ಬೆಂಗಳೂರು, ಅಕ್ಟೋಬರ್ 24: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸದಾ ಟ್ರಾಫಿಕ್ ಜಾಮ್ ಇರುತ್ತದೆ. ಅದರಲ್ಲೂ ಮಳೆ ಬಂದರೆ ಏರ್‌ಪೋರ್ಟ್ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಈ ಬಗ್ಗೆ ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ (ಕೆಎಸ್‌ಟಿಒಎ) ಕಾಳಜಿ ವ್ಯಕ್ತಪಡಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರವನ್ನು ಬರೆದು, ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದೆ.
ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಸಂಖ್ಯೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರಿಕೆಯಾಗುತ್ತಿದೆ. ಆದ್ದರಿಂದ ನಗರದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಅಂತರಾಷ್ಟ್ರೀಯ ಗುಣಮಟ್ಟ ಹೊಂದಿರುವ ಪ್ರತ್ಯೇಕ ರಸ್ತೆಯ ತುರ್ತು ಅಗತ್ಯವಿದೆ ಎಂದು ಪತ್ರದಲ್ಲಿ ವಿವರಿಸಿದೆ.

ಹೆಣ್ಣೂರು, ಥಣಿಸಂದ್ರ, ಬಾಗಲೂರು, ಬಂಡಿ ಕೊಡಿಗೆಹಳ್ಳಿ, ಮಲ್ಯಾನಹಳ್ಳಿ, ಚಿಕ್ಕನಹಳ್ಳಿ, ಬೇಗೂರು ಮೂಲಕ ಹೊಸ ಪರ್ಯಾಯ ಮಾರ್ಗವನ್ನು ನಿರ್ಮಾಣ ಮಾಡಬೇಕು. ಈ ಮಾರ್ಗ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ವಾಹನಗಳಿಗೆ ಸುಲಭವಾಗಿ ಸಂಚಾರ ನಡೆಸುವಂತೆ ಇರಬೇಕು ಎಂದು ಮನವಿ ಮಾಡಲಾಗಿದೆ.
ಈ ಕುರಿತು ಬೆಂಗಳೂರು ಉತ್ತರ ಕ್ಷೇತ್ರದ ಸಂಸದೆ, ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಗೆ ಪತ್ರವನ್ನು ಬರೆಯಲಾಗಿದೆ. ಪ್ರತಿದಿನ 1,45,00ಕ್ಕೂ ಅಧಿಕ ಪ್ರಯಾಣಿಕರು, 700ಕ್ಕೂ ಅಧಿಕ ವಿಮಾನಗಳು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತವೆ. 2008ಕ್ಕೆ ಹೋಲಿಕೆ ಮಾಡಿದರೆ ಈಗ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಸದ್ಯದ ರಸ್ತೆ ದೇವನಹಳ್ಳಿ, ಹೆಬ್ಬಾಳ ಮೂಲಕ ಸಾಗುತ್ತದೆ. ಆದರೆ ಈ ಮಾರ್ಗದಲ್ಲಿ ವಾಹನಗಳ ದಟ್ಟಣೆ ಹೆಚ್ಚಿದೆ. ಇದರಿಂದಾಗಿ ವಿಮಾನ ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ತಲುಪುವುದು ತಡವಾಗುತ್ತಿದೆ. ಪರ್ಯಾಯ ರಸ್ತೆ ಅಗತ್ಯವಾಗಿದೆ ಎಂದು ಜನರು ಹೇಳಿತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದೆ.
ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಸದ್ಯದ ರಸ್ತೆ ಕೇವಲ ಸಂಪರ್ಕ ರಸ್ತೆಯಲ್ಲ ಅದು ಬೆಂಗಳೂರು ನಗರವನ್ನು ಪ್ರತಿನಿಧಿಸುತ್ತದೆ. ಅಂತರಾಷ್ಟ್ರೀಯ ಕಂಪನಿಗಳು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದ ವಾಣಿಜ್ಯ ವಹಿವಾಟಿಗೆ ನಗರಕ್ಕೆ ಆಗಮಿಸುವ ಉದ್ಯಮಿಗಳು ನಗರದ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.
ಹದಗೆಟ್ಟ, ಕೆಟ್ಟ ರಸ್ತೆಗಳು ಮತ್ತು ಸಂಚಾರ ದಟ್ಟಣೆ ನಗರದ ಹೆಸರನ್ನು ಹಾಳು ಮಾಡುತ್ತಿವೆ. ಇದು ವಾಣಿಜ್ಯ ವಹಿವಾಟು, ಪ್ರವಾಸೋದ್ಯಮ, ಹೂಡಿಕೆಗಳ ಮೇಲೆ ಪರಿಣಾಮವನ್ನು ಬೀರಿದೆ. ಪ್ರತಿದಿನ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವವರು ಸಹ ಸಂಚಾರ ದಟ್ಟಣೆಯಿಂದ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಪ್ರತಿ ಬಾರಿಯೂ ಸರಿಯಾದ ಸಮಯಕ್ಕೆ ವಿಮಾನ ನಿಲ್ದಾಣ ತಲುಪಬೇಕು ಎಂದರೆ ಕನಿಷ್ಠ 2 ಗಂಟೆ ಮೊದಲು ಹೊರಡಬೇಕು. ಹೆಬ್ಬಾಳ ಬಳಿ ಚಿಕ್ಕ ಅಪಘಾತ ನಡೆದರೂ ಸಹ ಪೂರ್ಣ ರಸ್ತೆಯೇ ಬಂದ್ ಆಗುತ್ತದೆ. ಇದರಿಂದಾಗಿ ಸಂಚಾರದಟ್ಟಣೆ ಉಂಟಾಗುತ್ತದೆ ಎಂದು ಸಂಸದರಿಗೆ ಪತ್ರದಲ್ಲಿ ತಿಳಿಸಿದ್ದಾರೆ.


Click it and Unblock the Notifications