ನವದೆಹಲಿ, ಜುಲೈ 24: ಈ ಮಹಿಳೆಯ ಜೀವನ ಕಥೆಯು ದೇಶದ ಲಕ್ಷಾಂತರ ಮಂದಿಗೆ ಸ್ಫೂರ್ತಿ ನೀಡುವ ಯಶೋಗಾಥೆಯಾಗಿ ಗಮನಸೆಳೆಯುತ್ತಿದೆ. ಮೀರಾ ಕುಲಕರ್ಣಿ ಎನ್ನುವ ಈ ಮಹಿಳೆಯು ತಮ್ಮ ಜೀವನದ ಎಲ್ಲ ಸವಾಲುಗಳನ್ನು ಎದುರಿಸುವ ಮೂಲಕ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ವಾಸ್ತವದಲ್ಲಿ ಅವರು ಈ ಹಂತಕ್ಕೆ ಬೆಳೆಯಬೇಕಾದರೆ ಅವರ ಜೀವನದಲ್ಲಿನ ಪಯಣದ ದಾರಿಯೂ ಅಷ್ಟೇ ಕಷ್ಟಕರವಾಗಿತ್ತು.
ಮೀರಾ ಅವರ ಸಂಕಷ್ಟ ಬದುಕು 20ರ ಹರೆಯದಲ್ಲೇ ಆರಂಭವಾಗಿತ್ತು. ಸಾಕಷ್ಟು ಕನಸುಗಳನ್ನು ಹೊತ್ತು ಮದುವೆಯಾಗಿದ್ದ ತಮ್ಮ ಪತಿಯ ಉದ್ಯಮವು ವಿಫಲಗೊಂಡಾಗ ಹಾಗೂ ಪತಿಯು ಮದ್ಯಪಾನದ ಚಟಕ್ಕೆ ಒಳಗಾದ ಪರಿಣಾಮ ಅವರ ಸಂಕಷ್ಟದ ದಿನಗಳು ಆರಂಭವಾಗಿದ್ದವು. ಸಾಕಷ್ಟು ತೊಂದರೆಯನ್ನು ಎದುರಿಸಿದ ಬಳಿಕ ಮೀರಾ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಪತಿಯನ್ನು ತೊರೆದು ಹೆತ್ತವರ ಬಳಿಗೆ ಹೋಗುವ ನಿರ್ಧಾರ ಮಾಡಿದ್ದರು.

ದುರಂತವೆಂದರೆ, ತಮ್ಮ ಪತಿಯಿಂದ ದೂರವಾಗಿದ್ದ ಮೀರಾ ಕೇವಲ 28 ವರ್ಷಕ್ಕೆ ತಮ್ಮ ಹೆತ್ತವರನ್ನು ಕೂಡ ಕಳೆದುಕೊಂಡು ಅನಾಥರಾಗಿದ್ದರು. ಆದರೆ, ಗಂಡ, ಹೆತ್ತವರ ಸಹಾಯವಿಲ್ಲದೆ ಒಂಟಿಯಾಗಿದ್ದರೂ ಮೀರಾ ಮಾತ್ರ ಬದುಕಿನ ಬಗ್ಗೆ ಭರವಸೆಯನ್ನು ಕಳೆದುಕೊಂಡಿರಲಿಲ್ಲ. ಭಯದ ಬದಲಾಗಿ ಜೀವನದಲ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲುವ ದಿಟ್ಟ ಧೈರ್ಯಶಾಲಿ ಮಹಿಳೆಯಾಗಿ ಗುರುತಿಸಿಕೊಂಡರು. ಪ್ರತಿಯೊಂದು ಕಷ್ಟದ ಸನ್ನಿವೇಶಗಳು ಬಂದಾಗಲೂ ಅವರು ಜೀವನವನ್ನು ಮತ್ತಷ್ಟು ಆತ್ಮವಿಶ್ವಾಸದಲ್ಲಿ ಮುನ್ನಡೆಸುವ ಮನೋಬಲವನ್ನು ರೂಪಿಸಿಕೊಂಡಿದ್ದರು.
45 ವರ್ಷ ಆಗುವ ವೇಳೆಗೆ ಮೀರಾ ಅವರ ಮಗಳು ಕೂಡ ಮದುವೆಯಾಗಿ ಉತ್ತಮ ಜೀವನವನ್ನು ರೂಪಿಸಿಕೊಂಡಿದ್ದರು. ಅವರು ಸ್ವಾವಲಂಬಿಯ ಬದುಕು ಮಾಡುವ ನಿರ್ಧಾರಕ್ಕೆ ಬಂದು ಕ್ಯಾಂಡೆಲ್ ಹಾಗೂ ಸಾಬೂನು ತಯಾರಿಸುವುದಕ್ಕೆ ಆರಂಭಿಸಿದರು. ಇದು ಅವರಿಗೆ ಸ್ವಂತ ಉದ್ಯಮ ಆರಂಭಿಸುವ ವಿಶ್ವಾಸದ ಜತೆಗೆ ಅವಕಾಶಗಳನ್ನು ತೆರೆದಿಟ್ಟಿತ್ತು. ಅದರಂತೆ 2000ನೇ ಇಸವಿಯಲ್ಲಿ ಫೋರೆಸ್ಟ್ ಎಸೆನ್ಶಿಯಲ್ಸ್ ಎನ್ನುವ ಕಂಪೆನಿ ಸ್ಥಾಪಿಸಿದರು.
ಕೇವಲ ಎರಡು ಲಕ್ಷ ರೂ. ಬಂಡವಾಳ ಹಾಗೂ ಇಬ್ಬರು ಉದ್ಯೋಗಿಗಳೊಂದಿಗೆ ಆರಂಭಿಸಿದ ಉದ್ಯಮವು ನಿಧಾನಕ್ಕೆ ಫಲ ನೀಡಲಾರಂಭಿಸಿತ್ತು. ಅವರು ಆಯುರ್ವೇದಕ್ಕೆ ಹೆಚ್ಚಿನ ಮನ್ನಣೆ ನೀಡುವ ಮೂಲಕ ತಮ್ಮ ಉತ್ಪನ್ನಗಳನ್ನು ಎಹ್ರಿ ಗರ್ವಾಲ್ ಪ್ರದೇಶದ ಗಿಡಮೂಲಿಕೆಗಳನ್ನು ಬಳಸಿಕೊಂಡು ವಿನೂತನ ನೈಸರ್ಗಿಕವಾದ ಉತ್ಪನ್ನಗಳನ್ನು ಪರಿಚಯಿಸಿದರು. ಅದು ಅವರಿಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದು ಕೊಡುವ ಮೂಲಕ ದೇಶದ 28 ನಗರಗಳಿಗೆ ತಮ್ಮ ಉದ್ಯಮವನ್ನು ವಿಸ್ತರಿಸುವ ಮೂಲಕ ಬಹುಕೋಟಿ ವಹಿವಾಟಿನ ಕಂಪೆನಿಯಾಗಿ ಬೆಳೆದಿದೆ.
2008ರಲ್ಲಿ ಫೋರೆಸ್ಟ್ ಎಸೆನ್ಶಿಯಲ್ಸ್ ಕಂಪೆನಿಯು ಎಸ್ಟೀ ಲೌಡರ್ ಕಂಪೆನೀಸ್ ಜತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿತ್ತು. ಮುಂದೆ ತಾಜ್, ಹಯತ್ ಸೇರಿದಂತೆ ಪ್ರತಿಷ್ಠಿತ ಕಂಪೆನಿಗಳ ಜತೆ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಒಪ್ಪಂದ ಮಾಡಿಕೊಳ್ಳಲಾಯಿತು. 2020ರ ಕೋಟಕ್ ವೆಲ್ತ್ ಹುರಾನ್ ಪ್ರಕಾರ ಮೀರಾ ಅವರ ನಿವ್ವಳ ಆಸ್ತಿಯು 1290 ಕೋಟಿ ರೂ. ಆಗಿದೆ.
ಪ್ರಸ್ತುತ ಫಾರೆಸ್ಟ್ ಎಸೆನ್ಶಿಯಲ್ಸ್ ವಿದೇಶ ಸೇರಿದಂತೆ ಸುಮಾರು 110 ಮಳಿಗೆಗಳನ್ನು ಹೊಂದಿದೆ. ತಾಜ್, ಹಯಾತ್ ಸೇರಿದಂತೆ ದೇಶ ವಿದೇಶಗಳ ಲಕ್ಸುರಿ ಹೋಟೆಲ್‌ಗಳಲ್ಲಿ ಅವರ ಉತ್ಪನ್ನಗಳು ಲಭ್ಯವಿದೆ. ಅಷ್ಟೇಅಲ್ಲ 2020ರಲ್ಲಿ 253 ಕೋಟಿ ಹಾಗೂ 2021ರಲ್ಲಿ 210 ಕೋಟಿ ರೂ. ಆದಾಯ ಗಳಿಸಿದ್ದಾರೆ. ಗಮನಾರ್ಹವೆಂದರೆ ಮೀರಾ ಕುಲಕರ್ಣಿ ಅವರು ಯಶಸ್ವಿ ಮಹಿಳಾ ಉದ್ಯಮಿಯಾಗಿ ಸಾವಿರಾರು ಕೋಟಿ ರೂ.ಗಳ ವಹಿವಾಟು ನಡೆಸುತ್ತಿರಬೇಕಾದರೆ ಅವರ ಛಲ, ಕಠಿಣ ಪರಿಶ್ರಮ ಹಾಗೂ ಉದ್ಯಮದ ಮೇಲಿನ ಅಪಾರ ಶ್ರದ್ಧೆ, ದೃಢ ಚಿತ್ತ ಕಾರಣ ಅಂದರೆ ತಪ್ಪಾಗಲಾರದು.


Click it and Unblock the Notifications