ಪುಣೆ: ಕೊರೊನಾವೈರಸ್ ಹಾವಳಿಯಿಂದ ದೇಶದ ಶ್ರಮಿಕ ವರ್ಗ ಬಹುತೇಕ ಮೂರು ತಿಂಗಳು ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿದೆ. ಈ ವೇಳೆ ಅವರಿಗೆ ಸಾಕಷ್ಟು ಆದಾಯ ನಷ್ಟವುಂಟಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನೂ ಕೂಡ ಕೊರೊನಾವೈರಸ್ ಅಟ್ಟಹಾಸ ಮುಗಿಯುತ್ತಿಲ್ಲವಾದ್ದರಿಂದ ಶ್ರಮಿಕ ವರ್ಗದವರು ಚಿಂತಾಕ್ರಾಂತರಾಗಿದ್ದಾರೆ.
ದೇಶದಲ್ಲಿ ಅತಿ ಹೆಚ್ಚು ಕೊರೊನಾವೈರಸ್ ಪ್ರಕರಣಗಳನ್ನು ದಾಖಲಿಸಿರುವ ಮಹಾರಾಷ್ಟ್ರದಲ್ಲಿ ಪರಿಸ್ಥಿತಿಯಂತೂ ಇನ್ನೂ ಭೀಕರವಾಗಿದೆ. ಅಲ್ಲಿ ನಿನ್ನೆಯವರೆಗೂ ಬಹುತೇಕ ಲಾಕ್‌ಡೌನ್ ಜಾರಿಯಲ್ಲಿತ್ತು. ಅನ್ಲಾಕ್ 2.0 ದಲ್ಲಿ ಮಾತ್ರ ಕ್ಷೌರಿಕರಿಗೆ ಕೆಲಸ ಮಾಡಲು ಮಹಾರಾಷ್ಟ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಸತತ ಮೂರು ತಿಂಗಳ ಬಳಿಕ ಕ್ಷೌರ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಮಹಾರಾಷ್ಟ್ರದಲ್ಲಿ ಕ್ಷೌರಿಕನೊಬ್ಬ ಚಿನ್ನದ ಕತ್ತರಿಯಲ್ಲಿ ಕ್ಷೌರ ಮಾಡಿ ಗಮನ ಸೆಳೆದಿದ್ದಾನೆ. ಮುಂದೆ ಓದಿ....
52 ವರ್ಷದ ರಾಂಬಾಯ್ ಸಂಕ್ಪಾಲ್
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸಲೂನ್ ಹೊಂದಿರುವ 52 ವರ್ಷದ ರಾಂಬಾಯ್ ಸಂಕ್ಪಾಲ್ ಅವರು ಅನ್ಲಾಕ್ 2.0 ದಲ್ಲಿ ಸಲೂನ್ ಅಂಗಡಿಗಳನ್ನು ತೆರೆಯಲು ಮಹಾರಾಷ್ಟ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದಕ್ಕೆ ವಿಶೇಷ ರೀತಿಯಲ್ಲಿ ಗಮನ ಸೆಳೆದಿದ್ದಾರೆ. ಲಾಕ್‌ಡೌನ್ ಸಡಿಲಿಕೆಯಾದ ನಂತರ ಇದೇ ಮೊದಲ ಬಾರಿಗೆ ಬರುತ್ತಿರುವ ಗ್ರಾಹಕರಿಗೆ ತಮ್ಮ ಬಳಿ ಇರುವ ಚಿನ್ನದ ಕತ್ತರಿಯನ್ನು ಬಳಸುತ್ತಿದ್ದಾರೆ.
100 ಗ್ರಾಂ ಚಿನ್ನದ ಕತ್ತರಿ
ರಾಂಬಾಯ್ ಸಂಕ್ಪಾಲ್ ಅವರು ಹಲವಾರು ವರ್ಷಗಳಿಂದ ಈ ವೃತ್ತಿಯಲ್ಲಿದ್ದಾರೆ. ವೃತ್ತಿಯಿಂದ ಬಂದ ಹಣದಿಂದ ಸುಮಾರು 100 ಗ್ರಾಂ ಚಿನ್ನದಲ್ಲಿ ಕತ್ತರಿಯನ್ನು ಮಾಡಿಸಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಹಾಗೂ ಗಣ್ಯರಿಗೆ ಮಾತ್ರ ಈ ಕತ್ತರಿಯನ್ನು ಸಂಕ್ಪಾಲ್ ಬಳಸುತ್ತಾರೆ.
ತಮ್ಮ ಜೀವನವನ್ನೇ ಕಳೆದುಕೊಂಡಿದ್ದಾರೆ
ಕೆಲವು ಕ್ಷೌರಿಕರು ಲಾಕ್‌ಡೌನ್ ಬಿಕ್ಕಟ್ಟನ್ನು ನಿವಾರಿಸಲಾಗದ ಕಾರಣ ತಮ್ಮ ಜೀವನವನ್ನೇ ಕಳೆದುಕೊಂಡಿರುವ ಉದಾಹರಣೆಗಳಿವೆ. ಹೀಗಾಗಿ ಮೂರು ತಿಂಗಳಿನ ನಂತರ ಸಲೂನ್ ತೆರೆಯಲು ಸರ್ಕಾರ ಅವಕಾಶ ನೀಡಿರುವುದಕ್ಕೆ ಸಂತೋಷವಾಗಿರುವುದರಿಂದ ನಾನು ಲಾಕ್‌ಡೌನ್ ನಂತರ ಇದೇ ಮೊದಲು ಬಾರಿಗೆ ಅಂಗಡಿಗೆ ಬರುತ್ತಿರುವ ಗ್ರಾಹಕರಿಗೆ ಚಿನ್ನದ ಕತ್ತರಿ ಬಳಸುತ್ತಿದ್ದೇನೆ ಎಂದು ರಾಂಬಾಯ್ ಸಂಕ್ಪಾಲ್ ಹೇಳುತ್ತಾರೆ.
ಬಂಗಾರದ ಕತ್ತರಿಗಾಗಿ ಹೆಚ್ಚಿನ ಬೇಡಿಕೆಯಿದೆ
ನವಜಾತ ಶಿಶುಗಳ 'ಮುಂಡನ್' ಸಮಾರಂಭದಲ್ಲಿ ಬಂಗಾರದ ಕತ್ತರಿಗಾಗಿ ಹೆಚ್ಚಿನ ಬೇಡಿಕೆಯಿದೆ. ಲಾಕ್‌ಡೌನ್ ಸಡಿಲಿಕೆ ಮಾಡಿ ಈಗ ಸರ್ಕಾರ ನಮಗೆ ಬದುಕಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ತುಂಬಾ ಸಂತೋಷವಾಗಿದೆ. ಸರ್ಕಾರ ಹೇಳಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳುತ್ತಿದ್ದೇನೆ ಎಂದು ಸಂಕ್ಪಾಲ್ ಹೇಳುತ್ತಾರೆ. ಒಟ್ಟಿನಲ್ಲಿ ಲಾಕ್‌ಡೌನ್ ನಿಂದ ಒಂದೇಡೆ ಸಂಕಷ್ಟವಾದರೆ, ಚಿನ್ನದ ಕತ್ತರಿಯಲ್ಲಿ ಕ್ಷೌರ ಮಾಡಿ ರಾಂಬಾರ್ ಗಮನ ಸೆಳೆದಿದ್ದಾರೆ.


Click it and Unblock the Notifications