'ನನ್ನ ಬಳಿ ಒಂದು ಕೋಟಿ ಹಣವಿದ್ದರೆ'...ಹಾಗೆ ಮಾಡಬಹುದು, ಹೀಗೆ ಮಾಡಬಹುದು ಎಂದು ಕನಸು ಕಾಣುತ್ತಾ ದುಡ್ಡಿಗಾಗಿ ಹಂಬಲಿಸುವ ಸಾಮಾನ್ಯ ಜನ ನಾವು. ಆದರೆ ಇಲ್ಲೊಬ್ಬರಿಗೆ ಶ್ರೀಮಂತಿಕೆ ಸಮಸ್ಯೆಯಾಗಿದೆ.! ಇವರು ಬೇರೆ ಯಾರು ಅಲ್ಲ ಲೂಮ್‌ನ ಭಾರತೀಯ ಮೂಲದ ಸಹ-ಸಂಸ್ಥಾಪಕ ವಿನಯ್ ಹಿರೇಮಠ್.
33 ವರ್ಷದ ವಿನಯ್ ಹಿರೇಮಠ್ ತಮ್ಮ ಕಂಪನಿಯನ್ನು 2023ರಲ್ಲಿ 975 ಮಿಲಿಯನ್ ಡಾಲರ್ (ಭಾರತೀಯ ರೂಪಾಯಿ 8,368 ಕೋಟಿ )ಗೆ ಅಟ್ಲಾಸಿಯನ್ ಕಂಪನಿಗೆ ಮಾರಾಟ ಮಾಡಿದ್ದು ಅಪಾರ ಸಂಪತ್ತನ್ನು ಗಳಿಸಿದ ನಂತರ ಹಿರೇಮಠ್ ಅನುಭವಿಸಿದ ಅಭದ್ರತೆಯ ಬಗ್ಗೆ ಇತ್ತೀಚೆಗೆ ಬರೆದುಕೊಂಡಿದ್ದಾರೆ. ಪಡೆದ ಸಂಪತ್ತನ್ನು ಏನು ಮಾಡಬೇಕೆಂದು ತಿಳಿದಿರಲಿಲ್ಲ ಎಂದು ವಿವರವಾಗಿ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ವಿನಯ್ ಹಿರೇಮಠ್ ಅವರ ಪ್ರಕರಣವನ್ನು ಜನಸಾಮಾನ್ಯರಾಗಿ ನಾವು "ಶ್ರೀಮಂತರ ಸಮಸ್ಯೆ" ಎಂದು ಕರೆಯುತ್ತೇವೆ ಆದರೆ ಮನೋವಿಜ್ಞಾನಿಗಳು ಇದನ್ನು wealth fatigue syndrome" (ಶ್ರೀಮಂತಿಕೆಯ ಆಯಾಸ ಸಿಂಡ್ರೋಮ್) ಎಂದು ಕರೆಯುತ್ತಾರೆ.

ನಾನು ಶ್ರೀಮಂತ ಆದ್ರೆ ಮುಂದೇನು ಮಾಡಲಿ?
ವಿನಯ್ ಹಿರೇಮಠ್ ಅವರು ತಮ್ಮ ಇತ್ತೀಚಿನ ಬ್ಲಾಗ್‌ನಲ್ಲಿ 'ನಾನು ಶ್ರೀಮಂತ ಮತ್ತು ನನ್ನ ಜೀವನವನ್ನು ಏನು ಮಾಡಬೇಕೆಂದು ತಿಳಿದಿಲ್ಲ' ಎಂಬ ಶೀರ್ಷಿಕೆಯಲ್ಲಿ ತಮ್ಮ ಭಾವನೆಗಳನ್ನು, ಮಾನಸಿಕವಾಗಿ ಅನುಭವಿಸಿದ ತೊಳಲಾಟವನ್ನು ಹಂಚಿಕೊಂಡಿದ್ದಾರೆ.
"ಕಂಪನಿಯನ್ನು ಮಾರಾಟ ಮಾಡಿದ ನಂತರ, ನಾನು ಅನಿರೀಕ್ಷಿತವಾದ ಜೀವನದ ಹಂತವನ್ನು ತಲುಪಿದೆ. ಮುಂದೇನು ಮಾಡಬೇಕು ಎನ್ನುವ ಹುಡುಕಾಟದಲ್ಲಿ ದಿನ ಕಳೆಯುತ್ತಿದ್ದೇನೆ. ನಾನೀಗ ಹಣದ ಬಗ್ಗೆ ಚಿಂತಿಸಬೇಕಾಗಿಲ್ಲದ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಈ ಸ್ವಾತಂತ್ರ್ಯದೊಂದಿಗೆ ಒಂದು ಹೊಸ ಸವಾಲು ಎದುರಾಗಿದೆ - ಜೀವನಕ್ಕೆ ಒಂದು ಸಮರ್ಥವಾದ ಗುರಿಯಿಲ್ಲದಂತಾಗಿದೆ. ನಾನು ಸಂಪೂರ್ಣವಾಗಿ ಸಂಬಂಧವಿಲ್ಲದ ವಿಚಿತ್ರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದೇನೆ. ನಾನೀಗ ನನ್ನ ಕಂಪನಿಗಾಗಿ ಕೆಲಸ ಮಾಡಬೇಕಿಲ್ಲ.
ಅಥವಾ ಹಣ ಸಂಪಾದಿಸಲು , ಕೀರ್ತಿಯನ್ನು ಗಳಿಸಲು ಪ್ರೇರೇಪಿಸುವ ಯಾವುದೇ ಅಂಶಗಳಿಲ್ಲ. ಹಿಂದಿನಂತೆ ಕೆಲಸ ಮಾಡುವ ಅಗತ್ಯವಿಲ್ಲದಿದ್ದರೂ, ನನ್ನನ್ನು ತೊಡಗಿಸಿಕೊಳ್ಳುವ ಮತ್ತು ಸಂತೋಷವನ್ನು ನೀಡುವ ಯಾವುದೇ ಚಟುವಟಿಕೆಯನ್ನು ನಾನು ಕಂಡುಕೊಂಡಿಲ್ಲ. ಜೀವನವು ಮಬ್ಬಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನೀಗ ಜೀವನದ ಬಗ್ಗೆ ಹೆಚ್ಚು ಆಶಾವಾದಿಯಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಜೀವನದಲ್ಲಿ 'ಉದ್ದೇಶದ ಇಲ್ಲದೆ ಇರುವ ಭಾವನೆಗಳು ನನ್ನನ್ನು ಕಾಡತೊಡಗಿತ್ತು. ಕಳೆದ ಮಾರ್ಚ್‌ನಲ್ಲಿ ಅವರು 60 ಮಿಲಿಯನ್ ಡಾಲರ್‌ಗಳ ಪ್ಯಾಕೇಜ್ ಅನ್ನು ನಿರಾಕರಿಸಿದಾಗ ನಂತರದ ತಮ್ಮ ವೃತ್ತಿಜೀವನದ ಬೆಳವಣಿಗೆಯ ಬಗ್ಗೆಯೂ ಅವರು ವಿಚಾರಗಳನ್ನು ಹಂಚಿಕೊಂಡರು. "ಕಳೆದ ಮಾರ್ಚ್‌ನಲ್ಲಿ ನನ್ನ ಜೀವನದೊಂದಿಗೆ ಏನು ಮಾಡಬೇಕೆಂದು ನನಗೆ ತಿಳಿದಿರಲಿಲ್ಲ. ಸ್ವಾಧೀನಪಡಿಸಿಕೊಂಡ ಕಂಪನಿಯಲ್ಲಿ ಉಳಿಯುವುದು ನನಗೆ ಸರಿಯಲ್ಲ ಎಂದು ನನಗೆ ತಿಳಿದಿತ್ತು. ಅದಕ್ಕೆ ನೀವು ಅನುಮಾನಿಸುವ ದೊಡ್ಡ ಕಂಪನಿಯ ಕಾರಣಗಳಿವೆ (ಅಧಿಕ ರಾಜಕೀಯ, ಕೆಲಸಗಳು ನಿಧಾನವಾಗಿ ಸಾಗುತ್ತವೆ, ಅಪರಿಚಿತ ಸಹೋದ್ಯೋಗಿಗಳು, ಇತ್ಯಾದಿ), ಆದರೆ 60 ಮಿಲಿಯನ್ ಡಾಲರ್‌ಗಳ ಪ್ಯಾಕೇಜ್ ಅನ್ನು ಬಿಟ್ಟುಕೊಡುವುದು ನನಗೆ ತುಂಬಾ ಕಷ್ಟಕರವಾಗಿತ್ತು. ನಾನು ಈಗಾಗಲೇ ಏನು ಮಾಡಬೇಕೆಂದು ತಿಳಿಯದಷ್ಟು ಹೆಚ್ಚು ಹಣವನ್ನು ಗಳಿಸಿದ್ದೆ, ಆದರೆ ಈ ರೀತಿಯ ಸಂಖ್ಯೆಗಳನ್ನು ಪರಿಗಣಿಸಲು ಪ್ರಾರಂಭಿಸಿದಾಗ ನಿಮ್ಮ ಮನಸ್ಸು ವಿಚಿತ್ರವಾಗಿ ವರ್ತಿಸುತ್ತದೆ".
ಮತ್ತೊಂದೆಡೆ ಎರಡು ವರ್ಷ ನನ್ನ ಗೆಳತಿ ಜೊತೆ ಪ್ರೀತಿಯಲ್ಲಿದ್ದೆ. ಆದರೆ, ಕೆಲವೊಮ್ಮೆ ಪ್ರೀತಿಯ ಸಂಬಂಧಗಳು ನಿರೀಕ್ಷಿಸಿದಂತೆ ಕೆಲಸ ಮಾಡುವುದಿಲ್ಲ. ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ, ಆದರೆ ನಮ್ಮಿಬ್ಬರಿಗೂ ಒಳ್ಳೆಯದಾಗಲಿ ಎಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಆದರೆ ಬ್ರೇಕ್ಅಪ್ ತೀವ್ರ ನೋವು ತಂದಿದೆ. ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ ಅನ್ನೋದು ನನ್ನ ನಿಲುವು. ನಾನು ಒಳ್ಳೆಯ ಗೆಳೆಯನಾಗಲು ಸಾಧ್ಯವಾಗಲಿಲ್ಲ ಎಂಬುದು ನನ್ನನ್ನು ಬೇಸರಗೊಳಿಸುತ್ತದೆ. ನನ್ನನ್ನು ಕ್ಷಮಿಸು ಎಂದು ಹೇಳಿಕೊಂಡಿದ್ದಾರೆ.
ಹಿರೇಮಠ್ ಇದೀಗ ಹೊಸ ಆಯಾಮಗಳನ್ನು ಅನ್ವೇಷಿಸುತ್ತಿದ್ದಾರೆ. ಹೂಡಿಕೆ ಮತ್ತು ರೋಬೋಟಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಹುಡುಕುತ್ತಿದ್ದಾರೆ. ಆದರೆ, ಅವರು ಅನಿರೀಕ್ಷಿತ ಒಂದು ಸಾಹಸಕ್ಕೆ ಕೂಡ ಕೈ ಹಾಕಿದರು. ಹಿಮಾಲಯದ ಯಾತ್ರೆಗೆ ಹೋದರು. ಆದರೆ, ಅನುಭವದ ಕೊರತೆಯಿಂದಾಗಿ ಆರೋಗ್ಯದ ಸಮಸ್ಯೆ ಎದುರಿಸಿ, ಯಾತ್ರೆಯನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು.
ಈ ನಡುವೆ, ಅವರ ಸ್ನೇಹಿತರು ಅವರಿಗೆ ಎಲೋನ್ ಮಸ್ಕ್ ಮತ್ತು ವಿವೇಕ್ ರಾಮಸ್ವಾಮಿ ಅವರಂತಹ ಗಣ್ಯ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ಸೂಚಿಸಿದರು. ಆದರೆ, ಹಿರೇಮಠ್‌ಗೆ ಅದು ಸರಿ ಹೊಂದುವುದಿಲ್ಲ ಎಂದು ಅರಿವಾಯಿತು ಎಂದು ಹೇಳಿಕೊಂಡಿದ್ದಾರೆ.
ಲೂಮ್ ಎನ್ನುವುದು 2015 ರಲ್ಲಿ ಸ್ಥಾಪನೆಯಾದ ತಂತ್ರಜ್ಞಾನ ಕಂಪನಿಯಾಗಿದ್ದು, ಕೆಲಸಕ್ಕಾಗಿ ವೀಡಿಯೊ ಸಂವಹನ ಸಾಫ್ಟ್‌ವೇರ್ ಅನ್ನು ಒದಗಿಸುತ್ತದೆ. ಈ ಕಂಪನಿಯು ಕ್ಯಾಮೆರಾ ರೆಕಾರ್ಡಿಂಗ್ ಮತ್ತು ಸ್ಕ್ರೀನ್ ರೆಕಾರ್ಡಿಂಗ್, ಟ್ರಾನ್ಸ್‌ಕ್ರಿಪ್ಷನ್, ವೀಡಿಯೊ ಎಡಿಟಿಂಗ್ ಮತ್ತು ಹಂಚಿಕೊಳ್ಳಬಹುದಾದ ಸ್ಕ್ರೀನ್-ರೆಕಾರ್ಡ್ ಮಾಡಿದ ವೀಡಿಯೊ ಲಿಂಕ್‌ಗಳನ್ನು ರಚಿಸುವಂತಹ ತಂತ್ರಜ್ಞಾನಗಳನ್ನು ಒದಗಿಸುತ್ತದೆ. ಫೋರ್ಬ್ಸ್ ಪ್ರಕಾರ, 2022 ರಲ್ಲಿ ಈ ಕಂಪನಿಯ ಮೌಲ್ಯ 1.5 ಬಿಲಿಯನ್ ಡಾಲರ್ ಆಗಿತ್ತು. 2023 ರ ನವೆಂಬರ್ 30 ರಂದು, ಆಸ್ಟ್ರೇಲಿಯಾದ ಸಾಫ್ಟ್‌ವೇರ್ ಕಂಪನಿಯಾದ ಅಟ್ಲಾಸಿಯನ್ ಈ ಕಂಪನಿಯನ್ನು ಖರೀದಿಸಿತು.


Click it and Unblock the Notifications