ಬೆಂಗಳೂರು ಜುಲೈ 23: ನೂತನ ಕೈಗಾರಿಕಾ ನೀತಿ 2020-25 ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ವಿಷಯವನ್ನು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ರಾಜ್ಯದಲ್ಲಿ 5 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಆಕರ್ಷಣೆ, 20 ಲಕ್ಷ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಹಾಗೂ ಕೈಗಾರಿಕಾಭಿವೃದ್ದಿಯಲ್ಲಿ ಹಿಂದುಳಿದ ಜಿಲ್ಲೆಗಳ ಅಭಿವೃದ್ದಿಗೆ ಅನುವು ಮಾಡಿಕೊಡುವಂತಹ ನೂತನ ಕೈಗಾರಿಕಾ ನೀತಿ 2020-25 ರಾಜ್ಯವನ್ನು ಇನ್ನಷ್ಟು ಕೈಗಾರಿಕಾ ಸ್ನೇಹಿ ಮಾಡುವತ್ತ ಪ್ರಮುಖ ಹೆಜ್ಜೆಯಾಗಿದೆ, ಇದಕ್ಕೆ ಇಂದು ಸಚಿವ ಸಂಪುಟದ ಅನುಮೋದನೆ ದೊರೆತಿರುವುದು ಬಹಳ ಸಂತಸದ ವಿಷಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನ ಕೈಗಾರಿಕಾ ನೀತಿಗೆ ಅನುಮೋದನೆ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಐದು ವರ್ಷಗಳ ನಿಯಮಿತ ಅವಧಿ
ರಾಜ್ಯದಾದ್ಯಂತ ಸಮತೋಲಿತ, ಸುಸ್ಥಿರ ಮತ್ತು ಸಮಗ್ರ ಕೈಗಾರಿಕಾ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಸರ್ಕಾರವು ಐದು ವರ್ಷಗಳ ನಿಯಮಿತ ಅವಧಿಯಲ್ಲಿ ಕೈಗಾರಿಕಾ ನೀತಿಗಳನ್ನು ಹೊರತರುತ್ತ್ತಿದೆ ಎಂದರು.
ಹೊಸ ಅವಕಾಶಗಳು ಹೊರ ಹೊಮ್ಮಿರುತ್ತದೆ
2014ನೇ ಸಾಲಿನಲ್ಲಿ ಹಿಂದಿನ ಕೈಗಾರಿಕಾ ನೀತಿಯನ್ನು ಹೊರತಂದಿದ್ದು, ತದನಂತರ ಅನೇಕ ಬದಲಾವಣೆಗಳು ಆಗಿ ಉತ್ಪಾದನೆ ಮತ್ತು ಉತ್ಪಾದನಾ ಸಂಬಂಧಿತ ಸೇವಾ ಕೈಗಾರಿಕೆಗಳು, ಇದರ ಜೊತೆಗೆ ಸ್ಮಾರ್ಟ್ ಉತ್ಪಾದನೆ, ಗ್ರಾಹಕೀಕರಣ, ಸಹಕಾರತ್ವದ ಉತ್ಪಾದನೆ ಇತ್ಯಾದಿ ಬೆಳವಣಿಗೆಗಳನ್ನು ಒಳಗೊಂಡಂತೆ ಹೊಸ ಅವಕಾಶಗಳು ಹೊರ ಹೊಮ್ಮಿರುತ್ತದೆ ಎಂದು ಶೆಟ್ಟರ್ ಹೇಳಿದರು.
ಸಮಾನ ಅವಕಾಶಗಳನ್ನು ಒದಗಿಸುವುದು
ನೂತನ ಕೈಗಾರಿಕಾ ನೀತಿ 2020-25ರ ಗಮನವು ಕರ್ನಾಟಕ ಕೈಗಾರಿಕಾ ಶಕ್ತಿಯನ್ನು ಬಳಸಿಕೊಂಡು, ಕೈಗಾರೀಕರಣಕ್ಕಾಗಿ ಪರಿಸರವನ್ನು ಶಕ್ತಗೊಳಿಸುವುದು, ಮೂಲಸೌಕರ್ಯಗಳ ಅಭಿವೃದ್ಧಿ, ರಾಜ್ಯದ ಜನರಿಗೆ ವಿಶೇಷವಾಗಿ ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ಹಾಗೂ ಟಯರ್-2 & ಟಯರ್-3 ನಗರಗಳಲ್ಲಿ ಸಮಾನ ಅವಕಾಶಗಳನ್ನು ಒದಗಿಸುವುದು ಹಾಗೂ ಬಂಡವಾಳ ಹೂಡಿಕೆಯ ಅಭಿವೃದ್ಧಿಯನ್ನು ರಾಜ್ಯದಲ್ಲಿ ಖಾತರಿಪಡಿಸಲಾಗುವುದು ಎಂದು ಶೆಟ್ಟರ್ ತಿಳಿಸಿದರು.
ಮೂರು ಜೋನ್‍ಗಳನ್ನಾಗಿ ವಿಂಗಡಿಸಲಾಗಿದೆ
ನೂತನ ಕೈಗಾರಿಕಾ ನೀತಿ 2020-25 ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಬೆಂಗಳೂರಿನಿಂದ ಹೊರಗಡೆ ಕೈಗಾರಿಕೆಗಳನ್ನು ಕರ್ನಾಟಕದಾದ್ಯಂತ ಟಯರ್-2 ಹಾಗೂ ಟಯರ್-3 ನಗರಗಳಲ್ಲಿ ವಿಸ್ತರಿಸುವ ಧ್ಯೇಯವನ್ನು ಹೊಂದಿರುತ್ತದೆ. ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, ಈ ಪಾಲಿಸಿಯಲ್ಲಿ ಹಿಂದುಳಿದಿರುವ ಕೈಗಾರಿಕಾ ಅಭಿವೃದ್ಧಿಯನುಸಾರ ಬಂಡವಾಳ ಹೂಡಿಕೆಗಳಿಗೆ ರಿಯಾಯಿತಿ ಒದಗಿಸಲು ರಾಜ್ಯದ ಜಿಲ್ಲೆಗಳನ್ನು ಮೂರು ಜೋನ್‍ಗಳನ್ನಾಗಿ ವಿಂಗಡಿಸಲಾಗಿದೆ. ಜೋನ್-1 ಹಾಗೂ 2 ರಡಿ ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳು ಸೇರಿರುತ್ತವೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳನ್ನು ಜೋನ್-3 ರಲ್ಲಿ ವರ್ಗೀಕರಿಸಲಾಗಿದೆ.


Click it and Unblock the Notifications