ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ವಿಪರೀತ ಚಳಿಯಿದೆ (Cold). ಅದರಲ್ಲೂ ಬೆಂಗಳೂರು, ಕರಾವಳಿ ಪ್ರದೇಶಗಳಲ್ಲಿ ಮೈಕೊರೆಯುವ ಚಳಿಗೆ ಜನ ನಡುಗುವಂತಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಚಳಿಯ ತೀವ್ರತೆ ಮುಂದುವರೆಯುವ ಸಾಧ್ಯತೆ ಇದ್ದು, ಅಲ್ಲಲ್ಲಿ ಒಣ ಹವಾಮಾನ ಕಂಡುಬರುತ್ತಿದೆ. ಬೆಂಗಳೂರಿನಲ್ಲೂ ಇಂದು ಒಣ ಹವಾಮಾನ ಇರಲಿದ್ದು, ಬೆಳಗ್ಗಿನ ವಾತಾವರಣದಲ್ಲಿ ಸಂಪೂರ್ಣವಾಗಿ ಮಂಜು ಆವರಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮುಂದಿನ ನಾಲ್ಕು ದಿನ ತೀವ್ರ ಚಳಿ!
ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಒಣ ಹವಾಮಾನ ಮತ್ತು ಚಳಿ ತೀವ್ರತೆ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಬೆಂಗಳೂರು ಸೇರಿ, ಹಲವಾರು ಜಿಲ್ಲೆಗಳಲ್ಲಿ ಈ ಚಳಿ ವಾತಾವರಣಕ್ಕೆ ಸಿಲುಕಲಿದೆ. ಹಗಲಿನಲ್ಲಿ ಒಣ ಹವೆ ಇದ್ದರೂ, ಬೆಳಿಗ್ಗೆ, ರಾತ್ರಿ ವೇಳಯಂತೂ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಲ್ಲಿ ಹೇಗಿದೆ ಚಳಿ?
ಮಂಗಳೂರು, ಉಡುಪಿ ಭಾಗದಲ್ಲಿ ಹವಾಮಾನದಲ್ಲಿ ಏರಿಳಿತ ಇದ್ದರೂ, ಹಗಲಿಡೀ ಉಷ್ಣಾಂಶ ಇರಲಿದ್ದು ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ದಾಟುವ ನಿರೀಕ್ಷೆಯಿದೆ. ಇನ್ನು ಸಮುದ್ರದ ಗಾಳಿ ಮಂದಗತಿಯಲ್ಲಿ ಸಾಗುವ ನಿರೀಕ್ಷೆಯಿದೆ, ಅದೇ ರೀತಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಡಟ್ಟ ಮಂಜು ಆವರಿಸಲಿದೆ. ಆದ್ದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಚಲಾಯಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ವಿಜಯಪುರ, ಬಾಗಲಕೋಟೆ, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ಧಾರವಾಡ, ಗದಗ, ಹಾವೇರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣ ಹವಾಮಾನವಿದ್ದು, ಈ ವಾರವೂ ಇದೇ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ.
ಬೆಂಗಳೂರಿನ ಹವಾಮಾನ:
ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಇರಲಿದ್ದು, ಗಾಳಿ ಬೀಸುವ ಸಾಧ್ಯತೆ ಹೆಚ್ಚು. ಇನ್ನು ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆ ಇದ್ದು, ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹತ್ತಿರದಲ್ಲಿದೆ.
ಆರೋಗ್ಯದಲ್ಲಿ ಏರುಪೇರು!
ಕಳೆದ ಕೆಲವು ದಿನಗಳಿಂದ ಹವಾಮಾನದಲ್ಲಿ ಭಾರೀ ಬದಲಾವಣೆಯಗಳು ಆಗುತ್ತಿದೆ. ಒಮ್ಮೆ ಚಳಿ, ಒಮ್ಮೆ ಮಳೆ, ಒಮ್ಮೆ ಬಿಸಿಲು ಎಂಬಂತಾಗಿದೆ. ಆದ್ದರಿಂದ ಜನರ ದೇಹದ ಮೇಲು ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಮಕ್ಕಳು, ಹಿರಿಯರು, ಮಹಿಳೆಯರು ಹವಾಮಾನ ಬದಲಾವಣೆಯಿಂದ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. ಮುಂದಿನ ವಾರವಿಡೀ ಇದೇ ರೀತಿಯ ಪರಿಸ್ಥಿತಿ ಮುಂದುವರೆಯುವ ನಿರೀಕ್ಷೆಯಿದ್ದು, ಆರೋಗ್ಯದ ಬಗ್ಗೆ ಜನರು ಎಚ್ಚರವಹಿಸಬೇಕು. ಈ ಸಂದರ್ಭದಲ್ಲಿ ಶೀತ, ಕೆಮ್ಮು ಹೆಚ್ಚಾಗುವ ಸಾಧ್ಯತೆ ಹೆಚ್ಚು.
ಆದ್ದರಿಂದ ಬೆಚ್ಚಗಿನ ಆಹಾರ ಸೇವಿಸಿ. ಹೊರಗಡೆ ಹೋಗುವಾಗ ಜ್ಯಾಕೆಟ್, ಸ್ವೆಟರ್ ಧರಿಸೋದನ್ನು ತಪ್ಪಿಸಬೇಡಿ. ಆದಷ್ಟು ಮಕ್ಕಳು ಮತ್ತು ವೃದ್ಧರಿಗೆ ಜಾಗೃತೆವಹಿಸಿ. ಹವಾಮಾನ ಬದಲಾವಣೆಯಿಂದಾಗಿ ಸಾಮಾನ್ಯವಾಗಿ ದೇಹದ ಆರೋಗ್ಯದಲ್ಲೂ ಬದಲಾವಣೆಯಾಗುತ್ತದೆ. ಆದ್ದರಿಂದ ಎಚ್ಚರಿಕಯಿಂದ ಇರುವುದು ಬಹಳ ಮುಖ್ಯ.


Click it and Unblock the Notifications