ನವದೆಹಲಿ, ಆಗಸ್ಟ್ 10: ಭಾರತೀಯರು ಬಹಳ ಕಾಲದಿಂದ ನಂಬಿಕೆ ಇಟ್ಟುಕೊಂಡು ಬಂದಿರುವ 'ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಈಗ ಆರೋಗ್ಯ ವಿಮಾ ವಲಯಕ್ಕೆ ಕಾಲಿಡಲಿದೆ. ತನ್ನ ಗ್ರಾಹಕರಿಗೆ ಆರೋಗ್ಯ ವಿಮೆ ರಕ್ಷಣೆ ಒದಗಿಸಿಕೊಡಲು ಖಾಸಗಿ ಕಂಪನಿಯೊಂದನ್ನು ಸ್ವಾಧೀನಪಡಿಸಿಕೊಳ್ಳಲು ಚಿಂತನೆ ನಡೆಸಿದೆ.
ಗ್ರಾಹಕರಿಗೆ ಆರೋಗ್ಯ ವಿಮೆ ರಕ್ಷಣೆ ಒದಗಿಸಲು ಖಾಸಗಿ ಕಂಪನಿಯೊಂದನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ ಎಂದು ಎಲ್‌ಐಸಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಿದ್ಧಾರ್ಥ ಮೊಹಂತಿ ತಿಳಿಸಿದ್ದಾರೆ. 'ಪ್ರತ್ಯೇಕವಾಗಿ ಆರೋಗ್ಯ ವಿಮಾ ವ್ಯವಹಾರ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಖಾಸಗಿ ಕಂಪನಿಯೊಂದರಲ್ಲಿ ಹೆಚ್ಚಿನ ಷೇರುಗಳನ್ನು ಖರೀದಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಮೊಹಂತಿ ಹೇಳಿದ್ದಾರೆ.

ಕಳೆದ ಆರ್ಥಿಕ ವರ್ಷದಂತೆಯೇ ಪ್ರಸಕ್ತ ಆರ್ಥಿಕ ವರ್ಷದಲ್ಲಿಯೂ ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಐ) ನಿಯಮಾವಳಿ ಪ್ರಕಾರ ಒಂದೇ ಕಂಪನಿಗೆ ಜೀವ ವಿಮೆ ಮತ್ತು ಆರೋಗ್ಯ ವಿಮಾ ಸೌಲಭ್ಯ ಕಲ್ಪಿಸುವುದಕ್ಕೆ ಸಂಯೋಜಿತ ಪರವಾನಗಿ ನೀಡಲು ಅವಕಾಶವಿಲ್ಲ. ಹಾಗಾಗಿ, ಕೇಂದ್ರ ಸರ್ಕಾರವು ವಿಮಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಎಲ್‌ಐಸಿಗೆ ಈ ಪರವಾನಗಿ ನೀಡುವ ಸಾದ್ಯತೆ ಇದೆ ಎಂದು ವಿಶ್ಲೇಷಣೆ ಮಾಡಲಾಗಿದೆ.
ಹಿಂದಿನ ಸರ್ಕಾರದಲ್ಲಿಯೇ ಮನವಿ ಸಲ್ಲಿಕೆಯಾಗಿತ್ತು:
ಸಂಸದ ಜಯಂತ್ ಸಿನ್ಹಾ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಯೊಂದು ಹಿಂದಿನ ಸರ್ಕಾರದ ಅವಧಿಯಲ್ಲಿ ಇನ್ಷೂರೆನ್ಸ್ ವಲಯಕ್ಕೆ ಪುಷ್ಟಿ ಕೊಡಲು ಅವಶ್ಯಕ ಇರುವ ಕೆಲ ಸಲಹೆಗಳನ್ನು ನೀಡಿತ್ತು. ಅದರಲ್ಲಿ ಒಂದೇ ಸಂಸ್ಥೆ ಅಡಿಯಲ್ಲಿ ಲೈಫ್, ಜನರಲ್ ಅಥವಾ ಹೆಲ್ತ್ ಇನ್ಷೂರೆನ್ಸ್ ಸೇವೆ ಒದಗಿಸುವ ಸಮಗ್ರ ಲೈಸನ್ಸ್ ನೀಡಬಹುದು ಎಂದು ಹೇಳಿತ್ತು.
ಭಾರತದಲ್ಲಿ 28 ಹೆಲ್ತ್ ಇನ್ಷೂರೆನ್ಸ್ ಕಂಪನಿಗಳಿವೆ. ಈ ಪೈಕಿ ಸ್ಟ್ಯಾಂಡ್ ಅಲೋನ್, ಅಂದರೆ ಪರಿಪೂರ್ಣ ಹೆಲ್ತ್ ಇನ್ಷೂರೆನ್ಸ್ ಕಂಪನಿಗಳ ಸಂಖ್ಯೆ ಕೇವಲ 5 ರಿಂದ 7. ಸ್ಟಾರ್ ಹೆಲ್ತ್ ಇನ್ಷೂರೆನ್ಸ್, ಆದಿತ್ಯ ಬಿರ್ಲಾ ಹೆಲ್ತ್ ಇನ್ಷೂರೆನ್ಸ್, ಕೇರ್ ಹೆಲ್ತ್ ಇನ್ಷೂರೆನ್ಸ್, ಗೆಲಾಕ್ಸಿ ಹೆಲ್ತ್ ಅಂಡ್ ಆಲೀಡ್ ಇನ್ಷೂರೆನ್ಸ್, ನಾರಾಯಣ ಹೆಲ್ತ್ ಇನ್ಷೂರೆನ್ಸ್, ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಷೂರೆನ್ಸ್, ನಿವಾ ಬೂ ಹೆಲ್ತ್ ಇನ್ಷೂರೆನ್ಸ್ ಕಂಪನಿಗಳು ಸ್ಟ್ಯಾಂಡಲೋನ್ ಹೆಲ್ತ್ ಇನ್ಷೂರೆನ್ಸ್ ಸಂಸ್ಥೆಗಳಾಗಿವೆ. ಈ ಪೈಕಿ ಎಲ್ಐಸಿ ಒಂದು ಸಂಸ್ಥೆಯನ್ನು ಖರೀದಿಸಿ ಆ ಮೂಲಕ ಹೆಲ್ತ್ ಇನ್ಷೂರೆನ್ಸ್ ಸೆಗ್ಮೆಂಟ್ಗೆ ಪದಾರ್ಪಣೆ ಮಾಡಬಹುದು ಎನ್ನಲಾಗುತ್ತಿದೆ.


Click it and Unblock the Notifications