ಮಧ್ಯಪ್ರಾಚ್ಯದ ಸಂಘರ್ಷ (Middle East War), ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ಅಡಚಣೆ, ಭಾರತದ ವ್ಯಾಪಾರದ ಮೇಲೆ ಭಾರೀ ಪರಿಣಾಮ ಬೀರಿದೆ. ಅತ್ತ ಕಚ್ಚಾ ತೈಲ, ಇಂಧನ ಸಾಗಾಟದಲ್ಲಿ ಅಡಚಣೆ ಉಂಟಾಗಿದ್ದು, ಈ ಪರಿಣಾಮ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ (LPG Cylinder) ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ. ಪಶ್ಚಿಮ ಏಷ್ಯಾ ಸಂಘರ್ಷದಿಂದ ಜಾಗತಿಕ ಇಂಧನ ಬಿಕ್ಕಟ್ಟು ತೀವ್ರಗೊಂಡಿದ್ದರೂ, ಈ ಮಧ್ಯೆ ಕೇಂದ್ರ ಸರ್ಕಾರವು ಗೃಹಬಳಕೆಯ ಎಲ್‌ಪಿಜಿ (LPG) ಪೂರೈಕೆಯನ್ನು ಶೇ. 100% ರಷ್ಟು ಪೂರೈಕೆ ಮಾಡುವುದಾಗಿ ಘೋಷಿಸಿದೆ. ಹಾರ್ಮುಜ್ ಜಲಸಂಧಿಯ ಸ್ಥಗಿತ ಮತ್ತು ಸಾಗಾಟದಲ್ಲಿ ಉಂಟಾದ ಅಡೆತಡೆಗಳಿಂದ ಈ ಬಿಕ್ಕಟ್ಟು ಉಲ್ಬಣಿಸಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ವಿತರಣೆ ಕುರಿತು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಉಂಟಾದ ಆತಂಕ, ಬೇಡಿಕೆಗಳನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಅಕ್ರಮ ದಾಸ್ತಾನು ತಡೆಯುವ ಉದ್ದೇಶದಿಂದ, ಕೇಂದ್ರವು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬುಕಿಂಗ್ ನಡುವಿನ ಕನಿಷ್ಠ ಅಂತರವನ್ನು 21 ರಿಂದ 25 ದಿನಗಳಿಗೆ ಇದೀಗ ಹೆಚ್ಚಿಸಿದೆ. ಜಾಗತಿಕ ಪೂರೈಕೆ ಅಡೆತಡೆಗಳ ವೇಳೆ ಅನಗತ್ಯವಾಗಿ ಸಂಗ್ರಹ ಮಾಡಿಟ್ಟುಕೊಳ್ಳುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.
ಚಿಂತೆ ಬೇಡ, ಎಲ್‌ಪಿಜಿ ಪೂರೈಕೆಯಾಗಲಿದೆ; ಕೇಂದ್ರ ಸರ್ಕಾರ
ಪಶ್ಚಿಮ ಏಷ್ಯಾದಲ್ಲಿ ಆರಂಭವಾದ ಉದ್ವಿಗ್ನತೆಗಳ ಕುರಿತು ಇಂಟರ್-ಮಿನಿಸ್ಟೀರಿಯಲ್ ಸಮಿತಿಯು, "ತಪ್ಪು ಮಾಹಿತಿಗಳಿಂದ ಅಕ್ರಮ ದಾಸ್ತಾನು ಹಾಗೂ ಹಠಾತ್ ಬುಕಿಂಗ್‌ಗಳು ಹೆಚ್ಚಾಗುತ್ತಿದೆ. ಅವಸರದಲ್ಲಿ ಬುಕಿಂಗ್ ಮಾಡುವ ಅಗತ್ಯವಿಲ್ಲ" ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಎಲ್‌ಪಿಜಿ ಸಿಲಿಂಡರ್ ಪೂರೈಕೆಗಾಗಿ ಅಗತ್ಯ ವಸ್ತುಗಳ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಸಮಿತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
ಸಮಿತಿ ಹಂಚಿಕೆ ಮಾಡಿದ ವಿವರಗಳ ಪ್ರಕಾರ, ಗೃಹಬಳಕೆ ಎಲ್‌ಪಿಜಿ ಶೇ. 100% ರಷ್ಟು ಪೂರೈಕೆಯಾಗಲಿದೆ. ಚಹಾ ಕ್ಷೇತ್ರಕ್ಕೆ ಶೇ. 80% ರಷ್ಟು ಪಾಲು ದೊರೆತರೆ, ಪೆಟ್ರೋಲ್ ಹಂಚಿಕೆಯಲ್ಲಿ ಕಡಿತವಿರಲಿದೆ ಎಂದು ಹೇಳಲಾಗಿದೆ. ಇನ್ನು ಶೇ. 60% ರಷ್ಟು ಎಲ್‌ಪಿಜಿ ಆಮದಾಗುತ್ತಿದ್ದು, ಶೇ. 90% ರಷ್ಟು ಹಾರ್ಮುಜ್ ಮೂಲಕ ಬರಲಿದೆ. ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ಶೇ. 25% ರಷ್ಟು ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ.
ಸಚಿವ ಹರ್ದೀಪ್ ಸಿಂಗ್ ಪುರಿ ಭರವಸೆ
33 ಕೋಟಿಗೂ ಅಧಿಕ ಎಲ್‌ಪಿಜಿ ಸಂಪರ್ಕಗಳನ್ನು ಹೊಂದಿರುವ ಭಾರತ, ಸದ್ಯ ಜಾಗತಿಕ ಇಂಧನ ಬಿಕ್ಕಟ್ಟಿನ ಅಪಾಯದಲ್ಲಿವೆ. ಆದರೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಇಂಧನ ಆಮದು "ವಿವಿಧ ಮೂಲಗಳು ಮತ್ತು ಮಾರ್ಗಗಳ" ಮೂಲಕ ನಿರಂತರವಾಗಿ ಪೂರೈಕೆಯಾಗುತ್ತಿದೆ ಎಂದು ಭರವಸೆ ನೀಡಿದ್ದಾರೆ. "ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ನಿರಂತರ ಇಂಧನ ಪೂರೈಕೆಗೆ ನಾವು ಬದ್ಧ" ಎಂದು ಹೇಳಿದ್ದಾರೆ.
ಪರಿಸ್ಥಿತಿಯನ್ನು ಸರ್ಕಾರ ನಿರಂತರ ಪರಿಶೀಲಿಸುತ್ತಲೇ ಇದೆ. ಆದ್ದರಿಂದ "ಆತಂಕ ಪಡುವ ಅಗತ್ಯವಿಲ್ಲ" ಎಂದು ಸಚಿವ ಪುರಿ ಮಂಗಳವಾರ ತಿಳಿಸಿದರು. ಈ ಮೂಲಕ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬಳಕೆದಾರರು ಸದ್ಯ ಆತಂಕ ಪಡುವ ಅಗತ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.


Click it and Unblock the Notifications