ದಕ್ಷಿಣ ಭಾರತ ಮತ್ತು ಯುರೋಪ್ ನಡುವಿನ ಸರಕು ಸಾಗಣೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಹತ್ವದ ಹೆಜ್ಜೆ ಇಟ್ಟಿದೆ. ಅಂದರೆ ಜರ್ಮನಿಯ ಫ್ರಾಂಕ್‌ಫರ್ಟ್ ಏರ್ಪೋರ್ಟ್ ಜೊತೆ ತಿಳುವಳಿಕಾ ಪತ್ರಕ್ಕೆ ಸಹಿ ಮಾಡಿದ್ದು ದೊಡ್ಡ ಖುಷಿಸುದ್ದಿಯಾಗಿದೆ.. 'ಏರ್ ಕಾರ್ಗೋ ಇಂಡಿಯಾ' ಸಮಾವೇಶದ ವೇಳೆ ಈ ಒಪ್ಪಂದ ಜರುಗಿದ್ದು, ಇದು ಎರಡು ಪ್ರಮುಖ ಕಾರ್ಗೋ ಕೇಂದ್ರಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಪ್ರಯತ್ನವಾಗಿದೆ. ಈ ಒಪ್ಪಂದದಿಂದ ಆಗುವ ಅನುಕೂಲಗಳೇನು ಎಂದು ಇಲ್ಲಿ ತಿಳಿಯಿರಿ.

ಇನ್ನು ಈ ಒಪ್ಪಂದದ ಮೂಲಕ ಎರಡೂ ವಿಮಾನ ನಿಲ್ದಾಣಗಳು ಜಂಟಿಯಾಗಿ ವಾಣಿಜ್ಯ ಮಾರ್ಗಗಳ ವಿಶ್ಲೇಷಣೆ ನಡೆಸಲಿವೆ. ಡಿಜಿಟಲ್ ಕಾರಿಡಾರ್ ಅಭಿವೃದ್ಧಿ, ಔಷಧ ಉತ್ಪನ್ನಗಳ ಸುರಕ್ಷಿತ ಸಾಗಣೆ, ಹಾಗೂ ಜ್ಞಾನ ವಿನಿಮಯಕ್ಕೆ ಆದ್ಯತೆ ನೀಡಲಾಗುತ್ತದೆ. ಸರಕು ಸಾಗಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು, ವಿಮಾನ ನಿಲ್ದಾಣದಲ್ಲಿ ಸರಕು ಉಳಿಯುವ ಸಮಯ ಕಡಿಮೆ ಮಾಡುವುದು ಮತ್ತು ಗ್ರಾಹಕರಿಗೆ ವೇಗವಾದ ಸೇವೆ ಒದಗಿಸುವುದು ಇದರ ಮುಖ್ಯ ಗುರಿಯಾಗಿದೆ.
ಬೆಂಗಳೂರು ವಿಮಾನ ನಿಲ್ದಾಣವು ಇತ್ತೀಚಿನ ವರ್ಷಗಳಲ್ಲಿ ಕಾರ್ಗೋ ಮೂಲಸೌಕರ್ಯ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದೆ. ಈ ಸಹಭಾಗಿತ್ವದಿಂದ ಆ ಹೂಡಿಕೆಗಳಿಗೆ ಇನ್ನಷ್ಟು ಫಲ ಸಿಗಲಿದೆ. ವಿಶೇಷವಾಗಿ ಹೆಚ್ಚು ಮೌಲ್ಯದ ಮತ್ತು ತುರ್ತು ಅವಶ್ಯಕತೆಯಿರುವ ಸರಕುಗಳ ಸಾಗಣೆಗೆ ಇದು ನೆರವಾಗಲಿದೆ. ವಿಮಾನಯಾನ ಸಂಸ್ಥೆಗಳು, ಸರಕು ರವಾನೆದಾರರು ಮತ್ತು ವ್ಯಾಪಾರ ಸಂಸ್ಥೆಗಳಿಗೆ ಇದು ದೀರ್ಘಾವಧಿಯಲ್ಲಿ ಲಾಭಕರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣವು ಯುರೋಪ್ನ ಪ್ರಮುಖ ಕಾರ್ಗೋ ಹಬ್‌ಗಳಲ್ಲಿ ಒಂದಾಗಿದೆ. ಈ ಮೈತ್ರಿಯಿಂದ ಭಾರತ ಮತ್ತು ಯುರೋಪ್ ನಡುವೆ ವ್ಯಾಪಾರಕ್ಕೆ ಹೊಸ ವೇಗ ಸಿಗಲಿದೆ. ಇತ್ತೀಚೆಗೆ ಭಾರತ ಮತ್ತು ಯುರೋಪ್ ಒಕ್ಕೂಟದ ನಡುವೆ ನಡೆದ ಮುಕ್ತ ವ್ಯಾಪಾರ ಒಪ್ಪಂದದ ಹಿನ್ನೆಲೆ ಈ ಸಹಕಾರ ಇನ್ನಷ್ಟು ಮಹತ್ವ ಪಡೆದುಕೊಂಡಿದೆ.
ಭಾರತ ಮತ್ತು ಯುರೋಪ್ ನಡುವಿನ ವಾಣಿಜ್ಯ ವಹಿವಾಟು ಹೆಚ್ಚುತ್ತಿರುವ ಸಂದರ್ಭದಲ್ಲಿ, ವೇಗವಾದ ಮತ್ತು ನಂಬಿಕಾರ್ಹ ಸರಕು ಸಾಗಣೆ ವ್ಯವಸ್ಥೆ ಅತ್ಯಂತ ಅಗತ್ಯವಾಗಿದೆ. ಬೆಂಗಳೂರು ಮತ್ತು ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣಗಳ ಈ ಸಹಭಾಗಿತ್ವವು ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ವೈಮಾನಿಕ ಸರಕು ಸಾಗಣೆಗೆ ಹೊಸ ದಿಕ್ಕನ್ನು ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಮುಂದಿನ ದಿನಗಳಲ್ಲಿ ಔಷಧಿ, ಎಲೆಕ್ಟ್ರಾನಿಕ್ಸ್ ಹಾಗೂ ಹೆಚ್ಚಿನ ಮೌಲ್ಯದ ಸರಕುಗಳ ಸುರಕ್ಷಿತ ಮತ್ತು ವೇಗವಾದ ಸಾಗಣೆ ಸುಗಮವಾಗಲಿದ್ದು, ರಫ್ತುದಾರರು ಹಾಗೂ ಆಮದುದಾರರಿಗೆ ಸಮಯ ಮತ್ತು ವೆಚ್ಚದ ಉಳಿತಾಯ ಸಾಧ್ಯವಾಗಲಿದೆ. ಜೊತೆಗೆ, ಭಾರತ-ಯುರೋಪ್ ವ್ಯಾಪಾರ ವಿಸ್ತರಣೆಗೆ ಇದು ಬಲವಾದ ಮೂಲಸೌಕರ್ಯ ಸಹಕಾರವನ್ನು ಒದಗಿಸಲಿದೆ.


Click it and Unblock the Notifications