ಒಂದು ಕಾಲದಲ್ಲಿ ದಿನವಿಡೀ ಬೋಧನೆ ಮಾಡಿ, 40 ರೂಪಾಯಿಗೋಸ್ಕರ ಕಷ್ಟ ಪಡುತ್ತಿದ್ದ ವ್ಯಕ್ತಿ ಇಂದು ಕೋಟಿ ಒಡೆಯ. ಈ ಕೋಟಿಯ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ. ಕಲಿತ ವಿದ್ಯೆ ಕೈ ಹಿಡಿಯಿತಿ, ಪಟ್ಟ ಶ್ರಮ ಸಾಧನೆಯ ದಾರಿ ತೋರಿತು. ವಿದ್ಯೆ ಹಾಗೂ ಶ್ರಮದೊಂದಿಗೆ ಕಲ್ಲು ಮುಳ್ಳಿನ ಹಾದಿಯಲ್ಲಿ ಸಾಗಿದ ವ್ಯಕ್ತಿ ಇಂದು ಎಲ್ಲರೂ ಮೆಚ್ಚುವಂತ ಸಾಧನೆ ಮಾಡಿದ್ದಾರೆ. ಅವರು ಬೇರೆ ಯಾರೂ ಅಲ್ಲ ಭಾರತದ ಜನಪ್ರಿಯ ಶಿಕ್ಷಕ ಹಾಗೂ ಟ್ಯೂಟರ್ ಆಗಿ ಗುರುತಿಸಿಕೊಂಡ ಫೈಜಲ್ ಖಾನ್..ಇಂದು ಅವರು ಖ್ಯಾತಿಯಾಗಿರೋದು ಖಾನ್ ಸರ್ ಎಂದು. ಖಾನ್ ಸರ್ ಸಾಧನೆಯ ಹಾದಿ, ಶ್ರಮ ಹಾಗೂ ಇಂದಿನ ನಿವ್ವಳ ಮೌಲ್ಯದ ಬಗ್ಗೆ ತಿಳಿಯಲೇಬೇಕು.

ಬಾಲ್ಯದಲ್ಲೇ ಎದುರಾದ ಆರ್ಥಿಕ ಅಡಚಣೆ:
ಉತ್ತರ ಪ್ರದೇಶದ ಡಿಯೋರಿಯಾ ಎಂಬ ಸಣ್ಣ ಪಟ್ಟಣದಲ್ಲಿ 1993ರಲ್ಲಿ ಫೈಜಲ್ ಖಾನ್ ಜನಿಸಿದರು. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಅವರು, ಗುತ್ತಿಗೆದಾರನ ಮಗನಾಗಿದ್ದು, ತಾಯಿ ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದರು. ಬಾಲ್ಯದಲ್ಲೇ ಆರ್ಥಿಕ ಅಡಚಣೆಗಳನ್ನು ಎದುರಿಸಿದರೂ, ಫೈಜಲ್ ತಮ್ಮ ಬದುಕಿನಲ್ಲಿ ಮಾತ್ರವಲ್ಲ, ಇತರರ ಬದುಕಲ್ಲಿಯೂ ಬದಲಾವಣೆ ತರಬೇಕೆಂಬ ಕನಸು ಬೆಳೆಸಿಕೊಂಡರು.
ಬಾಲ್ಯದ ಕನಸುಗಳು ಮತ್ತು ಹಿನ್ನಡೆಗಳು:
ಚಿಕ್ಕ ವಯಸ್ಸಿನಿಂದಲೇ ಫೈಜಲ್ ಸೇನೆಯಲ್ಲಿ ಸೇರಿ ದೇಶಸೇವೆ ಮಾಡುವ ನಿರ್ಧಾರ ಮಾಡಿಕೊಂಡಿದ್ದರು. ಸೈನಿಕ್ ಶಾಲೆ, ಪಾಲಿಟೆಕ್ನಿಕ್ ಕಾಲೇಜು ಮತ್ತು ಎನ್‌ಡಿಎ ಪ್ರವೇಶ ಪರೀಕ್ಷೆಗಳಲ್ಲಿ ಹಲವಾರು ಬಾರಿ ಪ್ರಯತ್ನಿಸಿದರೂ, ಪ್ರತಿ ಬಾರಿ ನಿರಾಶೆ ಅನುಭವಿಸಿದರು. ಆದರೂ ಅವರು ಹತಾಶರಾಗದೆ, ತಮ್ಮ ಗುರಿಯನ್ನು ಬದಲಿಸಿಕೊಂಡು ಬೋಧನೆಯತ್ತ ಮುಖ ಮಾಡಿದರು.
ಬೋಧನೆಯ ಪ್ರಾರಂಭ:
ಅವರು ಮೊದಲಿಗೆ ಒಬ್ಬ ವಿದ್ಯಾರ್ಥಿಗೆ ಟ್ಯೂಷನ್ ನೀಡುವುದರಿಂದ ಆರಂಭಿಸಿದರು. ಆ ವಿದ್ಯಾರ್ಥಿ ಉತ್ತಮ ಅಂಕಗಳನ್ನು ಗಳಿಸಿದಾಗ, ಫೈಜಲ್ ಅವರ ಬೋಧನಾ ಶೈಲಿಯ ಖ್ಯಾತಿ ಹರಡಿತು. ಕ್ರಮೇಣ ಹೆಚ್ಚಿನ ವಿದ್ಯಾರ್ಥಿಗಳು ಅವರ ಬಳಿ ಕಲಿಯಲು ಪ್ರಾರಂಭಿಸಿದರು. ಆದರೆ ಆರ್ಥಿಕ ಕಷ್ಟ ಇನ್ನೂ ಇತ್ತು. ಒಂದು ದಿನ ಪೂರ್ಣ ಬೋಧನೆ ಮಾಡಿದರೂ, ಕೇವಲ 40 ರೂ. ಗಳಿಸಿದ್ದರಿಂದ ಬಸ್‌ಭಾಡೆ ಕಟ್ಟಲು ಆಗದೆ, ದೂರ ನಡೆದುಕೊಂಡು ಮನೆಗೆ ಹೋಗಬೇಕಾಯಿತು.
ಸಂಸ್ಥೆಯ ಕನಸು:
ಆ ರಾತ್ರಿ ಗಂಗಾ ನದಿಯ ತೀರದಲ್ಲಿ ಕುಳಿತು, ಫೈಜಲ್ ತಮ್ಮದೇ ಶಿಕ್ಷಣ ಸಂಸ್ಥೆ ಪ್ರಾರಂಭಿಸುವ ನಿರ್ಧಾರ ಕೈಗೊಂಡರು. ಸ್ನೇಹಿತರ ಸಹಾಯದಿಂದ ಸಣ್ಣ ತರಗತಿ ಆರಂಭಿಸಿದರು. ಕೆಲವೇ ದಿನಗಳಲ್ಲಿ ವಿರೋಧಿಗಳು ಅವರ ಕೇಂದ್ರದ ಮೇಲೆ ಬಾಂಬ್ ದಾಳಿ ನಡೆಸಿದರು. ಆದರೆ ಅವರು ಹಿಂದೆ ಸರಿಯಲಿಲ್ಲ. ವಿದ್ಯಾರ್ಥಿಗಳು ಬೆಳಿಗ್ಗೆ ಬಂದು ಕೇಂದ್ರವನ್ನು ಸ್ವಚ್ಛಗೊಳಿಸಿ ಪುನರ್‌ಾರಂಭಕ್ಕೆ ಕೈಜೋಡಿಸಿದರು.
ಹಣಕ್ಕಿಂತ ಧ್ಯೇಯಕ್ಕೆ ಆದ್ಯತೆ:
ಯಶಸ್ಸಿನೊಂದಿಗೆ ದೊಡ್ಡ ಅವಕಾಶಗಳೂ ಬಂದವು. ಒಂದು ಕಾರ್ಪೊರೇಟ್ ಸಂಸ್ಥೆ ಅವರಿಗೆ 107 ಕೋಟಿ ರೂ. ನೀಡಲು ಸಿದ್ಧವಾಗಿದ್ದರೂ, ಫೈಜಲ್ ಆ ಆಫರ್ ತಿರಸ್ಕರಿಸಿದರು. ತಮ್ಮ ವಿದ್ಯಾರ್ಥಿಗಳಿಗೆ ಸೇವೆ ಮಾಡುವುದೇ ತಮಗೆ ಮುಖ್ಯ ಎಂದು ಅವರು ನಂಬಿದರು.
ಇಂದಿನ ಖಾನ್ ಸರ್:
ಇಂದು ಖಾನ್ ಸರ್ ಭಾರತದ ಜನಪ್ರಿಯ ಶಿಕ್ಷಕರಲ್ಲಿ ಒಬ್ಬರು. ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ, ಪ್ರಚಲಿತ ವಿಷಯಗಳ ವಿವರಣೆ ಮತ್ತು ಪ್ರೇರಣಾದಾಯಕ ವಿಷಯಗಳಿಗಾಗಿ ಅವರ ಯೂಟ್ಯೂಬ್ ಚಾನಲ್ ಲಕ್ಷಾಂತರ ಜನರನ್ನು ತಲುಪುತ್ತಿದೆ. ಅವರ ಆಸ್ತಿ ಕುರಿತು ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ಕೆಲವು ವರದಿಗಳು 5 ಕೋಟಿ ರೂ.ಗಳಿಂದ 18 ಕೋಟಿ ರೂ.ಗಳವರೆಗೆ ಅಂದಾಜು ಮಾಡುತ್ತವೆ.
ಶೈಕ್ಷಣಿಕ ಹಿನ್ನಲೆ:
ಖಾನ್ ಸರ್ ಪ್ರಾಥಮಿಕ ಶಿಕ್ಷಣವನ್ನು ಡಿಯೋರಿಯಾದ ಭಟ್ಪರ್ ರಾಣಿಯ ಪರ್ಮಾರ್ ಮಿಷನ್ ಶಾಲೆಯಲ್ಲಿ ಪಡೆದರು. ನಂತರ ಅಲಹಾಬಾದ್ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಮತ್ತು ಎಂ.ಎಸ್ಸಿ ಪದವಿ ಪೂರ್ಣಗೊಳಿಸಿದರು. ಜೊತೆಗೆ ಭೂಗೋಳಶಾಸ್ತ್ರದಲ್ಲಿ ಎಂ.ಎ ಪದವಿಯನ್ನೂ ಪಡೆದಿದ್ದಾರೆ. ಈ ಗಟ್ಟಿಯಾದ ಶೈಕ್ಷಣಿಕ ನೆಲೆ, ಅವರನ್ನು ಯಶಸ್ವಿ ಶಿಕ್ಷಕರನ್ನಾಗಿ ರೂಪಿಸಿದೆ.
ಖಾನ್ ಸರ್ ಅವರ ಜೀವನಕಥೆ, ದುಡಿಮೆ, ನಿಷ್ಠೆ ಮತ್ತು ಗುರಿಯತ್ತ ಕಟ್ಟಿ ಹಿಡಿದ ಬದ್ಧತೆ ಏನು ಸಾಧಿಸಬಹುದು ಎಂಬುದಕ್ಕೆ ಜೀವಂತ ಉದಾಹರಣೆ. ಒಂದೆಡೆ ಆರ್ಥಿಕ ಸಂಕಷ್ಟ, ಮತ್ತೊಂದೆಡೆ ನಿರಂತರ ಹಿನ್ನಡೆ.. ಇವೆಲ್ಲವನ್ನು ಮೀರಿ ಅವರು ಶಿಕ್ಷಣದ ಮೂಲಕ ಕೋಟ್ಯಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕು ನೀಡಿದ್ದಾರೆ. ಹಣಕ್ಕಿಂತ ಮಿಷನ್‌ಗೆ ಆದ್ಯತೆ ನೀಡುವ ಖಾನ್ ಸರ್, ಇಂದು ಕೇವಲ ಶಿಕ್ಷಕರಲ್ಲ, ಲಕ್ಷಾಂತರ ಜನರಿಗೆ ಪ್ರೇರಣೆಯ ಮೂಲ. ಅವರ ಕಥೆ ಹೇಳುವುದು ಒಂದೇ ವಿಷಯ..ನಿಜವಾದ ಶ್ರಮ, ಬದ್ಧತೆ ಮತ್ತು ಧೈರ್ಯ ಇದ್ದರೆ, ಯಾವುದೇ ಕನಸು ದೊಡ್ಡದಾಗುವುದಿಲ್ಲ.


Click it and Unblock the Notifications