ಬೆಂಗಳೂರು: ಸರ್ಕಾರ ಮತ್ತು ಸಾರಿಗೆ ನೌಕರರ (Karnataka Govt vs Transport Workers) ಜಟಾಪಟಿ ಇನ್ನೂ ನಿಂತಿಲ್ಲ. 2025 ರಲ್ಲಿ ವೇತನ ಸೇರಿ ಹಲವು ಬೇಡಿಕೆಗಳಿಂದಾಗಿ ಉಂಟಾದ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಆಕ್ರೋಶ ಇನ್ನೂ ಕಮ್ಮಿಯಾಗಿಲ್ಲ. ಸಾರಿಗೆ ಸಚಿವರು, ಸಿಎಂ ಜೊತೆಗೆ ಸಾರಿಗೆ ನೌಕರರು ಹಲವು ಬಾರಿ ಸಂಧಾನ ಸಭೆ ನಡೆಸಿದರೂ, ಇದೀಗ ಮತ್ತೆ ಸಾರಿಗೆ ನೌಕರರು "ಬೆಂಗಳೂರು ಚಲೋ" (Bengaluru Chalo) ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ. ವಿವಿಧ ಬೇಡಿಕೆಗಳಿಗೆ ಆಗ್ರಗಹಿಸಿ ಸಾರಿಗೆ ನೌಕರರು ನಾಳೆ (ಫೆ.19) ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ನಿಧನದ ಹಿನ್ನೆಲೆ ಕಳೆದ ಬಾರಿ ನಿರ್ಧರಿಸಲಾಗಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿತ್ತು. ಈ ಹಿನ್ನೆಲೆ ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೆಂಗಳೂರು ಚಲೋಗೆ ಕರೆ ನೀಡಿದೆ.

ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ಸಾವಿರಾರು ನೌಕರರು ಫೆಬ್ರವರಿ 19 ರಂದು ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಬೆಂಗಳೂರು ಚಲೋ ಮೂಲಕ ನಡೆಯಲಿರುವ ಈ ಮುಷ್ಕರ, ರಾಜ್ಯಾದ್ಯಂತ ಬಸ್ ಸೇವೆಗಳಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಎಲ್ಲಿ ನಡೆಯಲಿದೆ ಪ್ರತಿಭಟನೆ?
ನಾಳೆ ಅಂದರೆ ಫೆಬ್ರವರಿ 19, 2026 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಲಿದ್ದಾರೆ. ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಈ ಮುಷ್ಕರಕ್ಕೆ ಕರೆ ನೀಡಿದ್ದು, ಈ ಹಿನ್ನೆಲೆ ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರು ಪ್ರತಿಭಟನೆಗೆ ಬೆಂಬಲ ನೀಡುತ್ತಿದ್ದಾರೆ.
ನೌಕರರ ಬೇಡಿಕೆಗಳೇನು?
- 2020, ಜನವರಿ 1 ರಿಂದ ಜಾರಿಗೆ ಬಂದಿರುವ ಶೇ.15% ರಷ್ಟು ವೇತನ ಹೆಚ್ಚಳದ ಅಂದರೆ 38 ತಿಂಗಳ ಹಿಂಬಾಕಿ ಪಾವತಿಗಾಗಿ ಆಗ್ರಹಿಸಲಾಗಿದೆ.
- ಅಲ್ಲದೇ 2024 ಜನವರಿ 1 ರಿಂದ ಜಾರಿಗೆ ಬರಬೇಕಿದ್ದ ವೇತನ ಪರಿಷ್ಕರಣೆ ಹಾಗೂ ಹೆಚ್ಚಳಕ್ಕಾಗಿ ಬೇಡಿಕೆ ಇಡಲಾಗಿದೆ. ಆದರೆ ನೌಕರರ ಈ ಬೇಡಿಕೆಗೆ ಸರ್ಕಾರ ಅಸ್ತು ಎನ್ನಲು ಸಿದ್ಧರಿಲ್ಲ. 2024 ರ ಬದಲಿಗೆ 2026ರ ಜನವರಿ 1 ಕ್ಕೆ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡುವುದಾಗಿ ಸರ್ಕಾರ ಹೇಳಿದ್ದು, ಅಲ್ಲದೇ 38 ತಿಂಗಳ ಬಾಕಿ ಪಾವತಿ ಬದಲಿಗೆ 18/20 ತಿಂಗಳ ಹಿಂಬಾಕಿ ಹಣ ಕೊಡುತ್ತೇವೆ ಎಂದು ಹೇಳಿದೆ. ಆದ್ರೆ ಇದನ್ನು ಒಪ್ಪದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಪ್ರತಿಭಟನೆಗೆ ಇಳಿದಿದೆ.
ಕೆಎಸ್‌ಆರ್‌ಟಿಸಿ ನೌಕರರಿಗೆ ಖಡಕ್ ಸೂಚನೆ!
ಅತ್ತ ಸಾರಿಗೆ ನೌಕರರು ಪ್ರತಿಭಟನೆ ನಡೆಸಲು ನಿರ್ಧಾರ ಮಾಡುತ್ತಿದ್ದಂತೆ, ಇತ್ತ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ, ಕೆಎಸ್‌ಆರ್‌ಟಿಸಿ ನೌಕರರಿಗೆ ಕರ್ತ್ಯವ್ಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕೆಂಬ ಖಡಕ್ ಸೂಚನೆ ಹೊರಡಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗದೆ, ಎಲ್ಲರೂ ಕರ್ತವ್ಯಕ್ಕೆ ಹಾಜರಾಗಬೇಕೆಂದು ಹೇಳಿದ್ದಾರೆ. ಒಂದು ವೇಳೆ ಕರ್ತವ್ಯಕ್ಕೆ ಬಾರದೆ, ಗೈರಾದಲ್ಲಿ ವೇತನ ಕಡಿತದ ಜೊತೆಗೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.


Click it and Unblock the Notifications