ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟ ಕಿಚ್ಚ ಸುದೀಪ್ ಅವರ ಹೆಸರು ಕೇಳಿದ ತಕ್ಷಣ ನೆನಪಾಗುವುದು ಅವರ ಅದ್ಬುತ ನಟನಾ ಶೈಲಿ ಮತ್ತು ಅವರ ವಿಭಿನ್ನವಾದ ನಿರೂಪಣೆ ಶೈಲಿ. ಕನ್ನಡ 'ಬಿಗ್ ಬಾಸ್' ಶೋವನ್ನು ಬಹಳ ಅಚ್ಚುಕಟ್ಟಾಗಿ ಕಳೆದ 11 ಸೀಸನ್‌ಗಳಿಂದ ಕಿಚ್ಚ ನಡೆಸಿಕೊಂಡುಬರುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ 'ಬಿಗ್ ಬಾಸ್' ಶೋಗೆ ಮೆರುಗು ಸಿಕ್ಕಿದ್ದೇ ನಟ 'ಕಿಚ್ಚ' ಸುದೀಪ್ ಅವರಿಂದ ಎಂದರೆ, ತಪ್ಪಾಗಲಾರದು. ಬಿಗ್ ಬಾಸ್ ಎಂದರೆ ಸುದೀಪ್, ಸುದೀಪ್ ಎಂದರೆ ಬಿಗ್ ಬಾಸ್ ಎಂಬಷ್ಟರ ಮಟ್ಟಿಗೆ ಶೋ ಜನಮೆಚ್ಚುಗೆಯನ್ನು ಗಳಿಸಿತ್ತು.
ಬಿಗ್ ಬಾಸ್ ಹಾಗೂ ನಟ ಸುದೀಪ್ ಅವರ ಅಭಿಮಾನಿಗಳಿಗೆ ಅಘಾತಕಾರಿ ವಿಚಾರವೆಂದರೆ 'ಬಿಗ್ ಬಾಸ್' ಕನ್ನಡ ಶೋನ ಮುಂದಿನ ಸೀಸನ್‌ಗಳನ್ನು ನಟ 'ಕಿಚ್ಚ' ಸುದೀಪ್ ಅವರು ನಡೆಸಿಕೊಡುವುದಿಲ್ಲ. ಸ್ವತಃ ಈ ವಿಚಾರವನ್ನು ಸುದೀಪ್ ಅವರು ತಿಳಿಸಿದ್ದಾರೆ. ಬಿಗ್ ಬಾಸ್ ನ ೧೧ ನೇ ಸೀಸನ್ ಯಶಸ್ವಿಯಾಗಿ ಸಾಗುತ್ತಿರುವಾಗಲೇ ಇದು ನನ್ನ ಬಿಗ್ ಬಾಸ್ ಕೊನೆಯ ಸೀಸನ್ ಎಂದು ಟ್ವೀಟ್ ಮಾಡಿದ್ದು , ಕಿಚ್ಚನ ಈ ನಿರ್ಧಾರ ಬಹಳಷ್ಟು ಮಂದಿಗೆ ಶಾಕ್ ನೀಡಿದೆ.

ಕಿಚ್ಚ ಸುದೀಪ್ ಅವರಿಂದ, ಬಿಗ್ ಬಾಸ್ ಕನ್ನಡವು ಪ್ರತಿಯೊಂದು ಸೀಸನ್‌ನಲ್ಲಿ ಟಿಆರ್‌ಪಿಯಲ್ಲಿ ಶ್ರೇಷ್ಟ ಸ್ಥಾನ ಪಡೆದುಕೊಂಡಿದೆ. ಅವರ ನಿರೂಪಣೆಯ ಮೂಲಕ, ಅವರು ಅಭಿಮಾನಿಗಳಿಗೆ ನಿರಂತರ ಮನರಂಜನೆ ನೀಡುತ್ತಿದ್ದಾರೆ. ಬಿಗ್ ಬಾಸ್‌ನಲ್ಲಿ ನಡೆಯುವ ಘಟನೆಗಳು, ಸಂಘರ್ಷಗಳು ಮತ್ತು ಶನಿವಾರ ಬರುವ ಕಿಚ್ಚನ ಪಂಚಾಯ್ತಿಈ ಶೋವನ್ನು ಇನ್ನಷ್ಟು ರೋಮಾಂಚಕವಾಗಿಸುತ್ತವೆ. ತಮ್ಮ ಶ್ರೇಷ್ಟ ನಿರೂಪಣೆಯ ಮೂಲಕ, ಅವರು ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದಾರೆ. ಕಿಚ್ಚನ ನಿರೂಪಣೆಯ ಶೈಲಿ, ಖಡಕ್ ಮಾತು ಮತ್ತು ವಾಕ್ ಚಾತುರ್ಯವನ್ನು ಒಳಗೊಂಡಿದ್ದು, ಇದು ಶೋಗೆ ಜೀವ ತುಂಬುತ್ತದೆ.
ಬಿಗ್ ಬಾಸ್ ನಿರೂಪನೆಗೆ ಪಡೆಯುವ ಸಂಭಾವನೆ ಎಷ್ಟು?
2015 ರಲ್ಲಿ ಸುದೀಪ್ ಅವರು ಕಲರ್ಸ್ ಕನ್ನಡದ ಜತೆ ಮೊದಲ ಬಾರಿಗೆ ಬಿಗ್ ಬಾಸ್ ನಿರೂಪಣೆಯ ಅಗ್ರಿಮೆಂಟ್ ಗೆ ಸಹಿ ಹಾಕಿದ್ದರು. ಮೊದಲು ಇದು ಐದು ವರ್ಷದ ಒಪ್ಪಂದ ಆಗಿತ್ತು. ವರದಿಗಳ ಪ್ರಕಾರ, ಆ ಸಮಯದಲ್ಲಿ 20 ಕೋಟಿ ರೂಪಾಯಿಯ ಒಪ್ಪಂದಕ್ಕೆ ಸುದೀಪ್ ಸಹಿ ಹಾಕಿದ್ದರು. ಅಂದರೆ, ಪ್ರತಿ ಸೀಸನ್‌ಗೆ ಅವರು ನಾಲ್ಕು ಕೋಟಿ ರೂಪಾಯಿ ಪಡೆದಂತೆ ಆಗುತ್ತದೆ. ಅಲ್ಲಿಂದ ಮುಂದೆ ಬಂದ ಸೀಸನ್‌ಗೆ ಸುದೀಪ್ ಆರ ವ್ಯಾಲ್ಯೂ ಬೆಳೆದಂತೆ ಅವರ ಸಂಭಾವನೆಯೂ ಏರಿಕೆಯಾಗುತ್ತಾ ಬಂತು. ಪ್ರಸ್ತುತ ನಡೆಯುತ್ತಿರುವ 11ನೇ ಸೀಸನ್ ನಿರೂಪಣೆ ಮಾಡಲು ಕಿಚ್ಚ ಸುದೀಪ್ 8 ಕೋಟಿ ರೂ. ಸಂಭಾವನೆ ಪಡೆದಿರುವುದಾಗಿ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ವಾಹಿನಿ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ನಿವ್ವಳ ಮೌಲ್ಯ:
ಕನ್ನಡದ ಚಿತ್ರರಂಗದ ಸ್ಟೈಲಿಶ್ ನಟ ಕಿಚ್ಚ ಸುದೀಪ್ ಅವರು ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 20 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಮನೆ ಹೊಂದಿರುವ ಸುದೀಪ್ ಇದಲ್ಲದೇ ಗೆಸ್ಟ್ ಹೌಸ್, ಜಮೀನು ಇದ್ದು, ಮುಂಬೈನ ಫಾರ್ಮ್ ಹೌಸ್ ನಲ್ಲಿ ಹೂಡಿಕೆ ಮಾಡಿದ್ದಾರೆ.
ಅವರ ಗ್ಯಾರೇಜ್‌ನಲ್ಲಿ ಲಂಬೋರ್ಘಿನಿ ಅವೆಂಟಡಾರ್, BMW M3, ಹಮ್ಮರ್ H3 ಮತ್ತು ಜೀಪ್ ಕಂಪಾಸ್‌ನಂತಹ ಹೈ-ಎಂಡ್ ಕಾರುಗಳ ಸಂಗ್ರಹವಿದೆ. ಲಂಬೋರ್ಘಿನಿ ಅವೆಂಟಡಾರ್ ಬೆಲೆಯೇ ಸುಮಾರು 3 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಕಾರುಗಳ ಜೊತೆಗೆ, ಕಿಚ್ಚ ಸುದೀಪ್ ಅವರು 1.5 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಗಡಿಯಾರಗಳ ಸಂಗ್ರಹವನ್ನೂ ಹೊಂದಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಎಂಬ ತಮ್ಮ ನಿರ್ಮಾಣ ಕಂಪನಿಯ ಮೂಲಕ ಹಲವಾರು ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಕಿಚ್ಚ ಸುದೀಪ್ ಅವರ ನಿವ್ವಳ ಮೌಲ್ಯ ಸುಮಾರು 125 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.


Click it and Unblock the Notifications