ಬೆಂಗಳೂರು, ನವೆಂಬರ್ 14: ಕರ್ನಾಟಕ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಯಾವುದೇ ಆಸ್ತಿ ವಹಿವಾಟು ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿದೆ. ಇದರಿಂದ ಹಲವು ಸಮಸ್ಯೆಗಳು ಸಹ ಉಂಟಾಗಿವೆ. ಇದನ್ನು ಬಗೆಹರಿಸಲು ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ. ಈಗ ಬಿಬಿಎಂಪಿ ಬೆಂಗಳೂರು ಒನ್ ಕೇಂದ್ರದಲ್ಲಿಯೂ ಸಹ ಇ-ಖಾತಾ ಪಡೆಯಲು ಅನುಕೂಲ ಮಾಡಿಕೊಟ್ಟಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂತಿಮ ಇ-ಖಾತಾವನ್ನು ಪಡೆಯಲು ಬೆಂಗಳೂರು ಒನ್ ಕೇಂದ್ರದ ಮೂಲಕ ಸಹಾಯವನ್ನು ಪಡೆಯಬಹುದಾಗಿದೆ ಎಂದು ಬಿಬಿಎಂಪಿ ಹೇಳಿದೆ. ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ-ಖಾತಾ ಲಭ್ಯವಿದ್ದು, ಪ್ರತಿ ಆಸ್ತಿಗೆ ಬೆಂಗಳೂರು ಒನ್ ಕೇಂದ್ರದಲ್ಲಿ 45 ರೂ. ಶುಲ್ಕ ಮತ್ತು ಪ್ರತಿ ದಾಖಲೆಯ ಪುಟ ಸ್ಕ್ಯಾನ್ ಮಾಡಲು 5 ರೂ. ಪಾವತಿಸಬೇಕು. ಬಿಬಿಎಂಪಿಗೆ 125 ರೂ. (ಅಂತಿಮ ಇ-ಖಾತಾ ಮುದ್ರಣಕ್ಕೆ ಸಿದ್ಧವಾದಾಗ ಮಾತ್ರ) ಪಾವತಿಸಬೇಕು ಎಂದು ಬಿಬಿಎಂಪಿ ಹೇಳಿದೆ.

ಯಾವ ದಾಖಲೆಗಳು ಬೇಕು?: ಕೆಳಗಿನ ದಾಖಲೆಗಳ ಪ್ರತಿಯೊಂದಿಗೆ ಬೆಂಗಳೂರು ಒನ್ ಕೇಂದ್ರವನ್ನು ಸಂಪರ್ಕಿಸಬೇಕು (ಅವುಗಳಲ್ಲಿ ಕೆಲವನ್ನು ತೋರಿಸಲು ಮತ್ತು ಸ್ಕ್ಯಾನ್ ಮಾಡಲು ಮಾತ್ರ ಅಲ್ಲಿ ಸಲ್ಲಿಸುವ/ ನೀಡುವ ಅಗತ್ಯವಿಲ್ಲ)
* ನಿಮ್ಮ ಆಸ್ತಿ ತೆರಿಗೆ ರಶೀದಿ
* ನಿಮ್ಮ ಮಾರಾಟ ಅಥವಾ ನೋಂದಾಯಿತ ಪತ್ರ
* ಎಲ್ಲಾ ಮಾಲೀಕರ ಆಧಾರ್
* ಬೆಸ್ಕಾಂ ಬಿಲ್
* ಜಲಮಂಡಳಿ ಬಿಲ್ (ನೀವು ಕಾವೇರಿ ಸಂಪರ್ಕವನ್ನು ಹೊಂದಿದ್ದರೆ)
* ಬಿಡಿಎ ಅಥವಾ ಯೋಜನಾ ಪ್ರಾಧಿಕಾರದಿಂದ ಲೇಔಟ್ ಅಥವಾ ಸೈಟ್ ಅನುಮೋದನೆ (ಇದರ ದಾಖಲೆ ಹೊಂದಿದ್ದರೆ)
* ಬಿಬಿಎಂಪಿಯಿಂದ ಕಟ್ಟಡ ಯೋಜನೆ ಅನುಮೋದನೆ (ಇದರ ದಾಖಲೆ ಹೊಂದಿದ್ದರೆ)
* ಡಿಸಿ ಪರಿವರ್ತನೆ (ಇದರ ದಾಖಲೆ ಹೊಂದಿದ್ದರೆ)
* ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಥವಾ ಕರ್ನಾಟಕ ಹೌಸಿಂಗ್ ಬೋರ್ಡ್ (KHB) ಅಥವಾ ಯಾವುದೇ ಸರ್ಕಾರಿ ಪ್ರಾಧಿಕಾರದಿಂದ ಹಂಚಿಕೆ ಪತ್ರ (ಇದು ನಿಮ್ಮ ಪ್ರಕರಣಕ್ಕೆ ಅನ್ವಯಿಸಿದರೆ ಮತ್ತು ನೀವು ಇದರ ದಾಖಲೆ ಹೊಂದಿದ್ದರೆ)
ನೀವು ಮೇಲಿನ ದಾಖಲೆಗಳನ್ನು ಬೆಂಗಳೂರು ಒನ್ ಕೇಂದ್ರಕ್ಕೆ ಸಲ್ಲಿಸುವ ಅಗತ್ಯವಿಲ್ಲ. ಆದರೆ ಆನ್‌ಲೈನ್ ವಿವರಗಳನ್ನು ಸಲ್ಲಿಸಲು ಅವರಿಗೆ ತೋರಿಸಿ ಮತ್ತು ನಂತರ ಅವುಗಳನ್ನು ಹಿಂದಕ್ಕೆ ಪಡೆದುಕೊಳ್ಳಿ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಇ-ಖಾತಾ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಇ ಖಾತಾ ಪ್ರಕ್ರಿಯೆಯನ್ನು ಸುಧಾರಿಸುವ ಸಲುವಾಗಿ ಬಿಬಿಎಂಪಿಯೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿದ್ದು, ಕೆಲವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಎಲ್ಲಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ ಖಾತಾ ಸೌಲಭ್ಯ ಲಭ್ಯವಾಗುವಂತೆ ಮಾಡಲಾಗಿದೆ. ಇ-ಖಾತಾ ಅಗತ್ಯವಿರುವವರಿಗೆ ಸಹಾಯ ಮಾಡಲು ಬಿಬಿಎಂಪಿಯ 11 ಸಮರ್ಪಿತ ಸಿಬ್ಬಂದಿಗಳನ್ನು ತಕ್ಷಣದ ವಹಿವಾಟು/ ನೋಂದಣಿಗಾಗಿ ಪ್ರತ್ಯೇಕವಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಕರಡು ಇ-ಖಾತಾದಲ್ಲಿನ ದೋಷಗಳಿಗಾಗಿ ತಿದ್ದುಪಡಿಗಳನ್ನು ಅನುಮತಿಸಲಾಗಿದೆ. ಮೊದಲ ಬಾರಿಗೆ ಖಾತಾ ಪಡೆಯುತ್ತಿರುವ ಅಪಾರ್ಟ್‌ಮೆಂಟ್‌ಗಳು, ಪಾರ್ಕ್‌ಗಳು, ಸಿಎ ಸೈಟ್‌ಗಳು, ಹೊಸ ಲೇಔಟ್‌ಗಳಲ್ಲಿನ ರಸ್ತೆಗಳು ಇತ್ಯಾದಿಗಳಿಗೆ ಪರಿಹಾರಗಳನ್ನು ಒದಗಿಸಬೇಕು ಎಂದು ಸೂಚಿಸಲಾಗಿದೆ. ಇನ್ನೂ ಕೆಲವು ನಿರ್ದಿಷ್ಟ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಬೇಕಿದೆ ಎಂದು ಸಚಿವರು ಪೋಸ್ಟ್ ಹಾಕಿದ್ದಾರೆ.


Click it and Unblock the Notifications