ಕರ್ನಾಟಕದಲ್ಲಿ ತಾಪಮಾನದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇಎ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ಬೇಗೆ ಎಲ್ಲೆ ಮಿರಿ ಹೋಗಿದೆ. ಬಿಸಿಲಿಗೆ ಬರುವ ಮುನ್ನ ಯೋಚಿಸಿ ಬರಬೇಕಾಗುತ್ತದೆ. ಧಗೆ ಹೆಚ್ಚಾಗುತ್ತಿರುವ ಕಾರಣ ಕುಡಿಯುವ ನೀರಿನ ಬಳಕೆಯೂ ಹೆಚ್ಚಾಗುತ್ತಿದೆ. ಮಕ್ಕಳು, ವಯೋ ವೃದ್ಧರು ಈ ಬಿಸಿಲಿನಲ್ಲಿ ಹೊರಗೆ ಬಂದರೆ ದೇಹದ ಉಷ್ಣಾಂಶ ಹೆಚ್ಚಾಗಿ, ರೋಗಗಳಿಗೆ ತುತ್ತಾಗುವ ಸಾಧ್ಯತೆಗಳೂ ಇವೆ.

ಇನ್ನು ಮೊನ್ನೆ (ಮಾರ್ಚ್ 8) ಬೆಂಗಳೂರಿನಲ್ಲಿ ಈ ವರ್ಷದ ಅತ್ಯಧಿಕ ತಾಪಮಾನ ದಾಖಲಾಗಿದ್ದು, 34.6° ಸೆಲ್ಸಿಯಸ್ ತಲುಪಿದೆ. ಭಾರತೀಯ ಹವಾಮಾನ ಇಲಾಖೆ ಗಮನಿಸಿರುವ ಪ್ರಕಾರ, ಇದು ಸಾಮಾನ್ಯಕ್ಕಿಂತ 1.9° ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ ಎನ್ನಲಾಗಿದೆ. ಇನ್ನು ನಿನ್ನೆ(ಮಾರ್ಚ್ 8) 34.4° ಸೆಲ್ಸಿಯಸ್ ತಾಪಮಾನ ಆಗಿತ್ತು. ಹಾಗೆಯೇ ಇಂದು (ಭಾನುವಾರ-ಮಾರ್ಚ್ 9) ತಾಪಮಾನದ ತೀವ್ರತೆ 35° ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ. ಬೇಸಿಗೆ ಆರಂಭದಲ್ಲೇ ಇಷ್ಟೊಂದು ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಜನರು ಮನೆಯಿಂದ ಹೊರಗೆ ಕಾಲಿಡಲೂ ಯೋಚಿಸುವಂತಾಗಿದೆ. ಅಲ್ಲದೇ ಬಿಸಿಲಿನ ತಾಪಮಾನ ಈಗಲೇ ಹೀಗಿದೆ ಎಂದರೆ, ಮುಂದಿನ ದಿನಗಳಲ್ಲಿ ಹೇಗಿರಬೇಡ ಎಂಬ ಆತಂಕ ಎದುರಾಗಿದೆ.
ಇನ್ನು ಭಾರತೀಯ ಹವಾಮಾನ ಇಲಾಖೆಯು ಈ ಬಗ್ಗೆ ಮುನ್ಸೂಚನೆ ಕೂಡ ನೀಡಿದೆ. ಅದೇನೆಂದರೆ ಏಪ್ರಿಲ್ ಮತ್ತು ಮೇ ಎರಡನೇ ವಾರದವರೆಗೆ ಬೆಂಗಳೂರಿನಲ್ಲಿ ತಾಪಮಾನ 39° ಎರಿಕೆಯಾಗಬಹುದು ಎನ್ನಲಾಗಿದೆ. ಮೇ ಮೂರನೇ ವಾರದ ಬಳಿಕ ತಾಪಮಾನ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಮೌಸಮ್ ವಿಜ್ಞಾನಿ C.S. ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರ ಕರ್ನಾಟಕದಲ್ಲಿ ತಾಪಮಾನ ಹೇಗಿರಲಿದೆ?
ಇನ್ನೂ ಈ ತಾಪಮಾನ ಏರಿಕೆ ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ. ಉತ್ತರ ಕರ್ನಾಟಕ ಭಾಗಗಳಲ್ಲೂ ಸಾಮಾನ್ಯಕ್ಕಿಂದ 2-4° ಸೆಲ್ಸಿಯಸ್ ಹೆಚ್ಚಾಗಬಹುದು ಎನ್ನಲಾಗಿದೆ. ಅಂದರೆ ಈಗಾಗಲೇ ಕಲಬುರಗಿಯಲ್ಲಿ ಬಿಸಿಲಿನ ತಾಪಮಾನ 39.2° ಸೆಲ್ಸಿಯಸ್ ತಲುಪಿದೆ. ಇದು ಸಾಮಾನ್ಯಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ.
ಇನ್ನು ಮೇ ತಿಂಗಳಲ್ಲಿ ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲೂ ತಾಪಮಾನ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಅಂದರೆ ತಾಪಮಾನವು 45°C ತಲುಪುವ ಸಾಧ್ಯತೆ ಇದೆ ಎಂದು IMD ಮುನ್ಸೂಚನೆ ನೀಡಿದೆ.
ತಾಪಮಾನ ಏರಿಕೆಗೆ ಕಾರಣ ಏನು..?
ವೇಗವಾಗಿ ಸಾಗುತ್ತಿರುವ ನಗರೀಕರಣವು ತಾಪಮಾನವನ್ನು ವೃದ್ಧಿಸುತ್ತಿದೆ ಎಂದರೆ ತಪ್ಪಾಗಲ್ಲ. ಅಭಿವೃದ್ಧಿ ಎನ್ನುವುದು ಒಂದು ರೀತಿಯಲ್ಲಿ ಒಳಿತು ಮಾಡುತ್ತಿದ್ದರೆ, ಪ್ರಾಕೃತಿಕವಾಗಿ ಕೆಟ್ಟ ಪರಿಣಾಮ ಬೀರುತ್ತಿದೆ. ಅಂದರೆ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಕಟ್ಟಡ ನಿರ್ಮಾಣ, ರಸ್ತೆಗಳ ವಿಸ್ತರಣೆ, ಮರಗಳ ಕಡಿತ ಮುಂತಾದ ಕಾರಣಗಳಿಂದ ತಾಪಮಾನ ಏರುತ್ತಿದೆ. ಕಲ್ಲು, ಕಾಂಕ್ರೀಟ್ ಹಾಗೂ ತಾಪಮಾನ ಶೋಷಿಸುವ ವಸ್ತುಗಳ ಹೆಚ್ಚಳದಿಂದ ನಗರ ಪ್ರದೇಶಗಳಲ್ಲಿ ಬೇಸಿಗೆ ಹೆಚ್ಚು ಭಾಸವಾಗುತ್ತದೆ. ಅಲ್ಲದೇ ಹವಾಮಾನ ಸ್ಥಿರವಾಗಿರುವ ಕಾರಣದಿಂದ ಯಾವುದೇ ಮೋಡಗಳ ರಚನೆ ಆಗುವ ಸಾಧ್ಯತೆ ಕಡಿಮೆಯಾಗಿದ್ದು, ಇದರ ಪರಿಣಾಮವಾಗಿ ಮಳೆ ಬೀಳುವುದಿಲ್ಲ.
ಕರಾವಳಿ ಪ್ರದೇಶದಲ್ಲಿ ಹೇಗಿರಲಿದೆ ಬಿಸಿಲಿನ ಪ್ರಭಾವ:
ಸಾಮಾನ್ಯವಾಗಿ ಕರಾವಳಿ ಪ್ರದೇಶಗಳು ಅತಿಹೆಚ್ಚು ಬಿಸಿಲಿನ ಬೇಗೆ ಕೊಡುವ ಪ್ರದೇಶವಾಗಿವೆ. ಹೀಗಿದ್ದರೂ ಈ ಪ್ರದೇಶಗಳಲ್ಲಿ ಮಳೆಯ ಪ್ರಮಾಣವೂ ಹೆಚ್ಚಾಗಿಯೇ ಇರುತ್ತದೆ. ಅಂದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಣ್ಣಮಟ್ಟದ ಮಳೆಯ ಸಾಧ್ಯತೆ ಇದೆ. ಈ ಕರಾವಳಿ ಪ್ರದೇಶಗಳು ಬಿಸಿಲು ಮತ್ತು ತೇವಾಂಶದ ಪ್ರಮಾಣ ಹೆಚ್ಚು ಇರುತ್ತದೆ. ಸದ್ಯಕ್ಕೆ ತಾಪಮಾನದ ಬಗ್ಗೆ IMD ಯಾವುದೇ ಎಚ್ಚರಿಕೆಯನ್ನು ನೀಡಿಲ್ಲ.
ಸದ್ಯದ ಮಟ್ಟಿಗೆ ಬಿಸಿಲಿನ ಹಾವಳಿ ಹೆಚ್ಚಾಗಿದೆ. ಆದರೆ ಹೀಟ್‌ವೇವ್ ಸಂಭವಿಸುವ ಯಾವುದೇ ಲಕ್ಷಣವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅದೂ ಕೂಡ ಸಂಭವಿಸುವುದರಲ್ಲಿ ಅನುಮಾನವಿಲ್ಲ ಎಂದು, ಭಾರತೀಯ ಹವಾಮಾನ ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ.


Click it and Unblock the Notifications