿದೆ.
ಒಳಾಡಳಿತ,ಕೈಗಾರಿಕೆ , ರೇಷ್ಮೆ, ಪಶು ಸಂಗೋಪನೆ, ಮೂಲಸೌಲಭ್ಯ, ಸಣ್ಣ ಕೈಗಾರಿಕೆ, ಇಂಧನ, ಲೋಕೋಪಯೋಗಿ, ಕಾರ್ಮಿಕ, ಶಾಲಾ ಶಿಕ್ಷಣ, ಆಹಾರ, ನಾಗರಿಕ ಸರಬರಾಜು, ಸಹಕಾರ ಇಲಾಖೆ ಸಭೆ ಗುರುವಾರ ನಡೆಯಲಿದೆ. ವಿಶೇಷ ಅಂದರೆ ಈ ಎಲ್ಲಾ ಇಲಾಖೆಗೆ ಸರಾಸರಿ ಅರ್ಧ ಗಂಟೆ ಮಾತ್ರ ಸಮಯಾವಕಾಶ ನೀಡಲಾಗಿದೆ. 30 ನಿಮಿಷಗಳ ಸಭೆಗಳಲ್ಲಿ, ಸಿಎಂ ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳು ಇಲಾಖೆಯ ಬಜೆಟ್ ಪ್ರಸ್ತಾವನೆಗಳನ್ನು ಪರಿಶೀಲಿಸಲಿದ್ದಾರೆ. ನಂತರ ಶುಕ್ರವಾರ, ಶನಿವಾರ, ಸೋಮವಾರ ಮತ್ತು ಮುಂದಿನ ಗುರುವಾರ ಮತ್ತಷ್ಟು ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ, ಕಂದಾಯ, ಕೃಷಿ, ಅಲ್ಪಸಂಖ್ಯಾಕ ಮತ್ತು ವಕ್ಸ್, ವಸತಿ, ಉನ್ನತ ಶಿಕ್ಷಣ, ಮುಜರಾಯಿ, ಸಾರಿಗೆ, ನಗರಾಭಿವೃದ್ಧಿ, ಪೌರಾಡಳಿತ ಮತ್ತು ಹಜ್, ಸಣ್ಣ ನೀರಾವರಿ ಇಲಾಖೆಗಳ ಸಭೆ ಫೆಬ್ರವರಿ 7 ರಂದು ನಡೆಯಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮೀನುಗಾರಿಕೆ, ಬಂದರು ಮತ್ತು ಒಳನಾಡು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ, ಅರಣ್ಯ ಮತ್ತು ಪರಿಸರ ಇಲಾಖೆಗಳ ಸಭೆ ಫೆಬ್ರವರಿ 8 ರಂದು ನಡೆಯಲಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ, ಸಕ್ಕರೆ, ಜವುಳಿ ಮತ್ತು ಕೃಷಿ ಮಾರುಕಟ್ಟೆ, ಪರಿಶಿಷ್ಟ ವರ್ಗಗಳ ಕಲ್ಯಾಣ, ಯುವಜನಸೇವೆ ಮತ್ತು ಕ್ರೀಡೆ, ಸಿಬಂದಿ ಮತ್ತು ಆಡಳಿತ ಸುಧಾರಣೆ, ವಾರ್ತಾ ಇಲಾಖೆಗಳ ಸಭೆ ಫೆಬ್ರವರಿ 10 ರಂದು ನಡೆಯಲಿದೆ. ತೋಟಗಾರಿಕೆ, ಗಣಿ ಮತ್ತು ಭೂವಿಜ್ಞಾನ, ವೈದ್ಯ ಶಿಕ್ಷಣ, ಕೌಶಲಾಭಿವೃದ್ಧಿ ಇಲಾಖೆಗಳ ಸಭೆ ಫೆಬ್ರವರಿ 14 ರಂದು ನಡೆಯಲಿದೆ. ಒಟ್ಟಾರೆ ಸಿಎಂ ಮ್ಯಾರಥನ್ ಸಭೆಗಳನ್ನು ನಡೆಸಲಿದ್ದಾರೆ.
ದಾಖಲೆಯ ಬಜೆಟ್ ಜೊತೆ ಸವಾಲನ್ನು ಎದುರಿಸುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ತಮ್ಮ ದಾಖಲೆಯ 16 ನೇ ಬಜೆಟ್ ಅನ್ನು ಮಂಡಿಸಲಿದ್ದು ಇದರೊಂದಿಗೆ, ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನ ನೀಡುವ ಸವಾಲನ್ನು ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಪಂಚ ಗ್ಯಾರಂಟಿಗಳಿಂದ ಬೊಕ್ಕಸ ಬರಿದಾಗಿದೆ ಎನ್ನುವುದು ವಿಪಕ್ಷಗಳ ವಾದವಾಗಿದೆ. ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗಿ ಪರಿಣಮಿಸಿದ್ದು, ಪರಿಹಾರ ಕಂಡು ಕೊಳ್ಳುವುದು ಕಷ್ಟಕರವಾಗಿದೆ. ಆದರೆ, ಸರ್ಕಾರ ಗ್ಯಾರಂಟಿ ಯೋಜನೆಗಳ ಮುಂದುವರೆಸಲು ಬದ್ಧವಾಗಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಿಸುವುದೇ ಸವಾಲಾಗಿದೆ.
ರಾಜ್ಯದಲ್ಲಿ ಜುಲೈ 2023ರಲ್ಲಿ 14ನೇ ಬಜೆಟ್ ಮಂಡಿಸಿದಾಗಲೇ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಸಿದ್ದರಾಮಯ್ಯ ಅವರ ಹೆಸರಿನಲ್ಲಿದೆ. 2024-25ನೇ ಸಾಲಿನ ಬಜೆಟ್ ಅನ್ನು ಫೆಬ್ರವರಿ ತಿಂಗಳಲ್ಲಿ ಮಂಡಿಸಿದ್ದರು. ಇದು ಅವರ 15ನೇ ಬಜೆಟ್ ಆಗಿತ್ತು. ಕರ್ನಾಟಕದ ಮಾಜಿ ರಾಜ್ಯಪಾಲರೂ ಆಗಿರುವ ಗುಜರಾತ್ ನ ಮಾಜಿ ಆರ್ಥಿಕ ಸಚಿವ ವಜೂಬಾಯಿ ವಾಲಾ ಅವರು 18 ಬಾರಿ ಬಜೆಟ್ ಮಂಡಿಸುವ ಮೂಲಕ ದೇಶದಲ್ಲೇ ದಾಖಲೆ ನಿರ್ಮಿಸಿದ್ದರು.


Click it and Unblock the Notifications