ದೇಶದೆಲ್ಲೆಡೆ ದೀಪಾವಳಿ ಹಬ್ಬ ಮನೆ ಮಾಡಿದೆ. ಈ ಸಂದರ್ಭದಲ್ಲಿ ಪಟಾಕಿ, ಹೂವು, ಹಣ್ಣು, ಸಿಹಿತಿಂಡಿ, ಹಾಲಿಗೆ ಭಾರೀ ಬೇಡಿಕೆ. ಇದೀಗ ಈ ಬಾರಿ ಕರ್ನಾಟಕದಲ್ಲಿ ಕೆಎಂಎಫ್ ಉತ್ಪನ್ನಗಳಿಗೆ ಭಾರೀ ಬೇಡಿಕೆ ಬಂದಿದೆ. ಕರ್ನಾಟಕ ಹಾಲು ಮಹಾಮಂಡಳಿ (KMF) ಈ ವರ್ಷ ದಸರಾ ಮತ್ತು ದೀಪಾವಳಿ ಹಬ್ಬಗಳಲ್ಲಿ (Dasara-Deepavali) ತನ್ನ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಅಂದರೆ 1100 ಟನ್ ಸಿಹಿತಿಂಡಿಗಳನ್ನು ಮಾರಾಟ ಮಾಡುವ ಮೂಲಕ 46 ಕೋಟಿ ರೂಪಾಯಿ ವಹಿವಾಟು ನಡೆಸಿದೆ ಎಂದು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ. ಇದು ಕೆಎಂಎಫ್ ಇತಿಹಾಸದಲ್ಲೇ ಹೊಸ ದಾಖಲೆ ಎಂದು ಹೇಳಲಾಗಿದೆ.

ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ಪ್ರತಿ ವರ್ಷ ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಸಿಹಿತಿಂಡಿಗಳಿಗೆ ಭಾರಿ ಬೇಡಿಕೆ ಇರುತ್ತದೆ. ಅದರಲ್ಲೂ ನಂದಿನಿ ಬ್ರ್ಯಾಂಡ್ ಅಡಿಯಲ್ಲಿ 40ಕ್ಕೂ ಹೆಚ್ಚು ಬಗೆಯ ಸಿಹಿತಿಂಡಿಗಳನ್ನು ಮಾರಾಟ ಮಾಡಲು ಕೆಎಂಎಫ್ ಮೊದಲೇ ಪ್ಲಾನ್ ಮಾಡಿತ್ತು. 2023ರಲ್ಲೂ ದೀಪಾವಳಿ ಸಂದರ್ಭದಲ್ಲಿ 724 ಟನ್ ಸಿಹಿತಿಂಡಿಗಳು ಮಾರಾಟವಾಗಿದ್ದು, 33.48 ಕೋಟಿ ರೂಪಾಯಿ ವಹಿವಾಟು ನಡೆದಿತ್ತು.
ಹೊಸ ಗುರಿಯೊಂದಿಗೆ ಕೆಎಂಎಫ್!
"ನಾವು ಈ ಬಾರಿ 1000 ಟನ್ ಸಿಹಿತಿಂಡಿಗಳನ್ನು ಮಾರಾಟ ಮಾಡುವ ಗುರಿ ಹೊಂದಿದ್ದೆವು ಮತ್ತು ಅದಕ್ಕಾಗಿ ಮೊದಲೇ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ಈ ಬಾರಿ ಗುರಿ ಮೀರಿ ಅಂದರೆ 1100 ಟನ್ ಸಿಹಿತಿಂಡಿಗಳನ್ನು ಮಾರಾಟ ಆಗಿದ್ದು, 46 ಕೋಟಿ ರೂಪಾಯಿ ವಹಿವಾಟು ನಡೆದಿದೆ. ಇದು ಕಳೆದ ವರ್ಷಕ್ಕಿಂತ ಶೇ 38ರಷ್ಟು ಹೆಚ್ಚು ಎನ್ನಲಾಗಿದೆ. ಕೆಎಂಎಫ್ ಇತಿಹಾಸದಲ್ಲಿ ಇದೊಂದು ದಾಖಲೆ" ಎಂದು ವೆಂಕಟೇಶ್ ಹೇಳಿದರು.
ನಂದಿನಿ ಉತ್ಪನ್ನಕ್ಕೆ ಭಾರೀ ಬೇಡಿಕೆ:
ಈ ಯಶಸ್ಸು ನಂದಿನಿ ಉತ್ಪನ್ನಗಳ ಶುದ್ಧತೆ, ಗುಣಮಟ್ಟ ಮತ್ತು ಗ್ರಾಹಕರ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಸಚಿವರು ಮಾಧ್ಯಮದೊಂದಿಗೆ ಬಣ್ಣಿಸಿದರು. ಇನ್ನು ಕರ್ನಾಟಕದ ಹಾಲು ಉತ್ಪಾದಕರ ಸಮುದಾಯ ಮತ್ತು ಸಹಕಾರಿ ಒಕ್ಕೂಟದ ಬದ್ಧತೆ, ಶ್ರಮ ಮತ್ತು ಏಕತೆ ಹೇಗಿದೆ ಎಂಬುದನ್ನು ಇಲ್ಲಿ ವಿವರಿಸಿದರು. ಹಾಲು ಪೇಡ, ಧಾರವಾಡ ಪೇಡ, ಮೈಸೂರು ಪಾಕ್, ಬಾದಾಮ್ ಬರ್ಫಿ, ಕೊಕನಟ್ ಬರ್ಫಿ, ರಸಗುಲ್ಲಾ, ಕುಂದಾ ಸೇರಿದಂತೆ ಹಲವು ಸಿಹಿತಿಂಡಿಗಳು ನಂದಿನಿ ಮೂಲಕ ಜನಪ್ರಿಯವಾಗಿವೆ.
ಕಳೆದ ಐದು ದಶಕಗಳಿಂದ ಕೆಎಂಎಫ್ ಡೈರಿ ಸಹಕಾರಿ ವಲಯದಲ್ಲಿ ಅಗ್ರಸ್ಥಾನದಲ್ಲಿದೆ. "ಪ್ರತಿದಿನ ಸರಾಸರಿ ಒಂದು ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತದೆ. ಇದರಲ್ಲಿ 65 ಲಕ್ಷ ಲೀಟರ್ ಹಾಲು ಮತ್ತು ಮೊಸರು ಸೇರಿದಂತೆ ಹಾಲಿನ ಉತ್ಪನ್ನಗಳನ್ನು ರಾಜ್ಯದ ಒಳಗೆ ಮತ್ತು ಹೊರಗೆಯೂ ಪೂರೈಕೆ ಮಾಡಲಾಗುತ್ತದೆ" ಎಂದು ವೆಂಕಟೇಶ್ ಮಾಹಿತಿ ನೀಡಿದರು.
ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಕೆಎಂಎಫ್ ತುಪ್ಪ, ಬೆಣ್ಣೆ, ಪನೀರ್, ಸಿಹಿತಿಂಡಿಗಳು, ಹಾಲಿನ ಪುಡಿ, ಮಿಲ್ಕ್ ಶೇಕ್‌ಗಳು ಸೇರಿದಂತೆ 175 ರೀತಿಯ ಹಾಲಿನ ಉತ್ಪನ್ನಗಳನ್ನು ಆಂಧ್ರಪ್ರದೇಶ, ಗೋವಾ, ಕೇರಳ, ದೆಹಲಿ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಅಸ್ಸಾಂ ಮತ್ತು ಇತರ ರಾಜ್ಯಗಳಿಗೆ ಪೂರೈಸಲಾಗುತ್ತದೆ. ಈ ಮೂಲಕ ನಂದಿನಿ ಬ್ರ್ಯಾಂಡ್ ಗ್ರಾಹಕರ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿ ಬೆಳೆದಿದೆ ಎಂದು ಸಚಿವರು ಹೇಳಿದರು.


Click it and Unblock the Notifications