ಕರ್ನಾಟಕ ರಾಜ್ಯದಲ್ಲಿ ಮಾರ್ಚ್ ಆರಂಭದಿಂದಲೂ ಬಿಸಿಲಿನ ತಾಪಮಾನ ಹೆಚ್ಚಾಗುತ್ತಲೇ ಇದೆ. ಅತ್ತ ಹವಾಮಾನ ಇಲಾಖೆ ಕೂಡಾ, ಮಾರ್ಚ್ ಮಧ್ಯದಲ್ಲಿ ತಾಪಮಾನದಲ್ಲಿ ಏರಿಕೆ ಕಾಣಬಹುದು ಎಂದು ಎಚ್ಚರಿಕೆ ನೀಡಿದೆ. ಆದರೂ ಕೆಲವು ಜಿಲ್ಲೆಗಳಲ್ಲಿ ಬೆಳಗ್ಗಿನ ಜಾವ ಚಳಿ ಅನುಭವವಾಗುತ್ತಿದ್ದು, ಮಧ್ಯಾಹ್ನ ಆಗುತ್ತಿದ್ದಂತೆ ಸೆಖೆ ಆರಂಭವಾಗುತ್ತದೆ. ಹಾಗಿದ್ರೆ ಇಂದು (ಮಾರ್ಚ್ 12) ಕರ್ನಾಟಕದ ಹವಾಮಾನ ಪರಿಸ್ಥಿತಿ ಹೇಗಿದೆ ಅನ್ನೋ ಮಾಹಿತಿ ಇಲ್ಲಿದೆ ಓದಿ.

ಕರ್ನಾಟಕದಲ್ಲಿ ಇಂದು ಹವಾಮಾನ ಸಾಮಾನ್ಯಕ್ಕಿಂತಕೂ ಹೆಚ್ಚು ಬಿಸಿಯಾಗಿರಲಿದೆ ಎಂದು ಹೇಳಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD), ರಾಜ್ಯದಲ್ಲಿ ಮಾರ್ಚ್ ತಿಂಗಳು ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಮುಂದುವರೆಯಲಿದ್ದು, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಸೂಚನೆ ನೀಡಿದೆ. ಅಂದರೆ ಹಲವು ಜಿಲ್ಲೆಗಳಲ್ಲಿ ಹೀಟ್‌ವೇವ್ ಸಂಭವಿಸಲಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಹೇಗಿರಲಿದೆ ಹವಾಮಾನ?
ಬೆಂಗಳೂರು ನಗರದಲ್ಲಿ ಇಂದು ಗರಿಷ್ಠ ತಾಪಮಾನ ಸುಮಾರು 32-34 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುವ ನಿರೀಕ್ಷೆಯಿದೆ. ಇನ್ನು ಕನಿಷ್ಠ ತಾಪಮಾನ 18 ರಿಂದ 20 ಡಿಗ್ರಿ ಸೆಲ್ಸಿಯಸ್ ಸುತ್ತಮುತ್ತಲೂ ದಾಖಲಾಗಲಿದೆ. ಇನ್ನು ಬೆಂಗಳೂರಿನಲ್ಲಿ ಮಧ್ಯಾಹ್ನದ ವೇಳೆ ಬಿಸಿಲು ತೀವ್ರವಾಗಲಿದ್ದು, ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಕರಾವಳಿ ಜಿಲ್ಲೆಗಳ ಹವಾಮಾನ
ಇನ್ನು ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಂಪಾದ ಅನುಭವವಾದರೂ, ಸೆಖೆ ಮಾತ್ರ ಜೋರಾಗಿಯೇ ಇರಲಿದೆ. ಅಂದರೆ ತಾಪಮಾನ 32 ರಿಂದ 35 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಲಿದೆ ಎಂದು ಹೇಳಲಾಗಿದೆ.
ಅದೇ ರೀತಿ ಉತ್ತರ ಒಳನಾಡು ಜಿಲ್ಲೆಗಳಾದ ಬಳ್ಳಾರಿ, ರಾಯಚೂರು, ಬೀದರ್, ಕಲಬುರಗಿ, ಬಿಜಾಪುರ ಜಿಲ್ಲೆಗಳಲ್ಲೂ ತಾಪಮಾನ ಏರಿಕೆಯಲ್ಲಿರಲಿದ್ದು, ಗರಿಷ್ಠ ತಾಪಮಾನ 35-37 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ವರದಿಯಾಗಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲೂ ತಾಪಮಾನ 32 ರಿಂದ 35 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆ ಕಾಣಲಿದೆ ಎಂದು ಹೇಳಲಾಗಿದೆ.
ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಬಿಸಿಲಿನ ತಾಪಮಾನ ಹೆಚ್ಚಾಗಲಿದ್ದು, ಗರಿಷ್ಠ ತಾಪಮಾನ 30 ರಿಂದ 33 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ನಿರೀಕ್ಷಿಲಾಗಿದೆ. ಆದರೂ ಕೆಲವೊಮ್ಮೆ ಮೋಡ ಕವಿದ ವಾತಾವರಣ ಇರಲಿದೆ. ಆದರೆ ರಾಜ್ಯದಲ್ಲಿ ಮುಂದಿನ 2-3 ದಿನಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಅಲ್ಲದೇ ಮಾರ್ಚ್ ಅಂತ್ಯದಲ್ಲಿ ತಾಪಮಾನ ಭಾರೀ ಏರಿಕೆ ಕಾಣಬಹುದು ಎಂದು ಮುನ್ಸೂಚನೆ ನೀಡಲಾಗಿದೆ.
ಜನರಿಗೆ ಸಲಹೆ:
ತಾಪಮಾನ ದಿನೇ ದಿನೇ ಏರಿಕೆ ಕಾಣುತ್ತಿದ್ದು, ಜನರಿಗೂ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಹೊರಗಿನ ಕೆಲಸಗಳನ್ನು ಆದಷ್ಟು ಬೆಳಗ್ಗಿನ ಜಾವ ಅಥವಾ ಸಂಜೆಯ ಸಮಯದಲ್ಲಿ ಮಾಡಿ ಮುಗಿಸಿಕೊಳ್ಳಿ. ಅನಗತ್ಯವಾಗಿ ಹೊರಹೋಗುವುದನ್ನು ತಪ್ಪಿಸಿ. ಆದಷ್ಟು, ತಂಪಾದ ಪಾನೀಯ, ಆಹಾರ ಸೇವಿಸಿ ಎಂದು ಹೇಳಲಾಗಿದೆ.


Click it and Unblock the Notifications