ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್, ಅದಾನಿ ಪೋರ್ಟ್ಸ್ ಮತ್ತು ಎಸ್‌ಇಜೆಡ್ ಲಿಮಿಟೆಡ್ ಮತ್ತು ಅದಾನಿ ಎನರ್ಜಿ ಸೊಲ್ಯೂಷನ್ಸ್, ಇತರ ಅದಾನಿ ಸಮೂಹದ ಷೇರುಗಳು ಭಾರೀ ಕುಸಿತವನ್ನು ಕಂಡಿದೆ. ಅದಾನಿ ಗ್ರೂಪ್ ಷೇರುಗಳು ಕುಸಿತ ಕಾಣುತ್ತಿದ್ದಂತೆ ಭಾರತೀಯ ಜೀವ ವಿಮಾ ನಿಗಮಕ್ಕೆ (ಎಲ್‌ಐಸಿ) ಸುಮಾರು 4,000 ಕೋಟಿ ರೂಪಾಯಿಗಳ ನಷ್ಟವನ್ನು ಕಂಡಿದೆ.
ಕಾರ್ಪೊರೇಟ್ ಡೇಟಾಬೇಸ್ ಆಕ್ಸ್ಈಕ್ವಿಟಿ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಜೀವ ವಿಮೆಯನ್ನು ನೀಡುವ ಸಂಸ್ಥೆಯು ಎಸಿಸಿ, ಅಂಬುಜಾ ಸಿಮೆಂಟ್ಸ್, ಅದಾನಿ ಟೋಟಲ್ ಗ್ಯಾಸ್ ಲಿಮಿಟೆಟ್ ಮತ್ತು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಸೇರಿದಂತೆ ಏಳು ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ. ಈ ಸ್ಟಾಕ್‌ಗಳ ಕುಸಿತದಿಂದಾಗಿ ಎಲ್‌ಐಸಿ ಸಂಸ್ಥೆಗೂ ನಷ್ಟವಾಗಿದೆ.

ಈ ಎಲ್‌ಐಸಿಯ ಒಟ್ಟು ಮಾರುಕಟ್ಟೆ ಮೌಲ್ಯವು ಶುಕ್ರವಾರದ ವಹಿವಾಟಿನ ವೇಳೆಗೆ 3,951 ಕೋಟಿ ರೂಪಾಯಿಯಷ್ಟು ಕುಸಿತ ಕಂಡು 44,743.94 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಆಗಸ್ಟ್ 22 ರಂದು ಎಲ್‌ಐಸಿ ಸ್ಟಾಕ್ ಮೌಲ್ಯ 48,694.65 ಕೋಟಿ ರೂಪಾಯಿ ಆಗಿತ್ತು. ಇನ್ನು ಅದಾನಿ ಗ್ರೂಪ್‌ನ ಮಾರುಕಟ್ಟೆ ಮೌಲ್ಯವು 11.47 ಲಕ್ಷ ಕೋಟಿ ರೂಪಾಯಿಯಿಂದ 10.50 ಲಕ್ಷ ಕೋಟಿ ರೂಪಾಯಿಗೆ ಕುಸಿದಿದೆ.
ಈ ಅವಧಿಯಲ್ಲಿ, ಮಾರುಕಟ್ಟೆ ನಿಯಂತ್ರಕ ಸೆಬಿ ಹಿಂಡೆನ್‌ಬರ್ಗ್ ಆರೋಪಗಳ ಕುರಿತು ತನ್ನ ಸಲ್ಲಿಸಿದೆ. ಈ ವಿಷಯದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಆದರೆ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (ಒಸಿಆರ್‌ಪಿ) ಅದಾನಿ ಗ್ರೂಪ್‌ನ ಕುಟುಂಬಸ್ಥರೇ ವಿದೇಶಿ ಹೂಡಿಕೆ ಹೆಸರಿನಲ್ಲಿ ಸಂಸ್ಥೆಯ ಸ್ಟಾಕ್‌ನಲ್ಲಿ ಹೂಡಿಕೆ ಮಾಡಿರುವುದಾಗಿ ವರದಿ ಮಾಡಿದೆ.
ಆಗಸ್ಟ್ 22ರಂದು ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಎಲ್‌ಐಸಿಯ ಹೋಲ್ಡಿಂಗ್ಸ್ ಶೇಕಡ 4.26ರಷ್ಟಿದೆ. ಅದಾನಿ ಪೋರ್ಟ್ಸ್‌ನ ಹೋಲ್ಡಿಂಗ್ಸ್ ಶೇಕಡ 9.12 ರಷ್ಟಿದೆ. ಅದಾನಿ ಎನರ್ಜಿ ಸೊಲ್ಯೂಷನ್ಸ್‌ನಲ್ಲಿ ಎಲ್‌ಐಸಿ ಹೂಡಿಕೆ 584 ಕೋಟಿ ರೂಪಾಯಿ, ಅಂಬುಜಾ ಸಿಮೆಂಟ್ಸ್ ಹೂಡಿಕೆ 395 ಕೋಟಿ ರೂಪಾಯಿ, ಅದಾನಿ ಟೋಟಲ್ ಗ್ಯಾಸ್‌ನಲ್ಲಿ ಎಲ್‌ಐಸಿ ಹೂಡಿಕೆ 264 ಕೋಟಿ ರೂಪಾಯಿ, ಅದಾನಿ ಗ್ರೀನ್ ಎನರ್ಜಿಯಲ್ಲಿ ಎಲ್‌ಐಸಿ ಹೂಡಿಕೆ 194 ಕೋಟಿ ರೂಪಾಯಿ ಆಗಿದೆ.


Click it and Unblock the Notifications